ಮಂಗಳೂರು: ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ನಾಲ್ಕು ಪಿಜಿ ಕೋರ್ಸ್ ತಾತ್ಕಾಲಿಕವಾಗಿ ಸ್ಥಗಿತ...
ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ವಿಶ್ವವಿದ್ಯಾನಿಲಯ 2025 - 26ನೇ ಶೈಕ್ಷಣಿಕ ಸಾಲಿನಲ್ಲಿ ನಾಲ್ಕು ಸ್ನಾತಕೋತ್ತರ (ಪಿಜಿ) ಕೋರ್ಸ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದರಿಂದ ವಿವಿ ಈ ನಿರ್ಧಾರ ತೆಗೆದುಕೊಂಡಿದೆ.
ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ನಾಲ್ಕು ಪಿಜಿ ಕೋರ್ಸ್ಗಳು ಸ್ಥಗಿತಗೊಂಡಿರುವ ಬಗ್ಗೆ ದೃಢಪಡಿಸಿದ್ದಾರೆ. ಎಲೆಕ್ಟ್ರಾನಿಕ್ಸ್, ಸಂಖ್ಯಾಶಾಸ್ತ್ರ, ಪತ್ರಿಕೋದ್ಯಮ ಮತ್ತು ಮಾನವ ಸಂಪನ್ಮೂಲ ಅಭಿವೃದ್ದಿ ಕೋರ್ಸ್ಗಳು ಸ್ಥಗಿತವಾಗಿವೆ ಎಂದು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ವಿಭಾಗಕ್ಕೆ ಎರಡನೇ ವರ್ಷ ಸತತವಾಗಿ ವಿದ್ಯಾರ್ಥಿಗಳು ಲಭ್ಯರಾಗಿಲ್ಲ. ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಕಳೆದ ವರ್ಷ ಯಾವುದೇ ಪ್ರವೇಶ ಇರಲಿಲ್ಲ. ಈ ವಿಭಾಗದಲ್ಲಿ ಸ್ಥಿರ ಪ್ರಾಧ್ಯಾಪಕರು ಇಲ್ಲ. ಪತ್ರಿಕೋದ್ಯಮ ವಿಭಾಗಕ್ಕೆ ಈ ಬಾರಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಅರ್ಜಿ ಸಲ್ಲಿಸಿದ್ದಾನೆ. ಈ ವಿಭಾಗದಲ್ಲಿ ಒಬ್ಬ ಸ್ಥಿರ ಅಧ್ಯಾಪಕರಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸ್ಥಿರ ಅಧ್ಯಾಪಕರಿಲ್ಲದೇ ವಾಣಿಜ್ಯ ವಿಭಾಗದ ಅಧ್ಯಾಪಕರಿಂದ ನಡೆಸಲಾಗುತ್ತಿತ್ತು.
ಈ ಬಗ್ಗೆ ಮಾತನಾಡಿರುವ ಮಂಗಳೂರು ವಿವಿ ಕುಲಪತಿ ಡಾ. ಪಿ.ಎಲ್. ಧರ್ಮ ಅವರು, ಈ ನಾಲ್ಕು ಕೋರ್ಸ್ಗಳನ್ನು ಮುಚ್ಚಲಾಗಿಲ್ಲ. ಈ ಕೋರ್ಸ್ ತಾತ್ಕಾಲಿಕವಾಗಿ ಸ್ಥಗಿತ ಸ್ಥಿತಿಯಲ್ಲಿವೆ. ಭವಿಷ್ಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಲಭ್ಯರಾದರೆ ಮರುಪ್ರಾರಂಭಿಸಬಹುದು. ಈ ನಾಲ್ಕು ಕೋರ್ಸ್ಗಳಿಗೆ ವಿದ್ಯಾರ್ಥಿಗಳು ಲಭ್ಯರಾಗದ ಕಾರಣದಿಂದ ಪ್ರವೇಶ ನೀಡಲಾಗಿಲ್ಲ. ಕನಿಷ್ಠ 15 ವಿದ್ಯಾರ್ಥಿಗಳು ಬೇಕು. ಆದರೆ, ಇದು ತಾತ್ಕಾಲಿಕ ಸ್ಥಗಿತ ಮಾತ್ರ. ಭವಿಷ್ಯದಲ್ಲಿ ಸಾಕಷ್ಟು ಅರ್ಜಿಗಳು ಬಂದರೆ ಮರುಪ್ರಾರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ಕೋರ್ಸ್ ಸ್ಥಗಿತದ ಪ್ರಮುಖ ಕಾರಣವೆಂದರೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ವಿಶ್ವವಿದ್ಯಾನಿಲಯದ ಪ್ರಕಾರ, ಒಂದು ಪಿಜಿ ಕೋರ್ಸ್ ನಡೆಸಲು ಕನಿಷ್ಠ 10 ರಿಂದ 15 ವಿದ್ಯಾರ್ಥಿಗಳು ಅಗತ್ಯ. ಆದರೂ, ಈ ನಾಲ್ಕು ಕೋರ್ಸ್ಗಳಲ್ಲಿ ಈ ಮಿತಿಯನ್ನು ಮೀರಿರಲಿಲ್ಲ.
ಖಾಸಗಿ ಸಂಸ್ಥೆಗಳ ಕಡೆ ವಿದ್ಯಾರ್ಥಿಗಳ ಆಕರ್ಷಣೆಯಿಂದಾಗಿ ಪಿಜಿ ಪ್ರವೇಶಗಳು 5 ವರ್ಷಗಳಲ್ಲಿ ಶೇ 31ರಷ್ಟು ಇಳಿಕೆಯಾಗಿವೆ.ಈ ವಿಭಾಗಗಳಲ್ಲಿ ಖಾಯಂ ಉಪನ್ಯಾಸಕರ ಸಂಖ್ಯೆಯೂ ಕಡಿಮೆ. ಉದಾಹರಣೆಗೆ, ಸಂಖ್ಯಾಶಾಸ್ತ್ರ ಮತ್ತು ಹೆಚ್ಆರ್ಡಿ ವಿಭಾಗಗಳಲ್ಲಿ ಯಾವುದೇ ಸ್ಥಿರ ಸಿಬ್ಬಂದಿ ಇಲ್ಲದೇ ಇರುವುದು ಈ ಸಮಸ್ಯೆಗೆ ಕಾರಣ ಎನ್ನಬಹುದಾಗಿದೆ.
ಈ ಸ್ಥಗಿತದಿಂದ ವಿದ್ಯಾರ್ಥಿಗಳ ಮೇಲೆ ನೇರ ಪರಿಣಾಮ ಇಲ್ಲ, ಏಕೆಂದರೆ ಈ ಕೋರ್ಸ್ಗಳಿಗೆ ಈಗಾಗಲೇ ಕಡಿಮೆ ಅರ್ಜಿಗಳು ಬಂದಿವೆ. ಆದರೆ ಅಧ್ಯಾಪಕರ ಗೆಸ್ಟ್ ಫ್ಯಾಕಲ್ಟಿ ವ್ಯವಸ್ಥೆಯಲ್ಲಿ ಕಡಿತವಾಗಿದೆ, ಇದು ವಿಶ್ವವಿದ್ಯಾನಿಲಯದ ಖರ್ಚು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿದೆ.