ಹರಿಯಾಣ :ಕರ್ತವ್ಯಕ್ಕೆ ತಡವಾಗಿ ಬಂದ ವಿವಿ ಮಹಿಳಾ ಸಿಬ್ಬಂದಿಯನ್ನು ಬೆತ್ತಲಾಗಿಸಿ ಮುಟ್ಟು ಪರೀಕ್ಷಿಸಿದ ಮೇಲ್ವಿಚಾರಕ!

ರೋಹ್ಟಕ್(ಹರ್ಯಾಣ): ವಿವಿ ಕಾರ್ಯಕ್ರಮಕ್ಕೆ ರಾಜ್ಯಪಾಲರು ಬರುವ ದಿನವೇ ನಡೆದಿದ್ದ ಅವಮಾನಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ವಿವಿಯ ಮಹಿಳಾ ಸ್ವಚ್ಛತಾ ಸಿಬ್ಬಂದಿ ತಡವಾಗಿ ಕೆಲಸಕ್ಕೆ ಬಂದರು ಎಂಬ ಕಾರಣಕ್ಕೆ, ಪುರುಷ ಮೇಲ್ವಿಚಾರಕ ಸ್ತ್ರೀಯರ ಬಟ್ಟೆ ಬಿಚ್ಚಿಸಿ, ಮುಟ್ಟು ಪರೀಕ್ಷೆ ನಡೆಸಿದ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ.
ಅ.26ರಂದು ರಾಜ್ಯಪಾಲ ಅಸೀಮ್ ಕುಮಾರ್ ಘೋಷ್ 3 ದಿನಗಳ ಭೇಟಿಗಾಗಿ ಮಹರ್ಷಿ ದಯಾನಂದ್ ವಿವಿಗೆ ಆಗಮಿಸಿದ್ದರು. ಅದೇ ದಿನ ಕೆಲ ಮಹಿಳಾ ಸಿಬ್ಬಂದಿ ತಡವಾಗಿ ಕೆಲಸಕ್ಕೆ ಬಂದಿದ್ದಾರೆ. ತಾವು ಮುಟ್ಟಾಗಿದ್ದ ಕಾರಣ ಕೆಲಸಕ್ಕೆ ತಡವಾಯಿತು ಎಂದು ಕಾರಣ ಕೊಟ್ಟಿದ್ದಾರೆ.
ಸ್ಯಾನಿಟರಿ ಪ್ಯಾಡ್‌ಗಳ ಫೋಟೋ
ಇದನ್ನು ಒಪ್ಪದ ವಿಚಾರಕ, ಬೇರೆ ಮಹಿಳೆಯರಿಂದ ಹೆಂಗಸರ ವಸ್ತ್ರ ತೆಗೆಸಿ, ಅವರು ನಿಜವಾಗಿಯೂ ಮುಟ್ಟಾಗಿದ್ದಾರೆಯೇ ಎಂದು ಖುದ್ದು ಪರೀಕ್ಷೆ ನಡೆಸಿದ್ದಾನೆ. ಜತೆಗೆ ಸ್ಯಾನಿಟರಿ ಪ್ಯಾಡ್‌ಗಳ ಫೋಟೋ ತೆಗೆದುಕೊಂಡಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಘಟನೆಯಿಂದ ತೀವ್ರ ಅವಮಾನಿತರಾದ ಸಂತ್ರಸ್ತರು ಮೇಲ್ವಿಚಾರಕನ ವಿರುದ್ಧ ವಿವಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಮೇಲ್ವಿಚಾರಕನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.