ಕೊಪ್ಪಳ: ಪ್ರಿ ವೆಡ್ಡಿಂಗ್ ಶೂಟ್ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ  ಲಾರಿ ಡಿಕ್ಕಿ ; ಇನ್ನೆರಡೇ ವಾರದಲ್ಲಿ ಮದುವೆಯಾಗಬೇಕಿದ್ದ ಜೋಡಿ ಭೀಕರ ರಸ್ತೆ ಅಪಘಾತಕ್ಕೆ ಬಲಿ..!!!

ಕೊಪ್ಪಳ: ಪ್ರಿ ವೆಡ್ಡಿಂಗ್ ಶೂಟ್ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಲಾರಿ ಡಿಕ್ಕಿ ; ಇನ್ನೆರಡೇ ವಾರದಲ್ಲಿ ಮದುವೆಯಾಗಬೇಕಿದ್ದ ಜೋಡಿ ಭೀಕರ ರಸ್ತೆ ಅಪಘಾತಕ್ಕೆ ಬಲಿ..!!!

ಗಂಗಾವತಿ : ಪ್ರಿ ವೆಡ್ಡಿಂಗ್ ಶೂಟಿಂಗ್‌ ಮುಗಿಸಿ ಬೈಕ್‌ನಲ್ಲಿ ವಾಪಸ್ ಬರುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಯುವತಿ ಮತ್ತು ಯುವಕ ಸಾವನ್ನಪ್ಪಿದ ದಾರುಣ ಘಟನೆ ಗಂಗಾವತಿ ತಾಲ್ಲೂಕಿನ ದಾಸನಾಳ ಸಮೀಪದ ಬಂಡ್ರಾಳ್-ವೆಂಕಟಗಿರಿ ಕ್ರಾಸ್ ಬಳಿ ಸಂಭವಿಸಿದೆ. 

ಮೃತರನ್ನು ಕೊಪ್ಪಳ ತಾಲ್ಲೂಕಿನ ಇರಕಲ್‌ಗಡಾದ ನಿವಾಸಿ ಕರಿಯಪ್ಪ ಮಡಿವಾಳ್ ಹನುಮನಹಟ್ಟಿ (26) ಹಾಗೂ ಕವಿತಾ ಪಾವಾಡೆಪ್ಪ ಮಡಿವಾಳ (19) ಎಂದು ಗುರುತಿಸಲಾಗಿದೆ.

ಕಾರಟಗಿ ತಾಲ್ಲೂಕಿನ ಮುಸ್ಟೂರು ಗ್ರಾಮದವರಾದ ಕವಿತಾ ಮತ್ತು ಇರಕಲ್‌ಗಡಾದ ಕರಿಯಪ್ಪ ಮಡಿವಾಳ ಅವರ ನಿಶ್ಚಿತಾರ್ಥ ಐದು ತಿಂಗಳ ಹಿಂದೆ ನಡೆದಿತ್ತು. ಡಿಸೆಂಬರ್ 21ರಂದು ಮದುವೆ ನಿಗದಿಯಾಗಿತ್ತು. ಇನ್ನೆರಡು ವಾರದಲ್ಲಿ ಮದುವೆಯಾಗಬೇಕಿದ್ದ ಜೋಡಿ, ಪ್ರಿ ವೆಡ್ಡಿಂಗ್ ಶೂಟಿಂಗ್‌ಗಾಗಿ ಇಂದು ಬೆಳಗ್ಗೆ ಮನೆಯಿಂದ ಹೊರಟಿದ್ದರು. ಹೊಸಪೇಟೆಯ ಪಂಪಾವನ, ಮುನಿರಾಬಾದಿನ ಜಲಾಶಯ ಸೇರಿದಂತೆ ವಿವಿಧೆಡೆ ಸುತ್ತಾಡಿದ್ದರು. ಸಂಜೆಯಾಗುತ್ತಿದ್ದಂತೆ ಕವಿತಾ ಅವರನ್ನು ಮನೆಗೆ ಬಿಟ್ಟು ಬರಲು ಕರಿಯಪ್ಪ ತನ್ನ ದ್ವಿಚಕ್ರ ವಾಹನದಲ್ಲಿ ಗಂಗಾವತಿಗೆ ಹೋಗುತ್ತಿದ್ದರು. ಈ ವೇಳೆ, ವೆಂಕಟಗಿರಿಯ ಕಲ್ಲಿನ ಕ್ವಾರಿಯಿಂದ ವೇಗವಾಗಿ ಬರುತ್ತಿದ್ದ ಲಾರಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಮೇಲೆ ಹರಿದಿದೆ. ಪರಿಣಾಮ, ಯುವತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಯುವಕನನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರೂ ಮೃತಪಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article