ಮಂಗಳೂರು :ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸುಡಾನ್ ಮೂಲದ ಪ್ರಜೆ, ಬೆಂಗಳೂರಿನ ಮಹಿಳೆ ಸೇರಿ ಐವರಿಗೆ 13-14 ವರ್ಷಗಳ ಕಠಿಣ ಶಿಕ್ಷೆ, ಮಂಗಳೂರಿನ ಜಿಲ್ಲಾ ನ್ಯಾಯಾಲಯ ತೀರ್ಪು...!!!

ಮಂಗಳೂರು : ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಎಂಡಿಎಂಎ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲದಲ್ಲಿ ಎರಡು ವರ್ಷಗಳ ಹಿಂದೆ ಬಂಧಿತರಾಗಿದ್ದ ಐವರು ಡ್ರಗ್ ಪೆಡ್ಲರ್ ಗಳಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 14 ವರ್ಷಗಳ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಸುಡಾನ್ ಮೂಲದ ಪ್ರಜೆ, ಬೆಂಗಳೂರು ಗುಂಟೂರು ಪಾಳ್ಯದಲ್ಲಿ ನೆಲೆಸಿದ್ದ ಲೂವಾ ಡೇನಿಯಲ್ ಜಸ್ಟಿನ್ ಬೌಲೋಗೆ 12 ವರ್ಷಗಳ ಕಠಿಣ ಶಿಕ್ಷೆ ಮತ್ತು 1.25 ಲಕ್ಷ ದಂಡ ವಿಧಿಸಲಾಗಿದೆ. ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಮಹಮ್ಮದ್ ರಮೀಜ್ ಗೆ 14 ವರ್ಷಗಳ ಕಠಿಣ ಶಿಕ್ಷೆ ಮತ್ತು 1.45 ಲಕ್ಷ ದಂಡ ವಿಧಿಸಲಾಗಿದೆ. ಕಾಸರಗೋಡು ಮಂಜಿಲ್ ಕುನ್ನಿಲ್ ನಿವಾಸಿ ಮೊಯಿದೀನ್ ರಶೀದ್ ಗೆ 12 ವರ್ಷಗಳ ಶಿಕ್ಷೆ ಮತ್ತು 1.25 ಲಕ್ಷ ದಂಡ ವಿಧಿಸಿದೆ. ಉಪ್ಪಳ ನಿವಾಸಿ ಅಬ್ದುಲ್ ರವೂಫ್ ಗೆ 13 ವರ್ಷ ಕಠಿಣ ಶಿಕ್ಷೆ ಮತ್ತು 1.35 ಲಕ್ಷ ದಂಡ ವಿಧಿಸಿದೆ. ಇವರಿಗೆ ಸಹಕಾರ ನೀಡುತ್ತಿದ್ದ ಬೆಂಗಳೂರು ಮಡಿವಾಳ ನಿವಾಸಿ ಸಬಿತಾ ಅಲಿಯಾಸ್ ಚಿಂಚುಗೆ 12 ವರ್ಷ ಶಿಕ್ಷೆ ಮತ್ತು 1.25 ಲಕ್ಷ ದಂಡ ವಿಧಿಸಿದೆ.


2022ರ ಜೂನ್ 14ರಂದು ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿ, ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪೆಡ್ಲರ್ ಗಳನ್ನು ಅರೆಸ್ಟ್ ಮಾಡಿದ್ದರು. ಈ ವೇಳೆ, 125 ಗ್ರಾಮ್ ಎಂಡಿಎಂಎ ವಶಕ್ಕೆ ಪಡೆಯಲಾಗಿತ್ತು. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಚಾರ್ಜ್ ಶೀಟ್ ಹಾಕಲಾಗಿತ್ತು. ಒಂದೂವರೆ ವರ್ಷಗಳಿಂದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ಆರೋಪ ಸಾಬೀತಾಗಿದೆ ಎಂದು ಹೇಳಿದ್ದು ಇದೀಗ ಶಿಕ್ಷೆ ಪ್ರಮಾಣವನ್ನು ಘೋಷಿಸಿದೆ. ಎನ್ಡಿಪಿಎಸ್ ಸ್ಪೆಷಲ್ ಕೋರ್ಟಿನಲ್ಲಿ ಪೊಲೀಸರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಮಸ್ಕರೇನಸ್ ವಾದಿಸಿದ್ದರು