ಶ್ರೀಲಂಕಾ :ದಿತ್ವಾ ಸೈಕ್ಲೋನ್​ಗೆ 200 ಬಲಿ: ಶ್ರೀಲಂಕಾಕ್ಕೆ ಭಾರತದಿಂದ 80 ಸಿಬ್ಬಂದಿಯ 2 NDRF ತಂಡ ರವಾನೆ..!!

ಶ್ರೀಲಂಕಾ :ದಿತ್ವಾ ಸೈಕ್ಲೋನ್​ಗೆ 200 ಬಲಿ: ಶ್ರೀಲಂಕಾಕ್ಕೆ ಭಾರತದಿಂದ 80 ಸಿಬ್ಬಂದಿಯ 2 NDRF ತಂಡ ರವಾನೆ..!!

INDIA HELPS SRI LANKA

ಕೊಲಂಬೊ: ನೆರೆ ರಾಷ್ಟ್ರದಲ್ಲಿ ರೌದ್ರನರ್ತನ ತೋರುತ್ತಿರುವ ದಿತ್ವಾ ಚಂಡಮಾರುತದಿಂದ ಭೀಕರ ಪ್ರವಾಹ, ಭೂಕುಸಿತದಲ್ಲಿ 200ಕ್ಕೂ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ ಭಾರತ ಸಹಾಯಹಸ್ತ ಚಾಚಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದೆ.

ಭಾರತವು 'ಆಪರೇಷನ್ ಸಾಗರ್ ಬಂಧು' ಹೆಸರಿನಲ್ಲಿ 80 ರಾಷ್ಟ್ರೀಯ ವಿಪತ್ತು ಕಾರ್ಯಾಚರಣೆ ಪಡೆ (ಎನ್​ಡಿಆರ್​ಎಫ್​) ಸಿಬ್ಬಂದಿಯನ್ನು ಒಳಗೊಂಡ ಎರಡು ರಕ್ಷಣಾ ತಂಡಗಳನ್ನು ದ್ವೀಪ ರಾಷ್ಟ್ರಕ್ಕೆ ಕಳುಹಿಸಿದೆ. ಈ ಮೂಲಕ 'ನೆರೆಹೊರೆ ಮೊದಲು' ಎಂಬ ತನ್ನ ನೀತಿಯನ್ನು ಪಾಲಿಸಿದೆ. ಭಾರತೀಯರೂ ಸೇರಿದಂತೆ ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​​ಗಳು ಹೈಬ್ರಿಡ್​ ರಕ್ಷಣಾ ಕಾರ್ಯಾಚರಣೆಗಳನ್ನು ಆರಂಭಿಸಿದೆ.


ಈ ಕುರಿತು ಭಾರತದ ವಿದೇಶಾಂಗ ಸಚಿವ ಡಾ.ಎಸ್​.ಜೈಶಂಕರ್ ಅವರು ಸಾಮಾಜಿಕ ಮಾಧ್ಯಮ​ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಶ್ರೀಲಂಕಾದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಎನ್​ಡಿಆರ್​​ಎಫ್​ ಸಿಬ್ಬಂದಿ ಅಲ್ಲಿಗೆ ಧಾವಿಸಿದ್ದಾರೆ. ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯ ಸಾಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.

"ಲಂಕಾದ ಕೋಟ್ಮಲೆಯಲ್ಲಿ ಸಿಲುಕಿದ್ದ ಭಾರತೀಯರು, ವಿದೇಶಿ ಪ್ರಜೆಗಳು ಮತ್ತು ಶ್ರೀಲಂಕಾದವರು ಸೇರಿದಂತೆ 24 ಮಂದಿಯನ್ನು ಗರುಡ ಕಮಾಂಡೋಗಳು ರಕ್ಷಿಸಿ ಕೊಲಂಬೊಗೆ ಸ್ಥಳಾಂತರಿಸಿವೆ" ಎಂದು ಭಾರತೀಯ ವಾಯುಪಡೆ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದೆ.


ಗಾಯಾಳುಗಳ ರಕ್ಷಣೆ: "ಇದೇ ವೇಳೆ, ಮೂರು ಗಂಭೀರ ಗಾಯಾಳುಗಳನ್ನು ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಕೊಲಂಬೊಗೆ ವಿಮಾನದಲ್ಲಿ ಸಾಗಿಸಲಾಯಿತು. ಪರಿಹಾರ ಕಾರ್ಯಾಚರಣೆಗಳನ್ನು ಬೆಂಬಲಿಸಲು ಐಎಎಫ್ ತಂಡವು ದಿಯತಲಾವಾ ಸೇನಾ ಶಿಬಿರದಿಂದ ಭೂಕುಸಿತ ಪೀಡಿತ ಕೋಟ್ಮಲೆ ಪ್ರದೇಶಕ್ಕೆ ಶ್ರೀಲಂಕಾ ಸೇನಾ ಸಿಬ್ಬಂದಿಯ ಐದು ತಂಡಗಳನ್ನು (40 ಸೈನಿಕರು) ವಿಮಾನದ ಮೂಲಕ ಸಾಗಿಸಲಾಯಿತು" ಎಂದು ಐಎಎಫ್​ ತಿಳಿಸಿದೆ.

ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್‌ನಲ್ಲಿರುವ ಎರಡು ಚೇತಕ್ ಹೆಲಿಕಾಪ್ಟರ್‌ಗಳು ಸಹ ರಕ್ಷಣಾ ಕಾರ್ಯಗಳಲ್ಲಿ ತೊಡಗಿಕೊಂಡಿವೆ. ಪ್ರವಾಹದಿಂದ ತಪ್ಪಿಸಿಕೊಂಡು ಮನೆಯೊಂದರ ಮೇಲ್ಛಾವಣಿಯಲ್ಲಿ ಸಿಲುಕಿದ್ದ ನಾಲ್ವರನ್ನು ಚೇತಕ್ ತಂಡವು ಶನಿವಾರ ರಕ್ಷಿಸಿತ್ತು.

ತ್ವರಿತ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್​ಎಡಿಆರ್​) ಕಾರ್ಯಾಚರಣೆಗಾಗಿ ಭಾರತೀಯ ವಾಯುಪಡೆ ಕೊಲಂಬೊದಲ್ಲಿ Mi-17 V5 ಹೆಲಿಕಾಪ್ಟರ್‌ಗಳನ್ನು ಸಹ ಸನ್ನದ್ಧವಾಗಿ ಇಟ್ಟಿದೆ.

ಲಂಕಾದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಐಎಎಫ್ ಸಾರಿಗೆ ವಿಮಾನಗಳನ್ನು ಮೀಸಲಿಟ್ಟಿದೆ. ತಿರುವನಂತಪುರ ಮತ್ತು ಹಿಂದನ್‌ನಿಂದ ಕಾರ್ಯಾಚರಣೆ ನಡೆಸಲಾಗುವುದು. ಜನರ ಸ್ಥಳಾಂತರದ ಜೊತೆಗೆ ಮೂಲಭೂತ ವಸ್ತುಗಳು ಮತ್ತು ವೈದ್ಯಕೀಯ ಸೌಲಭ್ಯ ಸೇರಿದಂತೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಸಹ ವಿಮಾನದಲ್ಲಿ ಸಾಗಿಸಲಾಗುತ್ತಿದೆ ಎಂದು ಐಎಎಫ್​ ತಿಳಿಸಿದೆ

ಎರಡು ವಿಮಾನಗಳಲ್ಲಿ ಪರಿಹಾರ ಸಾಮಗ್ರಿ ರವಾನೆ: ಐಎಎಫ್‌ನ ಎರಡು ಸಾರಿಗೆ ವಿಮಾನಗಳಾದ ಸಿ-130 ಜೆ ಮತ್ತು ಐಎಲ್-76ನಲ್ಲಿ ಶನಿವಾರ ಸುಮಾರು 21 ಟನ್ ಪರಿಹಾರ ಸಾಮಗ್ರಿಗಳನ್ನು ಕೊಲಂಬೊಗೆ ಸಾಗಿಸಲಾಗಿದೆ. ಹೆಚ್ಚಿನ ಮಾನವೀಯ ನೆರವು ಹೊಂದಿರುವ ಐಎನ್ಎಸ್ ಸುಕನ್ಯಾ ವಿಶಾಖಪಟ್ಟಣಂನಿಂದ ಹೊರಟಿದ್ದು, ಶೀಘ್ರದಲ್ಲೇ ಶ್ರೀಲಂಕಾ ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ದ್ವೀಪರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಭಾನುವಾರ ಸಂಜೆ 4 ಗಂಟೆಯ ವೇಳೆಗೆ ಅನುಸಾರ, 212 ಮಂದಿ ಮೃತಪಟ್ಟರೆ, 218 ಮಂದಿ ಕಾಣೆಯಾಗಿದ್ದಾರೆ. ಹವಾಮಾನ ವೈಪರೀತ್ಯದಿಂದ 2,73,606 ಕುಟುಂಬಗಳ 9,98,918 ಜನರು ಸಂಕಷ್ಟ ಎದುರಿಸುತ್ತಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಅಥವಾ ಶ್ರೀಲಂಕಾದ ಯಾವುದೇ ಭಾಗದಲ್ಲಿ ಸಹಾಯದ ಅಗತ್ಯವಿರುವ ಯಾವುದೇ ತೊಂದರೆಗೀಡಾದ ಭಾರತೀಯ ನಾಗರಿಕರು ತುರ್ತು ಸಂಖ್ಯೆ +94 773727832 ಅನ್ನು ಸಂಪರ್ಕಿಸಬಹುದು ಎಂದು ಭಾರತ ಸರ್ಕಾರ ಹೇಳಿದೆ.

Ads on article

Advertise in articles 1

advertising articles 2

Advertise under the article