ಬೆಳ್ತಂಗಡಿ :ಕಡಬದ ಯುವಕನ ಕಿರುಕುಳ ; ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ 15ರ ಬಾಲಕಿ, ಒಂದು ವಾರದ ನಂತರ ಸಾವು, ಯುವಕನ ಬಗ್ಗೆ ಪೊಲೀಸ್ ದೂರು...!!!

ಬೆಳ್ತಂಗಡಿ: ಮನೆಯಲ್ಲಿದ್ದ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ ಒಂದು ವಾರದ ನಂತರ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಮಗಳ ಸಾವಿನಲ್ಲಿ ಸಂಶಯ ಇದೆಯೆಂದು ಮೃತಳ ತಂದೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಎಂಬವರ ಪುತ್ರಿ ಹರ್ಷಿತಾ (15) ಮೃತ ಬಾಲಕಿ.
ಉಪ್ಪಿನಂಗಡಿ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಹರ್ಷಿತಾ ನವೆಂಬರ್ 4ರಂದು ತಲೆನೋವು ಎಂದು ಹೇಳಿ ಶಾಲೆಗೆ ಹೋಗದೆ ಮನೆಯಲ್ಲಿ ಕುಳಿತಿದ್ದಳು. ಮನೆಯಲ್ಲಿ ತಂದಿಟ್ಟಿದ್ದ ಕಳೆನಾಶಕ್ಕಾಗಿ ಸಿಂಪಡಿಸುವ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದು ಈ ವೇಳೆ ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಮನೆಗೆ ಬಂದು ಮಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 12ರಂದು ಹರ್ಷಿತಾ ಮೃತಪಟ್ಟಿದ್ದಾರೆ.
ಹರ್ಷಿತಾಳಿಗೆ ಕಡಬದ ಯುವಕನೊಬ್ಬ ಫೋನ್ ಮಾಡಿ ಕಿರುಕುಳ ನೀಡಿರುವ ಬಗ್ಗೆ ಮಾಹಿತಿ ಇದ್ದು, ಇದರಿಂದಾಗಿ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ಇದೆ ಎಂದು ಬಾಲಕಿ ತಂದೆ ಶ್ರೀಧರ್ ಕುಂಬಾರ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.