ಬಾಂಗ್ಲಾ: ಒಂದೇ ದಿನ ಮತ್ತಿಬ್ಬರು ಹಿಂದುಗಳ ಹತ್ಯೆ ; ಗ್ರೋಸರಿ ವ್ಯಾಪಾರಿ ಮತ್ತು ಹಿಂದು ಪತ್ರಕರ್ತನನ್ನು ಗುಂಡಿಟ್ಟು ಕುತ್ತಿಗೆ ಸೀಳಿ ಹತ್ಯೆ...!!!

ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಕೌರ್ಯ ಮುಂದುವರೆದಿದ್ದು ಸೋಮವಾರ ಒಂದೇ ದಿನ ಇಬ್ಬರು ಹಿಂದು ವ್ಯಕ್ತಿಗಳನ್ನು ಕೊಲ್ಲಲಾಗಿದೆ. ಹಿಂದು ಪತ್ರಕರ್ತ ರಾಣಾ ಪ್ರತಾಪ್ ಬೈರಾಗಿ ಮತ್ತು ಗ್ರೋಸರಿ ವ್ಯಾಪಾರಿ ಸರತ್ ಚಕ್ರವರ್ತಿ ಮಣಿ(40) ಎಂಬವರನ್ನು ಕೊಂದು ಹಾಕಿದ ಘಟನೆ ನಡೆದಿದೆ.
ಪಾಲಾಶ್ ಉಪಜಿಲ್ಲಾ ಚರ್ ಸಿಂದೂರ್ ಮಾರುಕಟ್ಟೆಯಲ್ಲಿ ಸೋಮವಾರ ರಾತ್ರಿ ಎಂದಿನಂತೆ ತನ್ನ ಅಂಗಡಿಯಲ್ಲಿದ್ದ ವೇಳೆ ಮಣಿ ಅವರ ಮೇಲೆ ದುಷ್ಕರ್ಮಿಗಳು ಏಕಾಏಕಿ ಹರಿತ ಆಯುಧಗಳಿಂದ ದಾಳಿ ನಡೆಸಿದ್ದಾರೆ. ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಮೃತರಾಗಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಕೆಲಸದಲ್ಲಿದ್ದ ಮಣಿ ಅವರು ಕೆಲವು ವರ್ಷಗಳ ಹಿಂದೆ ಹಿಂತಿರುಗಿ ಬಂದು ನರಸಿಂಗಡಿ ನಗರದಲ್ಲಿ ಸ್ವಂತ ಮನೆಯನ್ನು ನೆಲೆಸಿದ್ದರು. ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲದ ಮಣಿ ಅವರು, ಡಿ.19ರಂದು ಬಾಂಗ್ಲಾದಲ್ಲಿ ನಡೆಯುತ್ತಿರುವ ಕೋಮು ದ್ವೇಷದ ಕೊಲೆ ಸರಣಿಯ ಬಗ್ಗೆ ಆತಂಕಗೊಂಡು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಎಲ್ಲ ಕಡೆ ಬೆಂಕಿ ಕಾಣಿಸಿಕೊಂಡರೆ, ಹಿಂಸೆಗಳಾದರೆ ನನ್ನ ಹುಟ್ಟಿದ ನೆಲೆ ಸಾವಿನ ಕಣಿವೆಯಾಗಲಿದೆ ಎಂದು ಬರೆದಿದ್ದರು ಎಂದು ಸ್ಥಳೀಯರು ನೆನಪಿಸಿದ್ದಾರೆ.

ಪತ್ರಕರ್ತನಿಗೆ ಗುಂಡಿಟ್ಟು ಕುತ್ತಿಗೆ ಸೀಳಿ ಕೊಲೆ
ಸೋಮವಾರ ಸಂಜೆ ವೇಳೆ, ಜಾಶೋರ್ ಜಿಲ್ಲೆಯ ಮಣಿರಾಂಪುರ್ ಎಂಬಲ್ಲಿ 45 ವರ್ಷದ ಹಿಂದು ಪತ್ರಕರ್ತ ರಾಣಾ ಪ್ರತಾಪ್ ಅವರನ್ನು ತಲೆಗೆ ಗುಂಡಿಟ್ಟು ಬಳಿಕ ಕುತ್ತಿಗೆ ಕೊಯ್ದು ಹತ್ಯೆ ಮಾಡಲಾಗಿದೆ. ಸ್ಥಳೀಯ ಪತ್ರಿಕೆಯೊಂದರ ಸಂಪಾದಕರಾಗಿ ಮತ್ತು ಐಸ್ ಕಾರ್ಖಾನೆ ಒಂದನ್ನು ನಡೆಸುತ್ತಿದ್ದ ರಾಣಾ ಪ್ರತಾಪ್ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿ ಕೊಂದಿದ್ದಾರೆ.
ದುಷ್ಕರ್ಮಿಗಳ ಗುಂಪು ಪ್ರತಾಪ್ ಅವರನ್ನು ಕಾರ್ಖಾನೆಯಿಂದ ಹತ್ತಿರದ ಗಲ್ಲಿಗೆ ಕರೆದೊಯ್ದಿದ್ದು ಅಲ್ಲಿ ತಲೆಗೆ ಹತ್ತಿರದಿಂದ ಗುಂಡು ಹಾರಿಸಿ ಕೊಂದು ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡು ಹಾರಿಸುವ ಮೊದಲು ದಾಳಿಕೋರರು ಪ್ರತಾಪ್ ಜೊತೆ ಸ್ವಲ್ಪ ಸಮಯ ವಾದ ಮಾಡಿದ್ದಾರೆ. ಬಳಿಕ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ.
ಪ್ರತಾಪ್ ಕಳೆದ ಎರಡು ವರ್ಷಗಳಿಂದ ಕೊಪಾಲಿಯಾ ಬಜಾರ್‌ನಲ್ಲಿ ಐಸ್ ಕಾರ್ಖಾನೆಯನ್ನು ನಡೆಸುತ್ತಿದ್ದರು. ಅವರು ನರೈಲ್ ಜಿಲ್ಲೆಯಿಂದ ಪ್ರಕಟವಾಗುವ ದಿನಪತ್ರಿಕೆ ಬಿಡಿ ಖೋಬೋರ್‌ನ ಹಂಗಾಮಿ ಸಂಪಾದಕರೂ ಕೂಡ ಆಗಿದ್ದರು.
ಎರಡು ದಿನಗಳ ಹಿಂದೆ 40 ವರ್ಷದ ಹಿಂದೂ ವಿಧವೆಯೊಬ್ಬರ ಮೇಲೆ ದುಷ್ಕರ್ಮಿಗಳು ಅತ್ಯಾಚಾರಗೈದು ಮರಕ್ಕೆ ಕಟ್ಟಿ ಹಾಕಿ ತಲೆಯನ್ನು ಬೋಳಿಸಿದ ಘಟನೆ ನಡೆದಿತ್ತು. ಕಳೆದ ಒಂದು ತಿಂಗಳ ಅವಧಿಯಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಯಲ್ಲಿ ಆರು ಮಂದಿ ಹಿಂದುಗಳು ಹತ್ಯೆಯಾಗಿದ್ದಾರೆ.