ಹಾವೇರಿ: ಕಾರ್ಖಾನೆಗೆ ಸೆಡ್ಡು ಹೊಡೆದು ತಮ್ಮ ಜಮೀನಿನಲ್ಲೇ ಆಲೆಮನೆ ನಿರ್ಮಿಸಿ ಬೆಲ್ಲ ತಯಾರಿಸುತ್ತಿರುವ ರೈತರು..!!
ಹಾವೇರಿ: ಕಬ್ಬು ಬೆಳೆಗಾರರು ಪ್ರತೀ ವರ್ಷ ಕೇಂದ್ರ ಸರ್ಕಾರ ನಿಗದಿ ಮಾಡುವ ಎಫ್ಆರ್ಪಿ ಹಾಗು ರಾಜ್ಯ ಸರ್ಕಾರ ನಿಗದಿ ಮಾಡುವ ಎಸ್ಆರ್ಪಿ ದರಕ್ಕೆ ಕಾಯಬೇಕು. ಸರ್ಕಾರ ದರ ನಿಗದಿ ಮಾಡಿದರೂ ಸಹ ಕೆಲ ಕಾರ್ಖಾನೆ ಮಾಲೀಕರು ಕಬ್ಬಿನಲ್ಲಿರುವ ಸಕ್ಕರೆ ಪ್ರಮಾಣದ ಮೇಲೆ ಬೆಲೆ ನಿಗದಿ ಮಾಡುತ್ತಾರೆ.
ಕಾರ್ಖಾನೆಗೆ ಕಬ್ಬು ಪೂರೈಸಿ ಅವರು ನೀಡುವ ಹಣ ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಬೆಳೆಗಾರರದ್ದಾಗುತ್ತದೆ. ಆದರೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೆಲವು ರೈತರು ಕಾರ್ಖಾನೆ ಮಾಲೀಕರಿಗೆ ಸೆಡ್ಡು ಹೊಡೆದಿದ್ದಾರೆ. ತಾವು ಬೆಳೆದ ಕಬ್ಬನ್ನು ಈ ರೈತರು ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡುವುದಿಲ್ಲ. ಬದಲಿಗೆ ತಮ್ಮ ಜಮೀನಿನಲ್ಲೇ ಆಲೆಮನೆ ನಿರ್ಮಿಸಿ ಬೆಲ್ಲ ತಯಾರಿಸುತ್ತಿದ್ದಾರೆ. ಇದರಿಂದ ತಮಗೆ ಹೆಚ್ಚು ಲಾಭವಿದೆ, ಹತ್ತಾರು ಮಂದಿಗೆ ಕೆಲಸ ನೀಡಿದ ತೃಪ್ತಿ ಇದೆ ಎನ್ನುತ್ತಾರೆ ರೈತರು. ಅಲ್ಲದೆ, ಕಬ್ಬಿನ ಸಿಪ್ಪೆಯಿಂದ ಹತ್ತಾರು ಎಕರೆ ಜಮೀನಿಗೆ ಗೊಬ್ಬರವೂ ಸಿಗುತ್ತಿದೆ ಎನ್ನುತ್ತಿದ್ದಾರೆ.
ಕಾರ್ಖಾನೆ ಮಾಲೀಕರು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಕಬ್ಬಿನಲ್ಲಿ ವಿಂಗಡಣೆ ಮಾಡುತ್ತಾರೆ. ಅದರ ಮೇಲೂ ಸಹ ದರ ನಿಗದಿ ಮಾಡುತ್ತಾರೆ. ಪ್ರಸ್ತುತ ವರ್ಷ ಬೆಳಗಾವಿ ರೈತರು ಪ್ರತಿಭಟನೆ ನಡೆಸಿದ ಕಾರಣ ಅಲ್ಲಿ ಪ್ರತೀ ಟನ್ಗೆ 3,300 ರೂಪಾಯಿ ನಿಗದಿ ಮಾಡಿದ್ದಾರೆ. ಆದರೆ ಹಾವೇರಿ ಜಿಲ್ಲೆ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಕಾರ್ಖಾನೆ ಮಾಲೀಕರು 2,700 ರೂಪಾಯಿ ನಿಗದಿ ಮಾಡಿದ್ದಾರೆ. ಪ್ರತಿಭಟನೆ ನಡೆಸಿದ ನಂತರ ಟನ್ ಕಬ್ಬಿಗೆ 2,850 ರೂ ದರ ನಿಗದಿ ಮಾಡಿದ್ದಾರೆ.
ಆದರೆ, ಆಲೆಮನೆಗಳಲ್ಲಿ ಬೆಲ್ಲಕ್ಕೆ ನಾವೇ ದರ ನಿಗದಿ ಮಾಡುತ್ತೇವೆ. ಪ್ರತೀ ಟನ್ ಕಬ್ಬಿಗೆ 115 ಕೆ.ಜಿ. ಬೆಲ್ಲ ಬರುತ್ತದೆ. ಸದ್ಯ ಬಕೆಟ್ ಆಕಾರದ ಬೆಲ್ಲಕ್ಕೆ ಕೆ.ಜಿಗೆ 38 ರೂಪಾಯಿ ಇದೆ. ಅಚ್ಚು ಬೆಲ್ಲ ಕೆ.ಜಿಗೆ ರೂಪಾಯಿ ಇದೆ. ಇದರಿಂದ ನಮಗೆ ಪ್ರತೀ ಟನ್ ಕಬ್ಬಿಗೆ ಕೂಲಿ ಕಾರ್ಮಿಕರ ಖರ್ಚು ತೆಗೆದು 3,300 ರೂಪಾಯಿ ಸಿಗುತ್ತದೆ. ನಾವಿದ್ದಲ್ಲಿಯೇ ಖರೀದಿದಾರರು ಬಂದು ಬೆಲ್ಲ ಖರೀದಿಸುತ್ತಾರೆ. ಮಾರುಕಟ್ಟೆಯಲ್ಲಿನ ಬೆಲ್ಲದ ದರದ ಮೇಲೆ ನಮ್ಮ ಬೆಲ್ಲದ ದರ ನಿಗದಿ ಮಾಡುತ್ತೇವೆ ಎಂಬುದು ರೈತರ ಮಾತು.
ಮಾರುಕಟ್ಟೆಗಳಲ್ಲಿ ಅಧಿಕ ಹಣದಾಸೆಗೆ ಕೆಲವರು ಸಕ್ಕರೆಯಿಂದ ಬೆಲ್ಲ ತಯಾರಿಸುತ್ತಾರೆ. ಆದರೆ ನಾವು ಕಬ್ಬಿನ ರಸದಿಂದಲೇ ಬೆಲ್ಲ ತಯಾರಿಸುತ್ತೇವೆ. ಶುದ್ಧ ಬೆಲ್ಲ ನಮ್ಮದು. ಈ ಬೆಲ್ಲದ ಪೆಂಟಿಯನ್ನು ಒಡೆದರೆ ಚೂರು ಚೂರಾಗುತ್ತದೆ. ಅದೇ ಸಕ್ಕರೆಯಿಂದ ಬೆಲ್ಲ ತಯಾರಿಸಿದರೆ ಪೆಂಟಿ ಚೂರಾಗುವುದಿಲ್ಲ, ಕರಗುತ್ತಾ ಹೋಗುತ್ತದೆ. ಆ ರೀತಿಯ ಬೆಲ್ಲವನ್ನು ಒಡೆಯಲಾಗದು. ಜನರು ಸಕ್ಕರೆಯಿಂದ ತಯಾರಿಸಿದ ಬೆಲ್ಲದ ಬಣ್ಣಕ್ಕೆ ಮಾರು ಹೋಗುತ್ತಾರೆ. ಆದರೆ ನಿಜವಾದ ಬೆಲ್ಲ ಆಕರ್ಷಕ ಬಣ್ಣ ಇಲ್ಲದಿದ್ದರೂ ರುಚಿ ರುಚಿಯಾಗಿರುತ್ತದೆ. ವರ್ಷಗಟ್ಟಲೆ ಸ್ಟಾಕ್ ಮಾಡಿಟ್ಟರೂ ಕೆಡುವುದಿಲ್ಲ ಎನ್ನುತ್ತಾರೆ ಬೆಲ್ಲ ತಯಾರಿಸುವ ರೈತರು.
ಹಾವೇರಿ ಜಿಲ್ಲೆಯಲ್ಲಿ ಆಲೆಮನೆಗಳು: 1983ರಲ್ಲಿ ಹಾನಗಲ್ ತಾಲೂಕಿನ ಸಂಗೂರಿನಲ್ಲಿ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭವಾಯಿತು. ಅತ್ಯುತ್ತಮವಾಗಿ ನಡೆಯುತ್ತಿದ್ದ ಕಾರ್ಖಾನೆ ಹಲವರ ಸ್ವಹಿತಾಸಕ್ತಿಯಿಂದ ಹಾಳಾಗಲಾರಂಭಿಸಿತು. ಇದರಿಂದ ಕಬ್ಬು ಬೆಳೆಯುವ ರೈತರಿಗೆ ಆತಂಕ ಶುರುವಾಯಿತು. ಸಕ್ಕರೆ ಕಾರ್ಖಾನೆ ಇಲ್ಲದಿದ್ದರೂ ಕಬ್ಬಿನಿಂದ ಬೆಲ್ಲ ತಯಾರಿಸುವ ಯೋಚನೆ ಇಲ್ಲಿಯ ರೈತರಿಗೆ ಬಂತು.
ಹಾನಗಲ್ ತಾಲೂಕಿನ ಶೀಗಿಹಳ್ಳಿಯ ಪ್ರಗತಿಪರ ರೈತ ಬಸವಣ್ಣೆಪ್ಪ ಬೆಂಚಿಹಳ್ಳಿ ವಿವಿಧೆಡೆ ಬೆಲ್ಲ ತಯಾರಿಸುವ ಆಲೆಮನೆಗಳ ಬಗ್ಗೆ ತಿಳಿದುಕೊಂಡರು. ಕೊನೆಗೆ ಅವರು ಮಂಡ್ಯಕ್ಕೆ ಹೋಗಿ ಅಲ್ಲಿಂದ ಆಲೆಮನೆ ತಯಾರಿಕೆ ಕಲಿತು ಬಂದರು. ನಂತರ ಆತಂಕದಿಂದಲೇ ಶೀಗಿಹಳ್ಳಿಯಲ್ಲಿ ಒಂದು ಆಲೆಮನೆ ತೆಗೆದರು. ಆರಂಭದಲ್ಲಿ ಬೆಲ್ಲ ಕಪ್ಪು ಬಣ್ಣದಾಗಿದ್ದರೂ ರುಚಿ ಒಳ್ಳೆಯದಿತ್ತು. ಅಲ್ಲಿಂದ ಬಸವಣ್ಣೆಪ್ಪ ಹಲವು ಆಲೆಮನೆಗಳನ್ನು ನಿರ್ಮಿಸಿದ್ದಾರೆ. ಈಗ ಹಾನಗಲ್ ತಾಲೂಕಿನಲ್ಲಿ 50 ಆಲೆಮನೆಗಳಿವೆ.
ಆಲೆಮನೆಗಳು ಎದುರಿಸುತ್ತಿರುವ ಸಮಸ್ಯೆಗಳೇನು?: ಹಾನಗಲ್ ತಾಲೂಕಿನ ಆಲೆಮನೆಗಳು ಪ್ರಸ್ತುತ ಕೂಲಿಕಾರ್ಮಿಕರ ಸಮಸ್ಯೆ ಎದುರಿಸುತ್ತಿವೆ. ಈ ಕೆಲಸ ಮಾಡಲು ಉತ್ತರ ಪ್ರದೇಶದಿಂದ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಸ್ಥಳೀಯ ಕೂಲಿಕಾರ್ಮಿಕರು ಒಂದು ದಿನ ಬಂದರೆ ನಾಲ್ಕು ದಿನ ಬರುವುದಿಲ್ಲ ಅಂತಾರೆ ರೈತರು. ಹಾವೇರಿಯಲ್ಲಿ ಒಂದು ಬೆಲ್ಲದ ಮಾರುಕಟ್ಟೆ ಸ್ಥಾಪನೆಯಾಗಬೇಕು ಎನ್ನುವುದು ಆಲೆಮನಿ ರೈತರ ಬೇಡಿಕೆ. ಮಳೆ ಬಂದರಂತೂ ಆಲೆಮನೆಗಳ ಒಲೆಗೆ ಬೆಂಕಿ ಹಚ್ಚಲು ಸೌದೆಯ ಸಮಸ್ಯೆಯಾಗುತ್ತದೆ. ಅದನ್ನು ಬಿಟ್ಟರೆ ಬೇರೆಲ್ಲವೂ ಸರಿಯಾಗಿದೆ ಎಂದು ಹಾವೇರಿ ಜಿಲ್ಲೆಯ ಬೆಲ್ಲ ತಯಾರಿಸುವ ರೈತರು ಹೇಳುತ್ತಾರೆ.