ಬೆಂಗಳೂರು :ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ವಿಧಿ ವಶ.

ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ವಿಧಿವಶರಾಗಿದ್ದಾರೆ. ವೃಕ್ಷಮಾತೆಯನ್ನು ಕಳೆದುಕೊಂಡು ಪರಿಸರ ಲೋಕ ಅನಾಥವಾಗಿದೆ.
114 ವರ್ಷದ ತಿಮ್ಮಕ್ಕ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು.
2023 ರ ಅಕ್ಟೋಬರ್ನಲ್ಲಿ ಶ್ವಾಸನಾಳದ ಆಸ್ತಮಾದ ತೀವ್ರ ಉಲ್ಬಣದಿಂದಾಗಿ ಅಕ್ಟೋಬರ್ 3 ರಂದು ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಲುಮರದ ತಿಮ್ಮಕ್ಕ ಅವರನ್ನು ದಾಖಲಿಸಲಾಗಿತ್ತು. ಅಲ್ಲಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ, ಆಂಜಿಯೋಗ್ರಾಮ್ ಮಾಡಲಾಗಿದ್ದು ಎಡ ಮುಂಭಾಗದ ಅಪಧಮನಿ ನಿರ್ಬಂಧಿತವಾಗಿರುವುದು ಪತ್ತೆಯಾಗಿತ್ತು. ನಂತರ ಆಂಜಿಯೋಪ್ಲ್ಯಾಸ್ಟಿ ನಡೆಸಲಾಯಿತು.
ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ (ಹಿಂದಿನ ರಾಮನಗರ) ಜಿಲ್ಲೆಯ ಮಾಗಡಿ ಬಳಿ ಸಾಲು ಮರಗಳನ್ನು ಬೆಳೆಸಿದ್ದಾರೆ. ಮಕ್ಕಳಿರದ ಸಾಲು ಮರದ ತಿಮ್ಮಕ್ಕಳ ಅವರು ರಸ್ತೆ ಅಕ್ಕ ಪಕ್ಕ ಬೆಳೆಸಿದ್ದ ಮರಗಳಲ್ಲಿ, ಆ ಪರಿಸರದಲ್ಲಿ ತನ್ನ ಮಕ್ಕಳನ್ನು ಕಂಡಿದ್ದರು. ಗಿಡಗಳನ್ನು ಮಕ್ಕಳಂತೆ ನೋಡಿಕೊಂಡರು. ನಿತ್ಯವು ನೀರು ಹಾಕಿ ಪೋಷಿಸಿದ್ದರು.
ಅವರ ಈ ನಿಸ್ವಾರ್ಥದ ಕಾರ್ಯ, ಸಾಧನೆ ಹಿನ್ನೆಲೆಯಲ್ಲಿ ಅವರನ್ನು ಸಾಲು ಮರದ ತಿಮ್ಮಕ್ಕ ಅಂತಲೇ ಕರೆಯಲಾಗುತ್ತಿತ್ತು. ಅವರ ಸಾಧನೆ ಕಂಡು ಕೇಂದ್ರ ಸರ್ಕಾರದಿಂದ ನೀಡಲಾಗುವ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು, ಸನ್ಮಾನ, ಗೌರವಗಳು ಅವರನ್ನು ಹುಡುಕಿಕೊಂಡು ಬಂದವು.
ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದ ಸಾಲು ಮರದ ತಿಮ್ಮಕ್ಕ ಅವರ ನಿಧನಕ್ಕೆ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಲುಮರದ ತಿಮ್ಮಕ್ಕ (ಜನನ 30 ಜೂನ್ 1911), ಆಲ ಮರದ ತಿಮ್ಮಕ್ಕ ಎಂದೂ ಕರೆಯಲ್ಪಡುವ ಇವರು ಕರ್ನಾಟಕ ರಾಜ್ಯದ ಒಬ್ಬ ಭಾರತೀಯ ಪರಿಸರವಾದಿ , ರಾಮನಗರ ಜಿಲ್ಲೆಯ ಹುಲಿಕಲ್ ಮತ್ತು ಕುದೂರು ನಡುವಿನ 4.5 – ಕಿಲೋಮೀಟರ್ ( 2.8 ಮೈಲಿ ) ಹೆದ್ದಾರಿಯ ಉದ್ದಕ್ಕೂ 385 ಆಲದ ಮರಗಳನ್ನು ನೆಡುವ ಮತ್ತು ಅವುಗಳನ್ನು ಪೋಷಿಸುವ ಕಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ.
ಸುಮಾರು 8000 ಇತರ ಮರಗಳನ್ನು ನೆಟ್ಟಿದ್ದಾರೆ. ತಮ್ಮ ಪತಿಯ ಬೆಂಬಲದೊಂದಿಗೆ, ಅವರು ಮರಗಳನ್ನು ನೆಡುವಲ್ಲಿ ತಮ್ಮ ಜೀವನವನ್ನ ಸಾರ್ಥಕತೆ ಪಡಿಸಿಕೊಂಡರು. ಅವರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ ಮತ್ತು ಹತ್ತಿರದ ಕಲ್ಲುಗಣಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದ್ದರು.