
ಹಾಸನ :ಅರಕಲಗೂಡು ; ಗಣೇಶ ಮೆರವಣಿಗೆ ಮೇಲೆ ಲಾರಿ ನುಗ್ಗಿ ಎಂಟು ಮಂದಿ ದುರ್ಮರಣ! ಡಿಜೆ ಸದ್ದಿನಲ್ಲಿ ಮೈಮರೆತಿದ್ದ ಯುವಕರ ಮೇಲೆ ಹರಿದ ಯಮದೂತ ಲಾರಿ! ಭೀಕರ ದುರಂತಕ್ಕೆ ಬೆಚ್ಚಿಬಿದ್ದ ಹಾಸನ ಜನತೆ...!!

ಹಾಸನ, ಸೆ.13 : ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ದಾಗ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನುಗ್ಗಿ ಬಂದಿದ್ದು ಎಂಟು ಮಂದಿ ದುರಂತ ಸಾವಿಗೀಡಾದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ಸಂಜೆ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಸಾಗಿತ್ತು. ಹಾಸನ - ಮೈಸೂರು ರಸ್ತೆಯಲ್ಲಿ ತೆರಳುತ್ತಿದ್ದ ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಗ್ರಾಮಸ್ಥರು ಸೇರಿದ್ದು ಗಣೇಶನ ಮೂರ್ತಿಯನ್ನು ಹೊತ್ತೊಯ್ಯುವ ಸಂಭ್ರಮದಲ್ಲಿದ್ದರು. ಇದೇ ವೇಳೆ ವಿರುದ್ಧ ದಿಕ್ಕಿನಿಂದ ಅತಿ ವೇಗದಿಂದ ಬಂದ ಲಾರಿ, ಬೈಕನ್ನು ತಪ್ಪಿಸುವ ಯತ್ನದಲ್ಲಿ ಗಣೇಶ ಮೆರವಣಿಗೆಯ ಮೇಲೆ ನುಗ್ಗಿದೆ. ಜನರು ಸೇರಿದ್ದಲ್ಲಿಗೆ ನೇರವಾಗಿ ಲಾರಿ ನುಗ್ಗಿದ್ದರಿಂದ ಚಕ್ರದಡಿಗೆ ಸಿಲುಕಿದ ಹಲವರು ಸ್ಥಳದಲ್ಲೇ ನಜ್ಜುಗುಜ್ಜಾಗಿದ್ದು, ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆನಂತರ, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ರಾತ್ರಿ 7.45- 8 ಗಂಟೆ ವೇಳೆಗೆ ಘಟನೆ ನಡೆದಿದ್ದು ಏನಾಗುತ್ತಿದೆ ಎಂದು ಯೋಚಿಸುವ ಮೊದಲೇ ಲಾರಿ ರೂಪದಲ್ಲಿ ಜವರಾಯ ಎರಗಿದ್ದ.
ಲಾರಿಯಲ್ಲಿ ತಾಂತ್ರಿಕ ದೋಷವಿತ್ತೇ ಅಥವಾ ಚಾಲಕನ ನಿರ್ಲಕ್ಷ್ಯ, ಅಜಾಗರೂಕತೆಯಿಂದ ಈ ದುರಂತ ಸಂಭವಿಸಿತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶ ವಿಸರ್ಜನೆ ಹಿನ್ನೆಲೆ ಸುತ್ತಲಿನ ಗ್ರಾಮಸ್ಥರು, ಯುವಕ, ಯುವತಿಯರು ಮೆರವಣಿಗೆ ವೀಕ್ಷಣೆಗೆ ಆಗಮಿಸಿದ್ದರು. ಡಿಜೆ ಸದ್ದಿಗೆ ನೂರಾರು ಜನ ಕುಣಿದು ಕುಪ್ಪಳಿಸಿದ್ದರು. ಕ್ಷಣಮಾತ್ರದಲ್ಲಿ ಜವರಾಯನಂತೆ ಬಂದ ಟ್ರಕ್ ಎಡದಿಂದ ಬಲಕ್ಕೆ ರಸ್ತೆ ವಿಭಜಕದ ಬ್ಯಾರಿಕೇಡ್ ಮುರಿದ ನುಗ್ಗಿದ್ದು ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಗುದ್ದಿದೆ. ಇದರಿಂದ ಘೋರ ದುರಂತ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗ್ರಾಮದಲ್ಲಿ ಉಂಟಾಗಿದ್ದ ಹಬ್ಬದ ವಾತಾವರಣ ಕ್ಷಣಾರ್ಧದಲ್ಲಿ ಸ್ಮಶಾನವಾಗಿ ಬದಲಾಗಿತ್ತು. ಮೃತಪಟ್ಟವರ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದ ಯುವಕರೇ ಹೆಚ್ಚಾಗಿ ಈ ಅಪಘಾತದಲ್ಲಿ ಬಲಿಯಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ, ಜಿಲ್ಲಾಧಿಕಾರಿ ಲತಾಕುಮಾರಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಇದೇ ವೇಳೆ, ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಸಂಸದ ತೇಜಸ್ ಹಾಸನದ ಆಸ್ಪತ್ರೆಗಳಿಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಜತೆಗೆ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನೂ ಭರಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.