ಮಂಗಳೂರು :ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ; ಸಾಮರ್ಥ್ಯ ಪರಿಶೀಲಿಸಿ ತಾಂತ್ರಿಕ ವರದಿ ನೀಡಲು ಹೈಕೋರ್ಟ್ ಸೂಚನೆ..

ಮಂಗಳೂರು : ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಸಿರುವ ಹಿನ್ನೆಲೆಯಲ್ಲಿ ಸುತ್ತಲಿನ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ತೊಂದರೆಯಾಗಿದೆ ಎಂಬ ವಕೀಲರ ದೂರಿಗೆ ಸಂಬಂಧಿಸಿ ಹೈಕೋರ್ಟ್, ಅಲ್ಲಿನ ಸಾಮರ್ಥ್ಯವನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಜಾಮರ್ ಅಳವಡಿಸಿರುವುದರಿಂದ ಕಳೆದ ಮಾರ್ಚ್‌ನಿಂದ ಮಂಗಳೂರಿನ ನ್ಯಾಯಾಲಯಗಳ ಸಂಕೀರ್ಣ ಸಹಿತ ಸುತ್ತಲಿನ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿರುವ ಬಗ್ಗೆ ಮಂಗಳೂರಿನ ವಕೀಲರ ಸಂಘ ಹೈಕೋರ್ಟಿನಲ್ಲಿ ದಾವೆ ಹೂಡಿದ್ದು ವಿಚಾರಣೆ ಆರಂಭಗೊಂಡಿದೆ. ಸಂಘದ ಪರವಾಗಿ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿದರು.
ಕಾರಾಗೃಹದಲ್ಲಿರುವ ಕೈದಿಗಳು ಮೊಬೈಲ್ ಬಳಸಬಾರದೆಂಬ ಉದ್ದೇಶದಿಂದ ಜಾಮರ್ ಅಳವಡಿಸಲಾಗಿದೆ. ಆದರೆ ಕೈದಿಗಳಿಗೆ ಮೊಬೈಲ್ ನೆಟ್‌ವರ್ಕ್ ದೊರೆಯುತ್ತಿರುವ ಮಾಹಿತಿ ಇದೆ. ಕಾರಾಗೃಹದ ಹೊರ ಭಾಗದಲ್ಲಿ ನೆಟ್ವರ್ಕ್ ತೊಂದರೆಯಾಗುತ್ತಿದೆ ಎಂದು ವಾದಿಸಿದರು. ನೆಟ್ವರ್ಕ್ ಸಮಸ್ಯೆಯಿಂದಾಗಿ ನ್ಯಾಯವಾದಿಗಳ ಸಹಿತ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನ್ಯಾಯಾಲಯದ ಕಲಾಪಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿಯೂ ನ್ಯಾಯವಾದಿಗಳಿಗೆ ಅಡ್ಡಿಯಾಗುತ್ತದೆ ಎಂದು ವಾದಿಸಿದರು.
ವಾದ ಆಲಿಸಿದ ನ್ಯಾಯಾಧೀಶರು ಕಾರಾಗೃಹ, ನ್ಯಾಯಾಲಯ ಹಾಗೂ ಸುತ್ತಲಿನ ಪರಿಸರದಲ್ಲಿ ಇರುವ ಮೊಬೈಲ್ ನೆಟ್ವರ್ಕ್ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಿ ವಾರದೊಳಗೆ ತಾಂತ್ರಿಕ ವರದಿಯನ್ನು ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿದರು. ಮುಂದಿನ ವಿಚಾರಣೆಯನ್ನು ನ.18ಕ್ಕೆ ನಿಗದಿಗೊಳಿಸಲಾಗಿದೆ. ಕಾರಾಗೃಹದ ಸುತ್ತಲಿನ ಕೊಡಿಯಾಲ್ ಬೈಲ್ ಪ್ರದೇಶದ ಒಂದು ಕಿ.ಮೀ.ಗೂ ಹೆಚ್ಚು ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು, ನ್ಯಾಯಾಲಯ ಸಹಿತ ನಗರದ ಕೇಂದ್ರ ಭಾಗದಲ್ಲಿ ದಿನನಿತ್ಯದ ವ್ಯವಹಾರ, ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಿದೆ.