ಮಂಗಳೂರು :ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇಸು ; ಸಂಪ್ರದಾಯ ನೆಪದಲ್ಲಿ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ್ದ ಅಶೋಕ ರೈ, ದುಷ್ಪ್ರೇರಣೆ, ಕಾನೂನು ಬಾಹಿರ ಕೃತ್ಯವೆಂದು ಪ್ರಕರಣ ದಾಖಲು..!!!

ಮಂಗಳೂರು : ವಿಟ್ಲ ಸಮೀಪದ ಕೇಪು ಉಳ್ಳಾಲ್ತಿಯ ವಾರ್ಷಿಕ ಉತ್ಸವ ನೆಪದಲ್ಲಿ ಕೋಳಿ ಅಂಕ ನಡೆಸುವಂತೆ ಹೇಳಿ ಪೊಲೀಸರ ಕ್ರಮಕ್ಕೆ ವಿರುದ್ಧವಾಗಿ ನಿಂತ ಪುತ್ತೂರು ಶಾಸಕ ಅಶೋಕ್ ರೈ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಪು ಜಾತ್ರೆಯ ನಿಮಿತ್ತ ಪ್ರತಿ ವರ್ಷ ಜೂಜು ರಹಿತ ಕೋಳಿ ಅಂಕ ನಡೆಯುತ್ತದೆ, ಜನರ ಭಾವನೆಗೆ ಸ್ಪಂದಿಸಿ ಕೋಳಿ ಅಂಕಕ್ಕೆ ಅವಕಾಶ ನೀಡಬೇಕು ಎಂದು ಹೇಳಿ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರಿಗೆ ಕೆಲಸಕ್ಕೆ ಶಾಸಕ ಅಶೋಕ ರೈ ಅಡ್ಡಿಪಡಿಸಿದ್ದರು. ಆದರೆ ಅದಕ್ಕೂ ಮೊದಲೇ ಪೊಲೀಸರು 16 ಜನರನ್ನು ವಶಕ್ಕೆ ಪಡೆದು 22 ಕೋಳಿಗಳನ್ನೂ ವಶಪಡಿಸಿದ್ದರು.
ಇದರಂತೆ, ಮುರಲೀಧರ ರೈ ಎಂಬವರು ತಮ್ಮ ಜಾಗದಲ್ಲಿ ಯಾವುದೇ ಪರವಾನಿಗೆ ಪಡೆಯದೇ ಕಾನೂನು ಬಾಹಿರ ಕೃತ್ಯಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮತ್ತು ಕಾನೂನು ಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ ರೈ ವಿರುದ್ಧ ಹಾಗೂ 16 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ 189-2, 49, 221, 190 ಅಡಿ ಪ್ರಾಣಿಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಕೇಪು ಜಾತ್ರೆಯಲ್ಲಿ ಕೋಳಿ ಅಂಕ ನಡೆಸುವುದಕ್ಕೆ ಪೊಲೀಸರು ಅಡ್ಡಪಡಿಸಿದ್ದಾರೆಂದು ಸಾರ್ವಜನಿಕರ ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಅಶೋಕ್ ರೈ, ಇಲ್ಲಿ ಜೂಜು ರಹಿತ ಕೋಳಿ ಅಂಕ ನಡೆಸುವುದು ಹಿಂದಿನಿಂದ ಬಂದ ಸಂಪ್ರದಾಯ. ಪೊಲೀಸರು ಕೇಸು ಮಾಡುವುದಕ್ಕೆ ಇಲ್ಲೇನೂ ಜೂಜು ಇಲ್ಲ, ಹಾಗೆ ನೋಡಿದರೆ ಕ್ರಿಕೆಟ್ ಬೆಟ್ಟಿಂಗ್ ಮಾಡಲ್ವಾ.. ಎಂದು ಸ್ಥಳದಲ್ಲಿದ್ದ ವಿಟ್ಲ ಎಸ್ಐಯನ್ನು ಪ್ರಶ್ನಿಸಿದ್ದರು.
ಪೊಲೀಸರು ಪ್ರಾಣಿ ಹಿಂಸೆ ಮಾಡ್ತೀರಿ ಎಂದಾಗ, ಕೋಳಿ ಅಂಕ ಪ್ರಾಣಿ ಹಿಂಸೆ ಕಾಯ್ದೆಯಡಿ ಬರಲ್ಲ ಎಂದು ಶಾಸಕ ಅಶೋಕ್ ರೈ ವಾದಿಸಿದ್ದರು. ಪೊಲೀಸರು ಇರುವಾಗಲೇ ಕೋಳಿ ಕಟ್ಟಿ, ಯಾವುದೇ ಭಯ ಬೇಡ. ಇವತ್ತು ಒಂದು ದಿನ ಕೋಳಿ ಕಟ್ಟಿ ಎಂದು ಹೇಳಿ ಅಲ್ಲಿಯೇ ಒಂದಷ್ಟು ಹೊತ್ತು ಕುಳಿತಿದ್ದರು. ಆನಂತರ, ಸಂಜೆಯ ವೇಳೆಗೆ ಸ್ಥಳಕ್ಕೆ ಬಂದು ಕೋಳಿ ಅಂಕ ಇಲ್ಲಿಗೆ ಸಾಕು, ಮತ್ತೆ ಪೊಲೀಸರು ಬಂದರೆ ನಾನು ಜನ ಅಲ್ಲ ಎಂದು ಹೇಳಿ ಚಟಾಕಿ ಹಾರಿಸಿದ್ದರು.