ಮಂಗಳೂರು: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ ; ಅನುಮಾನದಲ್ಲಿ ಪೊಲೀಸರಿಗೆ ತಿಳಿಸಿದ್ದ ಬ್ಯಾಂಕ್ ಸಿಬಂದಿ, ವಂಚನಾ ಜಾಲಕ್ಕೆ ಅರ್ಧದಲ್ಲೇ ತಡೆ...!!!

ಮಂಗಳೂರು: ನಗರದಲ್ಲಿ 51 ವರ್ಷದ ಬ್ಯಾಂಕ್ ಗ್ರಾಹಕರೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿದ್ದು, ವಂಚಕರಿಗೆ 6 ಲಕ್ಷ ರೂಪಾಯಿ ವರ್ಗಾವಣೆಗೆ ಪ್ರಯತ್ನ ಪಡುತ್ತಿದ್ದಾಗಲೇ ಬ್ಯಾಂಕ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಸೈಬರ್ ವಂಚನೆಯ ಸುಳಿವು ಪಡೆದು ಹಣ ವರ್ಗಾವಣೆಯಾಗದಂತೆ ತಡೆದಿದ್ದಾರೆ.
ಎರಡು ಮೂರು ದಿನಗಳಿಂದ ಕೆಲವು ಖಾತೆಗಳಿಗೆ ಹಣ ಠೇವಣಿ ಮಾಡಲು ಬರುತ್ತಿದ್ದ ಗ್ರಾಹಕನ ಬಗ್ಗೆ ನಗರದ ಕೆನರಾ ಬ್ಯಾಂಕ್ ಅಧಿಕಾರಿಗಳು ಗಮನಿಸಿ, ಸೆನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗ್ರಾಹಕನ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆ ವ್ಯಕ್ತಿಯನ್ನು ವಿಚಾರಿಸಿದಾಗ ಸೈಬರ್ ವಂಚನೆಗೆ ಒಳಪಟ್ಟು ಅಂದಾಜು 22 ಲಕ್ಷ ರೂ.ಗಳಿಗೂ ಅಧಿಕ ಹಣ ಕಳೆದುಕೊಂಡಿರುವುದು ಕಂಡುಬಂದಿತ್ತು. ಶನಿವಾರ ಮತ್ತೆ ಸುಮಾರು 6 ಲಕ್ಷ ರೂ.ಗಳನ್ನು ಠೇವಣಿ ಮಾಡಲು ಬ್ಯಾಂಕ್ ಶಾಖೆಗೆ ಸಂತ್ರಸ್ತ ವ್ಯಕ್ತಿ ಭೇಟಿ ನೀಡಿದ್ದರು. ಈ ಸಂದರ್ಭ ಪೊಲೀಸ್ ಅಧಿಕಾರಿಗಳು ಹಣ ಠೇವಣಿ ಮಾಡದಂತೆ ಸಂತ್ರಸ್ತ ಗ್ರಾಹಕನಿಗೆ ಜಾಗೃತಿ ಮೂಡಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಕಮಿಷನರ್ ಸುಧೀರ್ ರೆಡ್ಡಿ ಪ್ರತಿಕ್ರಿಯಿಸಿ, ನಾವು ಇತ್ತೀಚೆಗೆ ಬ್ಯಾಂಕರ್ ಗಳ ಸಭೆಯನ್ನು ಕರೆದು, ಸಂಭಾವ್ಯ ಸೈಬರ್ ವಂಚನೆಗಳನ್ನು ಗುರುತಿಸಲು ಮತ್ತು ಗ್ರಾಹಕರನ್ನು ರಕ್ಷಿಸಲು ತಮ್ಮ ಬ್ಯಾಂಕ್‌ಗಳಲ್ಲಿ ಗ್ರಾಹಕರಿಂದ ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ನಿಗಾ ಇರಿಸುವಂತೆ ಕೇಳಿಕೊಂಡಿದ್ದೆವು. ಅದರಂತೆ ಕೆನರಾ ಬ್ಯಾಂಕ್‌ನ ಅಧಿಕಾರಿಗಳು ಅನುಮಾನದಲ್ಲಿ ಮಾಹಿತಿ ನೀಡಿದ್ದು ಸೈಬರ್ ವಂಚನೆಗೆ ಒಳಗಾಗಿದ್ದ ಗ್ರಾಹಕರೊಬ್ಬರು ಮತ್ತಷ್ಟು ಹಣ ಕಳಕೊಳ್ಳುವುದರಿಂದ ರಕ್ಷಿಸಲಾಗಿದೆ. ಪ್ರಕರಣದ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದಿದ್ದಾರೆ.