ಬಳ್ಳಾರಿ :ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಂಟನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ ಹಿಮಬಿಂದು! ಏನಿದು ಅಚ್ಚರಿ ವಿದ್ಯೆ?

ಬಳ್ಳಾರಿ: ನಗರದ ಕುರವಳ್ಳಿ ತಿಮ್ಮಪ್ಪ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸಮಾಜ ವಿಜ್ಞಾನ ಪರೀಕ್ಷೆ ಬರೆದು ಅಚ್ಚರಿ ಮೂಡಿಸಿದ್ದಾಳೆ.
ಇದೀಗ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಈ ವಿದ್ಯಾರ್ಥಿನಿ ಕಣ್ಣಿಗೆ ಬಟ್ಟೆ ಕಟ್ಟಿ ಪರೀಕ್ಷೆ ಬರೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ಕುರಿತು ವಿದ್ಯಾರ್ಥಿನಿ ಹಿಮಬಿಂದು ಮಾತನಾಡಿದ್ದು, ಚಿಕ್ಕ ವಯಸ್ಸಿನಿಂದಲೇ ಗಾಂಧಾರಿ ವಿದ್ಯೆ ಅಭ್ಯಾಸ ಮಾಡುತ್ತಿದ್ದೇನೆ. ಶಿಕ್ಷಕರು ಮತ್ತು ಪೋಷಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಗಾಂಧಾರಿ ವಿದ್ಯೆಯ ಮೂಲಕ ಒಳಗಿನ ಮೂರನೇ ಕಣ್ಣಿನ ಶಕ್ತಿಯಿಂದ ಪರೀಕ್ಷೆ ಬರೆದಿದ್ದೇನೆ ಎಂದಿದ್ದಾಳೆ.
ಕಣ್ಣು ಮುಚ್ಚಿಕೊಂಡು ಮೊಬೈಲ್‌ನಲ್ಲಿರುವ ಅಕ್ಷರಗಳನ್ನು ತಕ್ಷಣ ಹೇಳುತ್ತಾಳೆ. ಹನ್ನೊಂದು ವರ್ಷದವಳಿದ್ದಾಗಿನಿಂದಲೇ ಗಾಂಧಾರಿ ವಿದ್ಯೆ ಕರಗತ ಮಾಡಿಕೊಂಡಿರುವ ವಿದ್ಯಾರ್ಥಿನಿ ಎಂಟನೇ ತರಗತಿಯ ಎಲ್ಲಾ ಪರೀಕ್ಷೆಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಯೇ ಬರೆಯಲು ನಿರ್ಧರಿಸಿದ್ದಾಳೆ.
ನಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬರೆಯುವ ಅಭ್ಯಾಸವನ್ನು ಚಿಕ್ಕ ವಯಸ್ಸಿನಿಂದಲೇ ರೂಢಿಸಿಕೊಂಡಿದ್ದೇನೆ. ಪರೀಕ್ಷೆ ಬರೆಯುವ ಮೊದಲು ಒಂದು ಗೌಪ್ಯವಾದ ಮಂತ್ರ ಹೇಳುತ್ತೇನೆ. ಅದನ್ನು ಯಾರಿಗೂ ನಾನು ಹೇಳುವುದಿಲ್ಲ. ಒಟ್ಟು 25 ಕಾರ್ಯಕ್ರಮಗಳಲ್ಲಿ ಪ್ರಶಸ್ತಿ ಪಡೆದಿದ್ದೇನೆ. ಈ ವಿದ್ಯೆಯನ್ನು ಗುರುಗಳು ಕಲಿಸಿದ್ದು, ಮೂರನೇ ಕಣ್ಣಿನಲ್ಲಿ ಎಲ್ಲವೂ ನನಗೆ ತಿಳಿಯುತ್ತದೆ. ಅದಕ್ಕಾಗಿ ಒಂದು ಪ್ರಾಣಾಯಾಮ ಹೇಳಿಕೊಟ್ಟಿದ್ದಾರೆ ಎಂದು ವಿದ್ಯಾರ್ಥಿನಿ ಹಿಮಬಿಂದು ಹೇಳಿದ್ದಾಳೆ.
ಹಿಮಬಿಂದು ಒಂದನೇ ತರಗತಿಯಿಂದಲೇ ಈ ಅಭ್ಯಾಸ ಮಾಡಿಕೊಂಡಿದ್ದಾಳೆ. ಆನ್‌ಲೈನ್ ಕ್ಲಾಸ್‌ನಲ್ಲಿ ಇದರ ತರಬೇತಿ ಪಡೆದಿದ್ದಾಳೆ ಎಂದು ವಿದ್ಯಾರ್ಥಿನಿಯ ತಂದೆ ರಾಮಾಂಜನೇಯ ರೆಡ್ಡಿ ಹೇಳಿದ್ದಾರೆ.
ವಿದ್ಯಾರ್ಥಿನಿ 8ನೇ ತರಗತಿ ಆಗಿರುವ ಕಾರಣ ಶಾಲಾ ಆಡಳಿತ ಮಂಡಳಿ ಕಣ್ಣಿಗೆ ಬಟ್ಟೆಕಟ್ಟಿ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ಆದರೆ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿಯಂತಹ ಬೋರ್ಡ್ ಪರೀಕ್ಷೆಗಳನ್ನು ಹೀಗೆ ಬರೆಯಲು ಅವಕಾಶ ಇರುವುದಿಲ್ಲ.