ಬೆಂಗಳೂರು :ಎಟಿಎಂ ಹಣ ದರೋಡೆ ಪ್ರಕರಣ: 54 ಗಂಟೆಯೊಳಗೆ ಕಾನ್​​ಸ್ಟೇಬಲ್​ ಸೇರಿ ಮೂವರ ಬಂಧನ​​, ₹5.76 ಕೋಟಿ ಜಪ್ತಿ..!!

ಬೆಂಗಳೂರು :ಎಟಿಎಂ ಹಣ ದರೋಡೆ ಪ್ರಕರಣ: 54 ಗಂಟೆಯೊಳಗೆ ಕಾನ್​​ಸ್ಟೇಬಲ್​ ಸೇರಿ ಮೂವರ ಬಂಧನ​​, ₹5.76 ಕೋಟಿ ಜಪ್ತಿ..!!

three-accused-arrested-in-bengaluru-atm-money-robbery-case

ಬೆಂಗಳೂರು: ಎಟಿಎಂ ಯಂತ್ರಗಳಿಗೆ ತುಂಬಿಸಲು ಕೊಂಡೊಯ್ಯುತ್ತಿದ್ದ 7.11 ಕೋಟಿ ರೂ. ಹಣ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸಿಎಂಎಸ್ ಸೆಕ್ಯುರಿಟೀಸ್ ಕಸ್ಟೋಡಿಯನ್ ವಾಹನದ ಮೇಲ್ವಿಚಾರಕ ರವಿ, ಮಾಜಿ ಉದ್ಯೋಗಿ ಕ್ಸೇವಿಯರ್ ಹಾಗೂ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್‌ ಎಂಬವರನ್ನು ಬಂಧಿಸಲಾಗಿದೆ. ಅವರಿಂದ 5.76 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ವರದಿಯಾದ 54 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಆರರಿಂದ 8 ಜನರು ಶಾಮೀಲಾಗಿರುವ ಸಾಧ್ಯತೆಯಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಮೂರು ತಿಂಗಳಿಂದ ದರೋಡೆಗೆ ಸಂಚು: ಮೂರು ತಿಂಗಳುಗಳಿಂದ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು, ಕೃತ್ಯಕ್ಕೆ 15 ದಿನಗಳಿಂದಲೂ ಸ್ಥಳವನ್ನು ನಿಗದಿ ಮಾಡಿದ್ದರು. ನವೆಂಬರ್ 19ರಂದು 12:48ರ ಸುಮಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರಿನಲ್ಲಿ ಅಶೋಕ ಪಿಲ್ಲರ್ - ಜಯನಗರ - ಡೇರಿ ಸರ್ಕಲ್‌ ಮಾರ್ಗದಲ್ಲಿ ಬಂದು, ಕಸ್ಟೋಡಿಯನ್ ವಾಹನವನ್ನು ಅಡ್ಡಗಟ್ಟಿ ತಾವು ಆರ್‌ಬಿಐ ನಿಯಂತ್ರಣಾಧಿಕಾರಿಗಳೆಂದು ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕೆಳಗಿಳಿಸಿದ್ದರು. ನಂತರ ಮತ್ತೋರ್ವ ಆರೋಪಿ ಕಸ್ಟೋಡಿಯನ್ ವಾಹನದೊಳಗೆ ಕುಳಿತು ಚಾಲಕನಿಗೆ ಡೇರಿ ಸರ್ಕಲ್‌ನತ್ತ ಚಲಾಯಿಸುವಂತೆ ಸೂಚಿಸಿದ್ದ ಎಂದು ಆಯುಕ್ತರು ವಿವರಿಸಿದರು.


ತನಿಖೆಗೆ ಸಾಕಷ್ಟು ಸವಾಲಿನದಾಗಿತ್ತು‌: ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು ಮೊಬೈಲ್ ಕಿತ್ತುಕೊಂಡು, ಅವರನ್ನು ನಿಮ್ಹಾನ್ಸ್ ಬಳಿ ಕೆಳಗಿಳಿಸಿ ಕಾಲ್ಕಿತ್ತಿದ್ದರು. ಕೃತ್ಯ ನಡೆದ ನಂತರ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗುವಷ್ಟರಲ್ಲಿ ಒಂದೂವರೆ ತಾಸು ಕಳೆದುಹೋಗಿತ್ತು. ನಂತರ ನಾವು ತನಿಖೆ ಕೈಗೊಂಡಾಗ ಆರೋಪಿಗಳು ಸಿಸಿಟಿವಿಗಳು ಇರದ ಸ್ಥಳಗಳನ್ನು ಬಳಸಿಕೊಂಡಿರುವುದು, ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡದಿರುವುದು ಹಾಗೂ ದರೋಡೆಯಾದ ಹಣದ ನೋಟುಗಳು ಸಹ ಸರಣಿ ನಂಬರ್‌ನಲ್ಲಿ ಇರದಿರುವುದು ತನಿಖೆಗೆ ಸಾಕಷ್ಟು ಸವಾಲಿನ ಸಂಗತಿಯಾಗಿತ್ತು‌ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದರು

ಕೃತ್ಯದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ, ಬೆಂಗಳೂರಿನ ಗಡಿಭಾಗದ ಜಿಲ್ಲೆಗಳ ಎಸ್‌ಪಿಗಳು, ನೆರೆಯ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಜೊತೆಗೆ, ಬೆಂಗಳೂರು ಪೊಲೀಸ್ ಇಲಾಖೆಯ ಇಬ್ಬರು ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಇಬ್ಬರು ಡಿಸಿಪಿಗಳ ನೇತೃತ್ವದ ಸುಮಾರು 200 ಜನ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ 11 ತಂಡಗಳು ಕೇರಳ, ತಮಿಳುನಾಡು, ತೆಲಂಗಾಣಗಳಿಗೆ ತೆರಳಿ ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಯಿತು ಎಂದರು.

ನಗದು ಬಹುಮಾನ ಘೋಷಣೆ: ಬೆಂಗಳೂರು ಹೊರವಲಯದಲ್ಲಿ ಹಾಗೂ ವಿವಿಧೆಡೆ ಬಚ್ಚಿಟ್ಟಿದ್ದ 5.76 ಕೋಟಿ ರೂಪಾಯಿ ಹಣವನ್ನು ಸದ್ಯಕ್ಕೆ ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ‌. ತನಿಖಾ ತಂಡಕ್ಕೆ 5 ಲಕ್ಷ ರೂ. ನಗದು ಬಹುಮಾನ ಘೋಷಿಸುತ್ತಿದ್ದೇನೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಸೆಕ್ಯುರಿಟಿ ಏಜೆನ್ಸಿಯಿಂದಲೂ ಲೋಪದೋಷ: ಹಣ ಸಾಗಿಸುವ ವಾಹನದಲ್ಲಿ ಚಾಲಕನನ್ನು ಹೊರತುಪಡಿಸಿ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ಕಸ್ಟೋಡಿಯನ್ ಸಿಬ್ಬಂದಿ ಇರಬೇಕು. ಕಸ್ಟೋಡಿಯನ್ ವಾಹನ ಒಂದೇ ಸಮಯ, ಒಂದೇ ಮಾರ್ಗವನ್ನು ಪದೇ ಪದೆ ಬಳಸಬಾರದು. ಸಿಬ್ಬಂದಿಯು ಹಣ ನಿರ್ವಹಣೆಯ ಕುರಿತು ತರಬೇತಿ ಪಡೆದಿರಬೇಕು, ಸಿಬ್ಬಂದಿಯ ಹಿನ್ನೆಲೆಯ ಕುರಿತು ಪರಿಶೀಲನೆ ಆಗಿರಬೇಕು. ಹಾಗೂ ಕಸ್ಟೋಡಿಯನ್ ಕಂಪನಿಯ ಯಾವುದೇ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದರೆ ಪೊಲೀಸರಿಗೆ ಮಾಹಿತಿ ನೀಡಿರಬೇಕು ಎಂದು ಆರ್‌ಬಿಐ ನಿಯಮಾವಳಿಗಳು ಸೂಚಿಸುತ್ತವೆ. ಆದರೆ ಇಲ್ಲಿ ಸಿಎಂಎಸ್ ಸೆಕ್ಯುರಿಟೀಸ್‌ ಕಂಪನಿಯವರಿಂದ ಕೆಲ ಲೋಪದೋಷಗಳಾಗಿರುವುದು ಕಂಡು ಬಂದಿದೆ. ಆರ್‌ಬಿಐಗೆ ಪತ್ರ ಬರೆಯಲಾಗುವುದು ಎಂದು ಆಯುಕ್ತರು ಇದೇ ವೇಳೆ ಮಾಹಿತಿ ಹಂಚಿಕೊಂಡರು.

ಪ್ರಕರಣದ ಹಿನ್ನೆಲೆ: ಎಟಿಎಂ ಯಂತ್ರಗಳಿಗೆ ತುಂಬಿಸಬೇಕಿದ್ದ 7.11 ಕೋಟಿ ರೂ. ಹಣವನ್ನು ಹಾಡಹಗಲೇ ದೋಚಿರುವ ಘಟನೆ ನವೆಂಬರ್ 19ರಂದು ಬೆಂಗಳೂರಿನ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ನಡೆದಿತ್ತು. ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಕಾರಿನಲ್ಲಿ ಬಂದಿದ್ದ 5-6 ಜನರ ತಂಡ ಎಟಿಎಂಗಳಿಗೆ ಹಣ ತುಂಬಿಸುವ ಕಸ್ಟೋಡಿಯನ್ ಕಂಪನಿಯೊಂದರ ವಾಹನವನ್ನು ತಡೆದು, ಹಣದ ಪೆಟ್ಟಿಗೆಗಳನ್ನು ದೋಚಿಕೊಂಡು ಪರಾರಿಯಾಗಿತ್ತು. ತನಿಖೆ ಕೈಗೊಂಡ ಬೆಂಗಳೂರು ಪೊಲೀಸರ ತಂಡ ಪ್ರಕರಣದಲ್ಲಿ ಪಾತ್ರ ಹೊಂದಿದ್ದ ಆರೋಪದಡಿ ಗೋವಿಂದಪುರ ಠಾಣೆಯ ಕಾನ್ಸ್​ಟೇಬಲ್ ಅಣ್ಣಪ್ಪ ನಾಯ್ಕ್​ನನ್ನು ವಶಕ್ಕೆ ಪಡೆದಿದ್ದರು.


Ads on article

Advertise in articles 1

advertising articles 2

Advertise under the article