ಬಂಡೀಪುರ :ಕಾಡಲ್ಲಿ ಆಭರಣ ತಯಾರಕನ ಕಾರು ಅಡ್ಡಗಟ್ಟಿ 1.3 ಕೆಜಿ ಚಿನ್ನ ದರೋಡೆ..!!
ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ನಟೋರಿಯಸ್ ಕೇರಳಿಯನ್ ಗ್ಯಾಂಗ್ ಮತ್ತೆ ಆಕ್ಟಿವ್ ಆದಂತೆ ಕಾಣುತ್ತಿದ್ದು, ಆಭರಣ ತಯಾರಕನ ಕಾರು ಅಡ್ಡಗಟ್ಟಿ ಕೆಜಿಗಟ್ಟಲೇ ಚಿನ್ನ ದರೋಡೆ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಸಮೀಪ ಕಳೆದ ನ.20 ರಂದು ನಡೆದಿದ್ದು, ಇಂದು ದೂರು ದಾಖಲಾಗಿದೆ.
ಕೇರಳ ರಾಜ್ಯದ ಕ್ಯಾಲಿಕಟ್ ನಿವಾಸಿಯಾದ ಆಭರಣ ತಯಾರಕ ವಿನು(49) ಎರಡು ದಿನಗಳ ಬಳಿಕ ಗುಂಡ್ಲುಪೇಟೆ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಮಂಡ್ಯದ ರಾಜೇಶ್ ಜ್ಯುವೆಲರ್ಸ್ ಎಂಬುವರಿಂದ ಆಭರಣ ತಯಾರಿಕೆಗಾಗಿ 800 ಗ್ರಾಂ 24 ಕ್ಯಾರೆಟ್ ಚಿನ್ನದ ಗಟ್ಟಿ ಹಾಗೂ 518 ಗ್ರಾಂ 22 ಕ್ಯಾರೆಟ್ ಚಿನ್ನವನ್ನು ಬಂಡೀಪುರದ ಮೂಲೆಹೊಳೆ ಮೂಲಕ ತರುತ್ತಿದ್ದಾಗ ಎರಡು ಇನ್ನೋವಾ ಹಾಗೂ ಒಂದು ಇಟಿಯೋಸ್ ವಾಹನದಲ್ಲಿ ಬಂದ ದರೋಡೆಕೋರರು ಮೊಬೈಲ್ ನೆಟ್ವರ್ಕ್ ಸಿಗದ ಸ್ಥಳದಲ್ಲಿ ಕಾರನ್ನು ಅಡ್ಡಗಟ್ಟಿ ಕಾರು ಸಮೇತ ಅಪಹರಿಸಿದ್ದಾರೆ.
ಮೈಸೂರಿನ ವಿರಾಜಪೇಟೆಯ ರಸ್ತೆಯ ಜನನಿಬಿಡ ರಸ್ತೆಯಲ್ಲಿ ಆಭರಣ ತಯಾರಕನ ಕಾರು ನಿಲ್ಲಿಸಿ ಚಿನ್ನ ಕದ್ದೊಯ್ದು ಪರಾರಿಯಾಗಿದ್ದು, 10-12 ಮಂದಿ ಇದ್ದರು ಎಂದು ವಿನು ತಿಳಿಸಿದ್ದಾರೆ. ಚಿನ್ನವನ್ನು ತರುವಾಗ ಚಾಲಕ ಸಮೀರ್ ಹಾಗೂ ವಿನು ಮಾತ್ರ ಇದ್ದರು ಎಂದು ದೂರಿನಲ್ಲಿದೆ.
ಸ್ಥಳಕ್ಕೆ ಎಸ್ಪಿ ಭೇಟಿ: ದೂರು ದಾಖಲಾಗುತ್ತಿದ್ದಂತೆ ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಮೂಲೆಹೊಳೆ ಚೆಕ್ ಪೋಸ್ಟ್ಗೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಗುಂಡ್ಲುಪೇಟೆ ಠಾಣೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಆಭರಣ ತಯಾರಕ ವಿನು ಚಿನ್ನದ ಬಗ್ಗೆ ಕೆಲವು ದಾಖಲೆಗಳನ್ನು ಸಲ್ಲಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಪೂರ್ವನಿಯೋಜಿತವಾಗಿ ಸಂಚು ರೂಪಿಸಿ ಚಿನ್ನ ಪಡೆಯುವ ಹಾಗೂ ಚಿನ್ನ ಸಾಗಾಟದ ಎಲ್ಲಾ ಮಾರ್ಗದ ಮಾಹಿತಿಯನ್ನು ಪಡೆದು ಪ್ಲಾನ್ ಮಾಡಿ ಕೃತ್ಯ ಎಸಗಿದ್ದಾರೆ. ಈ ಹಿಂದಿನ ದರೋಡೆ ಪ್ರಕರಣ ಗಮನಿಸಿದರೇ ಕೇರಳದ ದರೋಡೆ ಗ್ಯಾಂಗ್ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ATM ವಾಹನ ತಡೆದು ₹7 ಕೋಟಿಗೂ ಹೆಚ್ಚು ಹಣ ದರೋಡೆ: ಬೆಂಗಳೂರಿನಲ್ಲಿ ನ.19 ರಂದು ಕೋಟ್ಯಂತರ ರೂಪಾಯಿ ದರೋಡೆ ನಡೆದಿತ್ತು. ಅಧಿಕಾರಿಗಳ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಎಟಿಎಂ ಯಂತ್ರಗಳಿಗೆ ಹಣ ತುಂಬಿಸಲು ಕೊಂಡೊಯ್ಯುತ್ತಿದ್ದ ವಾಹನದಿಂದ 7.11 ಕೋಟಿ ರೂಪಾಯಿ ದೋಚಿದ್ದರು. ನಗರದ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ದುಷ್ಕೃತ್ಯ ನಡೆದಿತ್ತು.
ಸರ್ಕಾರಿ ವಾಹನದಂತೆ ಸ್ಟಿಕ್ಕರ್ ಹಾಕಿದ್ದ ಇನ್ನೋವಾ ಕಾರಿನಲ್ಲಿ ಬಂದಿದ್ದ 5 ರಿಂದ 6 ಜನರಿದ್ದ ದರೋಡೆಕೋರರ ಗುಂಪು, ಸೌತ್ ಎಂಡ್ ಸರ್ಕಲ್ ಬಳಿ ಎಟಿಂಎಗೆ ಹಣ ತುಂಬಿಸಿ ಹೊರಟಿದ್ದ ಕಸ್ಟೋಡಿಯನ್ ವಾಹನವನ್ನು ತಡೆದಿದ್ದರು. ಬಳಿಕ ತಾವು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಹಾಗೂ ಆರ್‌ಬಿಐ ಎನ್ನುತ್ತಾ ಕಸ್ಟೋಡಿಯನ್ ವಾಹನದಲ್ಲಿದ್ದ ಗನ್‌ಮ್ಯಾನ್ ಸಹಿತ ಎಲ್ಲ ಸಿಬ್ಬಂದಿಯನ್ನು ಕೆಳಗಿಳಿಸಿದ್ದರು.
ಚಾಲಕನನ್ನು ಮಾತ್ರ ಕೂರಿಸಿಕೊಂಡು ಜಯದೇವ ಆಸ್ಪತ್ರೆ ಕಡೆಯಿಂದ ಡೈರಿ ಸರ್ಕಲ್ ಕಡೆಗೆ ವಾಹನವನ್ನು ಕರೆದೊಯ್ದಿದ್ದರು. ಫ್ಲೈ ಓವರ್ ಮೇಲೆ ಕಸ್ಟೋಡಿಯನ್ ವಾಹನವನ್ನು ನಿಲ್ಲಿಸಿ ಚಾಲಕನನ್ನು ಬೆದರಿಸಿ, 7.11 ಕೋಟಿ ರೂ. ಹಣವಿದ್ದ ಪೆಟ್ಟಿಗೆಯನ್ನು ತಮ್ಮ ಕಾರಿಗೆ ಹಾಕಿಕೊಂಡು ಪರಾರಿಯಾಗಿದ್ದರು.