ಮಂಗಳೂರು :ವಯಸ್ಸು 68..ನಿತ್ಯ 25ಕಿಮೀ ಓಟ.. ಆಟೋ ಚಾಲಕನ ಮ್ಯಾರಥಾನ್ ರನ್​: ವಿಶೇಷಚೇತನ ಪುತ್ರನ ಹೆಸರಿನಲ್ಲಿ ವಿಶೇಷ ಸಾಧನೆ!!

ಮಂಗಳೂರು :ವಯಸ್ಸು 68..ನಿತ್ಯ 25ಕಿಮೀ ಓಟ.. ಆಟೋ ಚಾಲಕನ ಮ್ಯಾರಥಾನ್ ರನ್​: ವಿಶೇಷಚೇತನ ಪುತ್ರನ ಹೆಸರಿನಲ್ಲಿ ವಿಶೇಷ ಸಾಧನೆ!!

ಮಂಗಳೂರು: ವಯಸ್ಸು ಹೆಚ್ಚಾದಂತೆ ದೇಹಕ್ಕೆ ಶಕ್ತಿ ಇಲ್ಲ ಎಂದು ದೇಹ ದಂಡಿಸುವುದಕ್ಕೆ ಹೆಚ್ಚು ಜನರು ಹಿಂದೇಟು ಹಾಕುತ್ತಾರೆ. ಆದರೆ, ವಯಸ್ಸು 68 ಆದರೂ ಮಂಗಳೂರಿನ ಈ ರಿಕ್ಷಾ ಚಾಲಕ ನಿತ್ಯ 25 ಕಿಲೋ ಮೀಟರ್ ಓಡುತ್ತಾರೆ. ತಮ್ಮ ವಿಶೇಷ ಚೇತನ ಪುತ್ರನ ಹೆಸರಿನಲ್ಲಿ ನೂರಕ್ಕೂ ಅಧಿಕ ಮ್ಯಾರಥಾನ್ ಓಟದಲ್ಲಿ ಭಾಗಿಯಾಗಿದ್ದಾರೆ.


ಇವರ ಹೆಸರು ಮಾಧವ ಸರಿಪಳ್ಳ. 68 ವರ್ಷದ ಇವರು ರಿಕ್ಷಾ ಚಾಲಕ. 1985ರಲ್ಲಿ ಮಲ್ಲಿಕಟ್ಟೆ ಕದ್ರಿ ಆಟೋ ಸ್ಟ್ಯಾಂಡ್​ನಲ್ಲಿ ರಿಕ್ಷಾ ಚಾಲನೆ ಆರಂಭಿಸಿದ ಅವರ ಪಯಣ, ಇಂದಿಗೂ ಮುಂದುವರಿದಿದೆ. ಅವರ ಮಗ ಧನರಾಜ್ ಸರಿಪಳ್ಳ, ವಿಶೇಷ ಚೇತನ ಯುವಕ. ಆದರೆ ಆತನನ್ನು ಕ್ರೀಡೆಯಲ್ಲಿ ಮಾಧವ ಸರಿಪಳ್ಳ ಅವರು ಪಳಗಿಸಿದ್ದರು. ಮೆಡಲ್ ವಿನ್ನರ್ ಸ್ಕೇಟರ್ ಆಗಿರುವ ಧನರಾಜ್ ಚೀನಾದಲ್ಲಿ ನಡೆದ ಸ್ಪರ್ಧೆಯಲ್ಲಿ ಗಾಯಗಳಿಂದಾಗಿ ಸ್ಪೋರ್ಟ್ಸ್ ಬಿಟ್ಟುಬಿಟ್ಟಿದ್ದ. ಆ ನಂತರ, ಮಾಧವ ಅವರು ಆತನ ಹೆಸರಿನಲ್ಲಿ ಓಡಲು ಆರಂಭಿಸಿದರು.


32ಕಿ.ಮೀ ಮ್ಯಾರಥಾನ್​ ಓಡುವ ಪ್ಲಾನ್; ಕಳೆದ 14 ವರ್ಷಗಳಲ್ಲಿ, ಮಾಧವ ಅವರು ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಇತರ ರಾಜ್ಯಗಳಲ್ಲಿ ನಡೆದ 100ಕ್ಕೂ ಹೆಚ್ಚು ಮ್ಯಾರಥಾನ್​ಗಳಲ್ಲಿ ಭಾಗವಹಿಸಿದ್ದಾರೆ. ಅವರ ಮೊದಲ 21 ಕಿ.ಮೀ. ಮ್ಯಾರಥಾನ್ 2011 ರಲ್ಲಿ ಮಂಗಳೂರು ಎಡಪದವಿನಲ್ಲಿ ನಡೆಯಿತು. ಈಗ ಅವರು 'ಮಂಗಳೂರು ಮ್ಯಾರಥಾನ್ 2025'ಗೆ ತಯಾರಿ ನಡೆಸುತ್ತಿದ್ದಾರೆ. ನವೆಂಬರ್ 9 ರಂದು 32 ಕಿ.ಮೀ. ಮ್ಯಾರಥಾನ್​ ಓಡುವ ಯೋಜನೆಯಿದೆ.

ಅವರದು ಸುಖಮಯವಾದ ಜೀವನವಲ್ಲ. ಅವರ ಮಗಳು ನಂದಿನಿ ಸಹ ವಿಶೇಷಚೇತನೆ. 2018ರಲ್ಲಿ ಅವರ ವಿವಾಹಕ್ಕಾಗಿ ಆಟೋ ಮಾರಾಟ ಮಾಡಬೇಕಾಯಿತು. 2007ರಲ್ಲಿ ಮನೆಯ ಒಂದು ಭಾಗ ಕುಸಿಯಿತು. 2017ರಲ್ಲಿ ದಾನದ ಹಣದಿಂದ ಮನೆಯನ್ನು ಮರು ನಿರ್ಮಾಣ ಮಾಡಿದ್ದಾರೆ. ಈಗ ಎಲೆಕ್ಟ್ರಿಕ್ ಆಟೋ ಚಲಾಯಿಸಿ ದಿನಕ್ಕೆ ರೂ. 800 ಸಂಪಾದಿಸುತ್ತಾರೆ. ಧನರಾಜ್ ಸ್ಪೋರ್ಟ್ಸ್ ಕೋಟಾ ಅಡಿ ಆಫೀಸ್ ಅಸಿಸ್ಟೆಂಟ್ ಉದ್ಯೋಗ ಪಡೆದಿದ್ದಾರೆ.

ವೈದ್ಯದಂಪತಿ ಸಹಕಾರ: ಯೆನೆಪೋಯ ಆಸ್ಪತ್ರೆಯ ಪ್ರೊಫೆಸರ್ ಡಾ. ಅನುಪಮಾ ರಾವ್ ಮತ್ತು ಎಜೆ ಆಸ್ಪತ್ರೆಯ ಪ್ರೊಫೆಸರ್ ಡಾ. ರಾಘವೇಂದ್ರ ರಾವ್ ಅವರು ರಿಜಿಸ್ಟ್ರೇಷನ್ ಫೀಸ್ ಭರಿಸುವುದು ಸೇರಿದಂತೆ ಇವರ ಮ್ಯಾರಥಾನ್ ಓಟಕ್ಕೆ ಸಹಕಾರ ನೀಡುತ್ತಾರೆ.

ಈ ಬಗ್ಗೆ ಮಾತನಾಡಿದ ಮಾಧವ ಸರಿಪಳ್ಳ ಅವರು, "ವಿಶೇಷ ಚೇತನ ಮಗ ಚೀನಾದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಭಾಗಿಯಾಗಿದ್ದ. ಆದರೆ, ಆತನ ಕೈಗೆ ಪೆಟ್ಟಾಯಿತು. ಅದಕ್ಕಾಗಿ ಆತನ ಬದಲಿಗೆ ನಾನೇ ಓಡಲು ತೀರ್ಮಾನಿಸಿದ್ದೇನೆ. ಇದರಿಂದ ನನ್ನ ಆರೋಗ್ಯವು ಉತ್ತಮವಾಗಿದೆ" ಎನ್ನುತ್ತಾರೆ ಅವರು.


Ads on article

Advertise in articles 1

advertising articles 2

Advertise under the article