ಮೈಸೂರು :ವಿದೇಶಿ ಮಹಿಳೆಯರಿಗೆ ಕಿರುಕುಳ: ಮೂವರು ಯುವಕರ ಬಂಧನ..

ಮೈಸೂರು: ಗೋವಾದ ಸಮುದ್ರ ತೀರದಲ್ಲಿ ವಿದೇಶಿ ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡಿದ ಮೂವರು ಯುವಕರನ್ನು ಗೋವಾ ಪೊಲೀಸರು ಬಂಧಿಸಿದ್ದರು.
ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬೆನ್ನಲ್ಲೇ ಪೊಲೀಸರು ಕ್ರಮಕೈಗೊಂಡಿದ್ದರು. ನವೆಂಬರ್ 13ರಂದು ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿತ್ತು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ರಾವಂದೂರು ಹೋಬಳಿಯ ಬೋಗನಹಳ್ಳಿ ನಿವಾಸಿಗಳಾದ ಬಿ.ಆರ್. ಕಾರ್ತಿಕ್ (28), ಬಿ.ಎನ್. ಸಂತೋಷ್ (33) ಮತ್ತು ಬಿ.ಎನ್. ರವಿ ಬಂಧಿತರು. ಘಟನೆ ಬಳಿಕ ಮೂವರನ್ನು ಗೋವಾದ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಉತ್ತರ ಗೋವಾದ ಅರಂಬೋಲ್ ಬೀಚ್‌ನಲ್ಲಿ ವಿದೇಶಿ ಮಹಿಳಾ ಪ್ರವಾಸಿಗರು ವಿಹರಿಸುತ್ತಿದ್ದರು. ಈ ಮೂವರು ಯುವಕರು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಯುವಕರು ವಿದೇಶಿ ಮಹಿಳಾ ಪ್ರವಾಸಿಗರ ಭುಜದ ಮೇಲೆ ಮತ್ತು ಸೊಂಟಕ್ಕೆ ಕೈಹಾಕಿದ್ದರು. ವೈರಲ್ ವಿಡಿಯೋ ಆಧರಿಸಿ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬೆಂಗಳೂರು ಮತ್ತು ಮೈಸೂರಿನಲ್ಲಿ ಮೂವರು ಯುವಕರನ್ನು ಪತ್ತೆಹಚ್ಚಿ ಬಂಧಿಸಿದ್ದರು.