ಬೆಂಗಳೂರು :ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ ಅವ್ಯವಹಾರ ; ನೌಕರರು 60 ವರ್ಷಗಳಿಂದ ಕೂಡಿಟ್ಟ 70 ಕೋಟಿ ಹಣವನ್ನು ನುಂಗಿಹಾಕಿದ ಸಿಬಂದಿ, ಸೊಸೈಟಿ ಸಿಇಓ, ಅಕೌಂಟೆಂಟ್ ಪೊಲೀಸರ ಬಲೆಗೆ...!!

ಬೆಂಗಳೂರು: ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕೋಟ್ಯಂತರ ರೂಪಾಯಿ ಹಣವನ್ನು ದುರ್ಬಳಕೆ ಮಾಡಿದ ಪ್ರಕರಣದಲ್ಲಿ ಸೊಸೈಟಿ ಸಿಇಓ ಸೇರಿ ಇಬ್ಬರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೊಸೈಟಿ ಸಿಇಓ ಗೋಪಿನಾಥ್ ಹಾಗೂ ಅಕೌಂಟ್ ಸಿಬ್ಬಂದಿ ಲಕ್ಷ್ಮಿ ಜಗದೀಶ್ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ.
ಇಪಿಎಫ್‌ಒ ನೌಕರರೇ ಸೇರಿ 61 ವರ್ಷಗಳ ಹಿಂದೆ ಇಪಿಎಫ್ಒ ಸ್ಟಾಫ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ರಚಿಸಿಕೊಂಡಿದ್ದರು. ಇಪಿಎಫ್‌ಒ ನೌಕರರಿಗೆ ಮಾತ್ರವೇ ಸೊಸೈಟಿಯಲ್ಲಿ ಹೂಡಿಕೆಗೆ ಅವಕಾಶ ನೀಡಲಾಗಿತ್ತು. ನೂರಾರು ಜನ ನೌಕರರು ತಮ್ಮ ಉಳಿತಾಯದ ಹಣವನ್ನು ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದರು. ಆ ಹಣವನ್ನು ಅವಶ್ಯಕತೆ ಇರುವ ನೌಕರರಿಗೆ ಸಾಲದ ರೂಪದಲ್ಲಿ ನೀಡುತ್ತಿದ್ದ ಸೊಸೈಟಿ, ಹೂಡಿಕೆ ಮಾಡಿದ್ದವರ ಖಾತೆಗಳಿಗೆ ಪ್ರತಿ ತಿಂಗಳು ಬಡ್ಡಿಯ ಹಣವನ್ನೂ ಸಂದಾಯ ಮಾಡುತ್ತಿತ್ತು. ಆದರೆ, 3 ತಿಂಗಳಿನಿಂದ ಬಡ್ಡಿಯ ಹಣ ಖಾತೆಗೆ ಸಂದಾಯವಾಗದಿದ್ದಾಗ ಹೂಡಿಕೆದಾರರು ತೆರಳಿ ಸೊಸೈಟಿಯ ಖಾತೆಯನ್ನು ಪರಿಶೀಲಿಸಿದ್ದರು. ಆಗ ಕೇವಲ 3 ಕೋಟಿ ರೂ. ಮಾತ್ರವೇ ಸಾಲ ನೀಡಲಾಗಿದ್ದು, ಉಳಿದ ಹಣ ಸೊಸೈಟಿಯ ಖಾತೆಯಿಂದ ಖಾಲಿಯಾಗಿರುವುದು ಪತ್ತೆಯಾಗಿತ್ತು.
ಹೂಡಿಕೆಯ ಹಣವನ್ನು ಸೊಸೈಟಿಯ ಖಾತೆಯಿಂದ ಅನಧಿಕೃತವಾಗಿ ಇತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಹೂಡಿಕೆದಾರರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸೊಸೈಟಿ ಸಿಇಓ ಮತ್ತು ಸಿಬಂದಿ ಕೈವಾಡ ಕಂಡುಬಂದಿದ್ದು ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸೊಸೈಟಿಯ ಸಿಇಒ ಗೋಪಿನಾಥ್, ಸಿಬ್ಬಂದಿಯಾದ ಜಗದೀಶ್, ಲಕ್ಷ್ಮೀ, ಲಿಂಗೇಗೌಡ ಹಾಗೂ ರಾಮಾನುಜ ಎಂಬವರ ಮನೆಗಳ ಮೇಲೆ ದಾಳಿ ನಡೆಸಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 300ಕ್ಕೂ ಅಧಿಕ ಠೇವಣಿದಾರರು ಹೂಡಿಕೆ ಮಾಡಿದ್ದ ಸುಮಾರು 70 ಕೋಟಿ ರೂ. ಹಣವನ್ನ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿದೆ. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಆರ್.ಆರ್. ನಗರ, ಜೆ.ಪಿ.ನಗರ, ಅಂಜನಾಪುರದಲ್ಲಿರುವ ಆರೋಪಿತರ ನಿವಾಸಗಳು, ರಿಚ್‌ಮಂಡ್ ಸರ್ಕಲ್‌ನಲ್ಲಿರುವ ಸೊಸೈಟಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ದಾಳಿ ವೇಳೆ ಚಿನ್ನಾಭರಣ, ನಗದು ಮತ್ತು ಹೂಡಿಕೆಗೆ ಸಂಬಂಧಿಸಿದ ಕೆಲ ದಾಖಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.