ದಾವಣಗೆರೆ: 166 ಬಾರಿ 'ಓ ನೆಗೆಟಿವ್' ಗುಂಪಿನ ರಕ್ತದಾನ ಮಾಡಿ ದೇಶದಲ್ಲೇ ಎರಡನೇ ಸ್ಥಾನ ಪಡೆದ ವ್ಯಕ್ತಿ ಆದಿ ಕೇಶವ್..
ದಾವಣಗೆರೆ: 166 ಬಾರಿ ಓ ನೆಗೆಟಿವ್ ಗುಂಪಿನ ರಕ್ತದಾನ ಮಾಡಿರುವ ಆದಿ ಕೇಶವ್ ಪ್ರಕಾಶ್ ಶಾಸ್ತ್ರೀಯವರು, ಓ ನೆಗೆಟಿವ್' ಗುಂಪಿನಲ್ಲಿ ಅತಿಹೆಚ್ಚು ರಕ್ತದಾನ ಮಾಡಿದವರ ಪಟ್ಟಿಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆದಿದ್ದಾರೆ. ಆದಿ ಕೇಶವ್ ಅವರು ರಕ್ತದಾನ ಮಾಡಲು ಪ್ರಾರಂಭಿಸಿ ನವೆಂಬರ್ 10ಕ್ಕೆ 38 ವರ್ಷಗಳಾಗಿವೆ. ಈ ಸುದೀರ್ಘ ರಕ್ತದಾನ ಪಯಣದಲ್ಲಿ ಅವರು, ಹಗಲು ರಾತ್ರಿ ಎನ್ನದೇ ರಕ್ತ ಕೊಟ್ಟು ಒಟ್ಟು 166 ಜನರ, 92 ನವಜಾತ ಶಿಶುಗಳ ಪ್ರಾಣ ಉಳಿಸಿದ್ದಾರೆ.
ದಾವಣಗೆರೆಯ ವಿದ್ಯಾನಗರ ನಿವಾಸಿಯಾದ ಆದಿ ಕೇಶವ್ ಪ್ರಕಾಶ್ ಶಾಸ್ತ್ರೀ ಅವರು 1987 ನವೆಂಬರ್ 10 ರಲ್ಲಿ ಮೊದಲ ಬಾರಿ ರಕ್ತದಾನ ಮಾಡಿದರು. ಈ ಮೂಲಕ ರಕ್ತದಾನ ಪಯಣ ಆರಂಭಿಸಿದರು. ಇಲ್ಲಿ ತನಕ ಅವರು ಒಟ್ಟು 166 ಬಾರಿ ರಕ್ತದಾನ ಮಾಡಿದ್ದಾರೆ. ಓ ನೆಗೆಟಿವ್ ರಕ್ತದ ಗುಂಪಾಗಿದ್ದರಿಂದ ರಕ್ತದಾನಿ ಆದಿಯವರ ರಕ್ತಕ್ಕೆ ವಿಶೇಷ ಬೇಡಿಕೆ ಇದೆ. ರಕ್ತದಾನಿ ಶಾಸ್ತ್ರೀಯವರು ರಕ್ತದಾನ ಮಾಡಿ ಆಗ ತಾನೇ ಜನಿಸಿದ (ನ್ಯೂನಾಟಲ್ ಬೇಬಿಸ್) ಪುಟ್ಟ ಪುಟ್ಟ 92ಕ್ಕೂ ಹೆಚ್ಚು ನಜಾತಶಿಶುಗಳ ಪ್ರಾಣ ಉಳಿಸಿರುವ ಖ್ಯಾತಿ ಕೂಡ ಗಳಿಸಿದ್ದಾರೆ. ತಡ ರಾತ್ರಿ ಆಗಿದ್ದರೂ ಕೂಡ ಆಸ್ಪತ್ರೆಗೆ ತೆರಳಿ ಆದಿ ಕೇಶವ್ ಅವರು ರಕ್ತದಾನ ಮಾಡಿರುವ ಉದಾಹರಣೆಗಳಿವೆ. ಜಾತಿ, ಮತ, ಧರ್ಮ ನೋಡದೇ ರಕ್ತದಾನ ಮಾಡುವ ಆದಿಯವರು ಜಾತ್ಯತೀತ ವ್ಯಕ್ತಿ ಎಂದೇ ಖ್ಯಾತಿ ಗಳಿಸಿದ್ದಾರೆ
ಅಂದು ಪ್ರಾಣ ಉಳಿಸಿದ ಶಿಶುಗಳೇ ಇಂದು ರಕ್ತದಾನಿಗಳು: ಆದಿ ಕೇಶವ್ ಅವರು ಸಿರಿಯಾ ದೇಶದ ಮೊಹಮ್ಮದ್ ಎಂಬ ಏಳು ವರ್ಷದ ಕ್ಯಾನ್ಸರ್ ರೋಗಿಗೆ ರಕ್ತದಾನ ಮಾಡಿ ಪ್ರಾಣ ಉಳಿಸಿದ್ದರು. ಅಂದು ಅವರು ಜೀವ ಉಳಿಸಿದ್ದ, ಮಕ್ಕಳು ಇಂದು ರಕ್ತದಾನಿಗಳಾಗಿ ಜೀವ ಉಳಿಸುತ್ತಿದ್ದಾರೆ. 1987ರಲ್ಲಿ ರಕ್ತದಾನ ಮಾಡಲು ಪ್ರಾರಂಭಿಸಿದ ಆದಿ ಕೇಶವ್ ಹಾಗೂ ಸ್ನೇಹಿತರು ಲೈಫ್ಲೈನ್ ಎಂಬ ಸಂಸ್ಥೆ ಕಟ್ಟಿಕೊಂಡು ದಾವಣಗೆರೆಯಲ್ಲಿ ಒಟ್ಟು 3 ಸಾವಿರ ರಕ್ತದಾನಿಗಳನ್ನು ಹುಟುಹಾಕಿದ್ದಾರೆ. ಪ್ರತಿ ಕಾಲೇಜುಗಳಿಗೆ ತೆರಳಿ ರಕ್ತದಾನಿಗಳಾಗುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಆದಿ ಅವರ ಕುಟುಂಬಸ್ಥರು ರಕ್ತದಾನಿಗಳು: ಯಾವುದೇ ಸಮಯದಲ್ಲಿ ರಕ್ತ ಬೇಕು ಎಂದು ಆದಿ ಕೇಶವ್ ಅವರಿಗೆ ಕರೆ ಮಾಡಿ ತಿಳಿಸಿದರೆ ರಕ್ತ ಹೊಂದಿಸುತ್ತಾರೆ. ಆದಿ ಕೇಶವ್ ಅವರು ಪತ್ನಿ ಉಷಾ ಪ್ರಕಾಶ್ 12 ಬಾರಿ ರಕ್ತದಾನ ಮಾಡಿದ್ದು, ಆದಿ ಅವರ ಹಿರಿಯ ಸಹೋದರ 92 ಬಾರಿ, ಮತ್ತೊಬ್ಬ ಸಹೋದರ 25 ಬಾರಿ ರಕ್ತದಾನ ಮಾಡಿದ್ದಾರೆ. ಇವರ ಪುತ್ರಿ ಕೂಡ ರಕ್ತದಾನಿಯಾಗಿದ್ದು, ಪ್ರತಿ ಹುಟ್ಟುಹಬ್ಬದಂದು ರಕ್ತದಾನ ಮಾಡುತ್ತಿರುವುದು ವಿಶೇಷ.
ಹೆಚ್ಚು ಬಾರಿ ಓ ನೆಗೆಟಿವ್ ಗುಂಪಿನ ರಕ್ತದಾನ ಮಾಡಿದ ದೇಶದ ಎರಡನೇ ವ್ಯಕ್ತಿ: ರಕ್ತದ ಕಣಗಳನ್ನು ಪಡೆದು, ಉಳಿದ ರಕ್ತವನ್ನು ಅವರ ದೇಹಕ್ಕೆ ಸೇರಿಸುವ ಅಫೆರಿಸಿಸ್ (apheresis) ಎಂಬ ಹೊಸ ತಂತ್ರಜ್ಞಾನ ಬಂದಿದೆ. 1987ರಲ್ಲಿ ಈ ತಂತ್ರಜ್ಞಾನ ಇರಲಿಲ್ಲ. ಬದಲಾಗಿ ಇಡೀ ರಕ್ತವನ್ನು ಕೊಡಬೇಕಾಗಿತ್ತು. 1987 ನವೆಂಬರ್ 10 ರಂದು ರಕ್ತದಾನ ಮಾಡುವುದನ್ನು ಪ್ರಾರಂಭಿಸಿದೆ. ಇಲ್ಲಿವರಗೆ 164 ಬಾರಿ ರಕ್ತವನ್ನು ಕೊಟ್ಟಿದ್ದೇವೆ. ಎರಡು ಬಾರಿ ಎಸ್ಡಿಪಿ(ಸಿಂಗಲ್ ಡೋನರ್ ಪೇಟ್ಲೆಟ್ಸ್) ದಾನ ಮಾಡಿದ್ದು, ಒಟ್ಟು 166 ಬಾರಿ ರಕ್ತದಾನಿ ಮಾಡಿದ್ದೇನೆ ಎಂದು ಆದಿ ಕೇಶವ್ ಪ್ರಕಾಶ್ ಶಾಸ್ತ್ರೀ ತಿಳಿಸಿದರು.
ದೇಶದಲ್ಲಿ ಓ ನೆಗೆಟಿವ್ ರಕ್ತದಾನ ಮಾಡುವುದರಲ್ಲಿ ಮಧ್ಯ ಪ್ರದೇಶದ ವ್ಯಕ್ತಿ ಮೊದಲ ಸ್ಥಾನದಲ್ಲಿದ್ದಾರೆ. ನಾನು ಎರಡನೇ ಸ್ಥಾನದಲ್ಲಿದ್ದೇನೆ. ಓ ನೆಗೆಟಿವ್ ರಕ್ತ ನವಜಾತ ಶಿಶುಗಳಿಗೆ ತುಂಬಾ ಅವಶ್ಯಕತೆ ಇದೆ. 92 ನವಜಾತ ಶಿಶುಗಳನ್ನು ರಕ್ತ ಕೊಟ್ಟು ಬದುಕಿಸಿದ್ದೇನೆಂಬ ಹೆಮ್ಮೆ ನನಗಿದೆ. ಭಾರತ ದೇಶದಲ್ಲೇ ಮೊದಲನೇಯವ, ಎರಡನೇಯವ ಎನ್ನುವುದಕ್ಕಿಂತ ಜೀವಗಳನ್ನು ಉಳಿಸುವುದು ಮುಖ್ಯ ಎನ್ನುತ್ತಾರೆ ಆದಿ ಕೇಶವ್.
ಲೈಫ್ಲೈನ್ ಎಂಬ ಸಂಸ್ಥೆ ಹುಟ್ಟುಹಾಕಿ 3 ಸಾವಿರ ರಕ್ತದಾನಿಗಳನ್ನು ಹುಟ್ಟುಹಾಕಿದ್ವಿ, ಮೆಡಿಕಲ್ ಹಬ್ ದಾವಣಗೆರೆ ಆಗಿದ್ದರಿಂದ ಇಲ್ಲಿ ರಕ್ತದ ಅವಶ್ಯಕತೆ ಬೀಳುತ್ತಿಲ್ಲ. 166 ಜೀವಗಳನ್ನು ಉಳಿಸಲು ಪ್ರಯತ್ನ ಪಟ್ಟಿದ್ದೇನೆ. ಅದರಲ್ಲಿ 92 ನವಜಾತ ಶಿಶುಗಳು, ಐದು ಗಂಟೆ ಶಿಶು, ಐದು ದಿನದ ಶಿಶು, ಮೂರು ದಿನದ ಶಿಶುಗಳು ಸೇರಿವೆ. ಆ 92 ಮಕ್ಕಳಲ್ಲಿ ಈಗ ಹಲವರು ಬೆಳೆದು ದೊಡ್ಡವರಾಗಿ ರಕ್ತದಾನಿಗಳಾಗಿದ್ದಾರೆ. ನೀವು ನಮಗೆ ರಕ್ತದಾನ ಮಾಡಿದ್ರಿ , ಇದೀಗ ನಾವು ರಕ್ತದಾನ ಮಾಡ್ತಿದ್ದೇವೆ ಎಂದು ಆ ಮಕ್ಕಳು ನನಗೆ ಹೇಳ್ತಿದ್ದಾರೆ. ಇದು ನನಗೆ ಹೆಮ್ಮೆ. ಜೀವ ಉಳಿಸುವ ಕೆಲಸ ಯಾರಿಗೂ ಸಿಗಲ್ಲ ಅದು ನನಗೆ ಹುಡುಕಿಕೊಂಡು ಬಂದಿದೆ. ನನಗೆ 2008ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಬಂದಿದೆ. ಹೆಚ್ಚು ರಕ್ತದಾನ ಮಾಡಿದ್ದಕ್ಕಾಗಿ ಪ್ರಶಸ್ತಿ ದೊರೆತಿದೆ, ದಾವಣಗೆರೆ ಜಿಲ್ಲೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಎಸ್ಡಿಎಂ ಕಾಲೇಜಿನಿಂದ ಪ್ರಶಸ್ತಿ, ಹಲವು ಸಂಘಸಂಸ್ಥೆಗಳು ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿದ್ದಾರೆ" ಎಂದರು.
ನನ್ನ ಕುಟುಂಬಸ್ಥರು ಸಮಾಜಮುಖಿ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ: "ತುಂಬಾ ಸಂತೋಷವಾಗುತ್ತಿದೆ. ಇದು ನನ್ನ ಹೆಮ್ಮೆ. ಎಲ್ಲರೂ ಈ ರೀತಿ ಒಳ್ಳೆ ಕೆಲಸ ಮಾಡಲು ಸಾಧ್ಯವಾಗಲ್ಲ. ನಾನು 12 ಬಾರಿ, ಪತಿಯ ಸಹೋದರ 92 ಬಾರಿ ರಕ್ತದಾನ ಮಾಡಿದ್ದಾರೆ. ಮತ್ತೋರ್ವ ಸಹೋದರ 25 ಬಾರಿ ರಕ್ತದಾನ ಮಾಡಿದ್ದಾರೆ. ನನ್ನ ಮಗಳು ರಕ್ತದಾನ ಮಾಡಿದ್ದಾಳೆ. ನನ್ನ ಕುಟುಂಬಸ್ಥರು ಸಮಾಜಮುಖಿ ಕೆಲಸ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ನನ್ನ ಪತಿ ಓ ನೆಗೆಟಿವ್ ರಕ್ತದಾನ ಮಾಡುವುದರಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ರಕ್ತದಾನ ಮಾಡುವ ಶಕ್ತಿ, ಚೈತನ್ಯ ಆ ದೇವರು ಅವರಿಗೆ ಕೊಡಲಿ ಎಂದು ಆಶಿಸುತ್ತೇನೆ" ಎಂದರು ಆದಿ ಕೇಶವ್ ಅವರ ಪತ್ನಿ ಉಷಾ ಪ್ರಕಾಶ್ ತಿಳಿಸಿದರು.