ಹರಿಯಾಣ :ಪನೀರ್ ನೀರಿನಿಂದ ಪೌಷ್ಟಿಕಾಂಶಯುಕ್ತ ವೇ ಕೆಫೀರ್ ಅಭಿವೃದ್ಧಿ; ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಪ್ರಯೋಜನಕಾರಿ ಎಂದ ತಜ್ಞರು...!!!
ಹಿಸಾರ್: ಹಿಸಾರ್‌ನಲ್ಲಿರುವ ಲಾಲಾ ಲಜಪತ್ ರಾಯ್ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ (LUVAS) ವಿಜ್ಞಾನಿಗಳು, ಪನೀರ್ (ಕಾಟೇಜ್ ಚೀಸ್) ತಯಾರಿಸುವಾಗ ಉಳಿದ ನೀರನ್ನು (ಹಾಲೊಡಕು ನೀರು) ಬಳಸಿಕೊಂಡು ಪೌಷ್ಟಿಕಾಂಶದ 'ವೇ ಕೆಫೀರ್' ಎಂಬ ಆರೋಗ್ಯಕರ ಪಾನೀಯ ಅಭಿವೃದ್ಧಿಪಡಿಸಿದ್ದಾರೆ. ಸೂಪರ್ ಹೆಲ್ತ್ ಡ್ರಿಂಕ್ ಇದಾಗಿದ್ದು, ಇದು ಬಿಪಿ, ಹೃದ್ರೋಗಿಗಳು, ಮಕ್ಕಳು ಹಾಗೂ ಯುವಕರಿಗೆ ವರದಾನವಾಗಲಿದೆ ಎಂದು ಕಾಲೇಜಿನ ವಿಜ್ಞಾನಿಗಳು 'ವೇ ಕೆಫೀರ್' ಬಗ್ಗೆ ಕೆಲವು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಟೇಜ್ ಚೀಸ್ ಉತ್ಪಾದನೆ ನಂತರ ಉಳಿದಿರುವ ನೀರು ಮತ್ತು ತ್ಯಾಜ್ಯವನ್ನು ಸಾಮಾನ್ಯವಾಗಿ ಚೆಲ್ಲಲಾಗುತ್ತದೆ. ಆದರೆ, LUVAS ವಿಜ್ಞಾನಿಗಳು ಅದರಿಂದ ವಿಶಿಷ್ಟವಾದ ಆರೋಗ್ಯ ಪಾನೀಯ ಅಭಿವೃದ್ಧಿಪಡಿಸುವ ಮೂಲಕ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ವಿಶ್ವವಿದ್ಯಾಲಯದ ಇನ್‌ಕ್ಯುಬೇಶನ್ ಸೆಂಟರ್ ಈ ಪಾನೀಯವನ್ನು ಮಾರುಕಟ್ಟೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಜ್ಞಾನಿಗಳ ಪ್ರಮುಖ ಸಂಶೋಧನೆ: ಈ ಬಗ್ಗೆ, ಡೈರಿ ತಂತ್ರಜ್ಞಾನ ಕಾಲೇಜಿನ ವಿಜ್ಞಾನಿ ಡಾ. ತೇಜೇಂದ್ರಪಾಲ್ ಸಿಂಗ್ ಮಾತನಾಡಿ, "ಮನೆಯಲ್ಲಿ ಮತ್ತು ಮಿಠಾಯಿ ತಯಾರಕರು ಉತ್ಪಾದಿಸುವ ಕಾಟೇಜ್ ಚೀಸ್ ಹೆಚ್ಚಿನ ಪ್ರಮಾಣದ ದ್ರವವನ್ನು ಬಿಡುಗಡೆ ಮಾಡುತ್ತದೆ. ಇದು ಎಲ್ಲರಿಗೂ ಗೊತ್ತಿರುವ. ಆದರೆ, ತಯಾರಿಸುವಾಗ ಉಳಿದ ನೀರನ್ನು ಹೊರಗಡೆ ಎಸೆಯಲಾಗುತ್ತದೆ. ಹೀಗೆ ಎಸೆಯುವುದರಿಂದ ಇದು ಪರಿಸರಕ್ಕೂ ಅಪಾಯ ತಂದೊಡ್ಡುತ್ತದೆ. ಈ ಹಾಲೊಡಕು ನೀರು ಪ್ರೋಟೀನ್, ಖನಿಜಗಳು ಮತ್ತು ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದರೆ, ಇಲ್ಲಿಯವರೆಗೆ ಇವು ವ್ಯರ್ಥವಾಗುತ್ತಿದ್ದವು. ಕೆಲವು ದೊಡ್ಡ ಕಂಪನಿಗಳು ಇದನ್ನು ಪುಡಿಯಾಗಿ ಪರಿವರ್ತಿಸುತ್ತವೆ. ಆದರೆ, ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವಿನೋದ್ ವರ್ಮಾ ಅವರ ಮಾರ್ಗದರ್ಶನದಲ್ಲಿ ಅದರಿಂದ ಪೌಷ್ಟಿಕ ಆರೋಗ್ಯ ಪಾನೀಯವನ್ನು ತಯಾರಿಸಿದೆ. ಇದು ಪರಿಸರ ಸಂರಕ್ಷಣೆಗೆ ಸಹಾಯ ಮಾಡುವುದಲ್ಲದೇ, ರೈತರು ಮತ್ತು ಡೈರಿ ಉದ್ಯಮಕ್ಕೆ ಹೊಸ ಆಶಾ ಕಿರಣವಾಗಿದೆ" ಎಂದು ಹೇಳಿದ್ದಾರೆ.
ರೋಗಿಗಳಿಗೆ ಪ್ರಯೋಜನಕಾರಿ: ಈ ಪಾನೀಯವನ್ನು ಕಡಿಮೆ ಕೊಬ್ಬು, ಕಡಿಮೆ ಕ್ಯಾಲೋರಿ ಮತ್ತು ಸೋಡಿಯಂ - ಮುಕ್ತ ಸೂತ್ರದೊಂದಿಗೆ ರೂಪಿಸಲಾಗಿದೆ. ಈ ಹಾಲೊಡಕು ನೀರು ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಪ್ರಿಬಯಾಟಿಕ್ ಹೊಂದಿದ್ದು, ಶಕ್ತಿಯನ್ನು ಒದಗಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿಪಿ ಮತ್ತು ಹೃದಯ ರೋಗಿಗಳು ಇದನ್ನು ಸುರಕ್ಷಿತವಾಗಿ ಸೇವಿಸಬಹುದು. ಇದರ ಸಕ್ಕರೆ ಅಂಶವು ನಿಯಂತ್ರಿಸಲ್ಪಡುವುದರಿಂದ ಇದು ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿದೆ. ಇದು ಯುವ ಜಿಮ್‌ಗೆ ಹೋಗುವವರಿಗೂ ಸೂಕ್ತವಾಗಿದೆ. ಏಕೆಂದರೆ ಇದು ಸ್ನಾಯುಗಳ ಚೇತರಿಕೆಗೆ ಸಹಾಯ ಮಾಡುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಹೃದಯ, ರಕ್ತದೊತ್ತಡ, ಮಧುಮೇಹ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಮಕ್ಕಳಿಗೆ ಈ ಪಾನೀಯವು ಅತ್ಯಂತ ಪ್ರಯೋಜನಕಾರಿ ಎಂದು ಡಾ. ಸಿಂಗ್ ಹೇಳಿದ್ದಾರೆ.
ಈ ಪಾನೀಯವು ಹಲವು ರುಚಿಗಳಲ್ಲಿ ಲಭ್ಯ: ವೇ ಕೆಫೀರ್ ಅನ್ನು ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ಗುಣಮಟ್ಟ ಮತ್ತು ಸುರಕ್ಷತೆಯನ್ನು ಸಾಬೀತುಪಡಿಸಿದ ನಂತರ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು ಸಹ ಪ್ರಮಾಣೀಕರಿಸಿದೆ. ಪ್ರಸ್ತುತ, ಇದು ಲಿಚಿ ಪರಿಮಳದಲ್ಲಿ ಲಭ್ಯವಿದೆ. ಮಾವು ಮತ್ತು ಸೇಬಿನ ರುಚಿಗಳ ಮೇಲೆಯೂ ಹೇಗೆ ಕೆಲಸ ಮಾಡಬಲ್ಲದು ಎಂಬುದರ ಅಧ್ಯಯನ ನಡೆಯುತ್ತಿದೆ. ಈ ಪಾನೀಯವು ರುಚಿಕರವಾಗಿರುವುದರಿಂದ ಹಾಲು ಕುಡಿಯದ ಮಕ್ಕಳಿಗೆ ಇದು ಸೂಕ್ತವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ವಿಶ್ವವಿದ್ಯಾಲಯದ ಡಾ. ಯಶ್ಪಾಲ್ ಸಿಂಗ್.
ಒಪ್ಪಂದ ಕಾರ್ಯದಲ್ಲಿದ್ದು, ಶೀಘ್ರದಲ್ಲೇ ಆರಂಭ: LUVAS ತಂತ್ರಜ್ಞಾನ ಇನ್ಕ್ಯುಬೇಷನ್ ಕೇಂದ್ರವು ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಈ ಪಾನೀಯವನ್ನು ಮಾರುಕಟ್ಟೆಗೆ ತರಲು ಈಗಾಗಲೇ ಸಿದ್ಧತೆ ಕೂಡ ನಡೆಸಿದೆ. ಹಲವು ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿವೆ. ನಮ್ಮೊಂದಿಗೆ ಕೈಜೋಡಿಸುವ ಕಂಪನಿಗಳು LUVAS ಇಲಾಖೆ ಸಂಪರ್ಕಿಸಬಹುದು ಎಂದು ತಿಳಿಸಿರುವ ವಿಶ್ವವಿದ್ಯಾಲಯವು, ಈ ಯೋಜನೆಯು ಡೈರಿ ವಲಯದಲ್ಲಿ ಹೊಸ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಸಹ ಒದಗಿಸುತ್ತದೆ ಎಂದಿದೆ.
ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಪ್ರಯೋಜನಕಾರಿ: ಹಾಲು ಕುಡಿಯದ ಮಕ್ಕಳಿಗೆ ಇದು ಅತ್ಯುತ್ತಮ ಪರ್ಯಾಯವಾಗಿದೆ. ಯುವಜನರಿಗೆ, ಇದು ಸ್ನಾಯು ಚೇತರಿಕೆಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಬಲ್ಲದು. ವಯಸ್ಸಾದವರಿಗೆ ಇದು ಜೀರ್ಣಿಸಿಕೊಳ್ಳಲು ಸುಲಭ ಮತ್ತು ಆರೋಗ್ಯಕರ ಪಾನೀಯವಾಗಿದೆ. ಒಂದು ವರ್ಷದ ಸಂಶೋಧನೆಯ ನಂತರ ಅಭಿವೃದ್ಧಿಪಡಿಸಲಾದ ಈ ಉತ್ಪನ್ನವು ದೇಶಾದ್ಯಂತ ಡೈರಿ ನಾವೀನ್ಯತೆಗೆ ಉದಾಹರಣೆಯಾಗಿ ಕಾರ್ಯನಿರ್ವಹಿಸಬಹುದು. ಈ ಪಾನೀಯವು ಪೌಷ್ಠಿಕಾಂಶದ ಉತ್ತಮ ಮೂಲ ಮಾತ್ರವಲ್ಲದೆ ಡೈರಿ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಆರೋಗ್ಯ ಎರಡಕ್ಕೂ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.