ನೆಲಮಂಗಲ :ಸ್ನೇಹಿತನ ಮದುವೆಗೆಂದು ಜರ್ಮನಿಯಿಂದ ಬಂದಿದ್ದ ಯುವಕ : ರಸ್ತೆಯಲ್ಲಿದ್ದ ಫ್ಲೆಕ್ಸ್ಗೆ ಬೈಕ್ ತಗುಲಿ ಸಾವು..!!
ನೆಲಮಂಗಲ : ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕನೊಬ್ಬ ತನ್ನ ಸ್ನೇಹಿತನ ಮದುವೆಗೆ ಬಂದು, ನಂತರ ಕಾರ್ಯಕ್ರಮ ಮುಗಿದ ನಂತರ ರಸ್ತೆಯಲ್ಲಿ ಬೈಕ್ನ ಮೂಲಕ ತೆರಳುತ್ತಿದ್ದಾಗ ಫ್ಲೆಕ್ಸ್ಗೆ ತಗುಲಿ ಬಲಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನೆಲಮಂಗಲ ನಗರದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಕಳೆದ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ತೇಜಸ್ ಗೌಡ (27) ನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮೃತ ಯವಕ ತೇಜಸ್ ಗೌಡ ಜರ್ಮನಿಯಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ, ಸ್ನೇಹಿತನ ಮದುವೆಗೆಂದು ಹುಟ್ಟೂರಾದ ನೆಲಮಂಗಲಕ್ಕೆ ಬಂದಿದ್ದ. ಮದುವೆ ಆರತಕ್ಷತೆ ಕಾರ್ಯಕ್ರವನ್ನು ಮುಗಿಸಿಕೊಂಡು ಬೈಕ್ನಲ್ಲಿ ಬರುವಾಗ ಅವಘಡ ಸಂಭವಿಸಿತ್ತು. ಘಟನೆಯ ನಂತರ ಬೈಕ್ನಿಂದ ಬಿದ್ದ ತೇಜಸ್ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆಯ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ಯುವಕನ ತಂದೆ ಟೂರ್ ಅಂಡ್ ಟ್ರಾವೆಲ್ಸ್ ಕಂಪನಿಯನ್ನು ನಡೆಸುತ್ತಿದ್ದರು. ತೇಜಸ್ ಗೌಡನ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
ನೆಲಮಂಗಲ ನಗರದಲ್ಲಿ ಫ್ಲೆಕ್ಸ್ ಹಾವಳಿ ಮಿತಿ ಮೀರಿದ್ದು, ರಸ್ತೆಯಲ್ಲಿ ಎಲ್ಲೆಂದರಲ್ಲಿ ರಾರಾಜಿಸುತ್ತಿವೆ, ನಗರಸಭೆಯ ನಿರ್ಲಕ್ಷ್ಯತೆ ಕುರಿತು ಸಾರ್ವಜನಿಕರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.