ಪಡುಬಿದ್ರಿ: ಪಡುಬಿದ್ರಿಯಲ್ಲಿ ಮತ್ತೊಂದು ಅಪಘಾತ, ಕಾಂಕ್ರೀಟ್ ಕೆಲಸಕ್ಕೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಟೆಂಪೋ ಪಲ್ಟಿ ; ಮಹಿಳೆ ಸಾವು..!!

ಪಡುಬಿದ್ರಿ : ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋ ಟಯರ್ ಸ್ಫೋಟಗೊಂಡು ಮಗುಚಿ ಬಿದ್ದು ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ಗುರುವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ, ಮಹಂತೇಶ್ ಸಹಿತ ಏಳು ಜನರು ಗಾಯಗೊಂಡಿದ್ದಾರೆ. ಮುಲ್ಕಿಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟೆಂಪೋದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಮತ್ತು ಪರಿಕರಗಳ ಸಹಿತ ಪುರುಷರು ಮತ್ತು ಮಹಿಳಾ ಕಾರ್ಮಿಕರಿದ್ದರು. ವಾಹನದ ಟಯರ್ ಏಕಾಏಕಿ ಸ್ಫೋಟಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದಿದೆ.
ಮಗುಚಿ ಬಿದ್ದ ಟೆಂಪೋದ ಅಡಿಯಲ್ಲಿ ಹಲವಾರು ಮಂದಿ ಸಿಲುಕಿದ್ದು, ಅವರನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆಯಲಾಯಿತು. ಒಬ್ಬ ಮಹಿಳೆ ಯಂತ್ರದ ಅಡಿಗೆ ಸಿಲುಕಿದ್ದು ಅವರನ್ನು ಹೊರತೆಗೆಯಲು ಹರಸಾಹಸಪಟ್ಟರು. ಹೆಜಮಾಡಿ ಟೋಲ್ ಅಂಬುಲೆನ್ಸ್ ಮತ್ತು ಕ್ರೇನ್ ತಕ್ಷಣ ಆಗಮಿಸಿ ಮಹಿಳೆಯನ್ನು ಹೊರ ತೆಗೆದಿದ್ದು ತೀವ್ರ ಗಾಯಗೊಂಡಿದ್ದ ಅವರನ್ನು ಟೋಲ್ ಅಂಬುಲೆನ್ಸ್ ಮೂಲಕ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಡುಬಿದ್ರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ