
ಮಂಗಳೂರು:ಏರ್ಪೋರ್ಟ್ ರಸ್ತೆಯಲ್ಲೇ ದುರ್ಗತಿ ; ವಿಮಾನದಲ್ಲಿ ಬರುವ ವಿಐಪಿಗಳಿಗೆಲ್ಲ ಕುಡ್ಲದ ಗುಂಡಿ ದರ್ಶನ..! ಮರಕಡದ 200 ಮೀಟರ್ ರಸ್ತೆ ಯಾರ ಬಲಿಗಾಗಿ ಉಳಿಸಿಕೊಂಡಿದ್ದೀರಿ..?

ಮಂಗಳೂರು, ಸೆ.10 : ಕುಳೂರಿನಲ್ಲಿ ಹೆದ್ದಾರಿ ಗುಂಡಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಜನರು ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಗುಂಡಿ ಬಗ್ಗೆ ನಿರ್ಲಕ್ಷ್ಯ ವಹಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳ ಬಗ್ಗೆಯೂ ಕಿಡಿಕಾರುತ್ತಿದ್ದಾರೆ. ಇದೇ ವೇಳೆ, ಮಂಗಳೂರು ನಗರದಿಂದ ಏರ್ಪೋರ್ಟ್ ಸಂಪರ್ಕಿಸುವ ಪ್ರಮುಖ ಸಂಪರ್ಕ ರಸ್ತೆಯಲ್ಲಿ 200 ಮೀಟರ್ ಉದ್ದಕ್ಕೆ ಗುಂಡಿ ಬಿದ್ದು ಅಧ್ವಾನಕ್ಕೀಡಾಗಿದ್ದು ಅಲ್ಲಿಯೂ ಜೀವ ಬಲಿಗಾಗಿ ಕಾಯುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
ಮಂಗಳೂರು ನಗರದಿಂದ 15 ಕಿಮೀ ದೂರದ ಬಜ್ಪೆ ಏರ್ಪೋರ್ಟಿಗೆ ಕೆಪಿಟಿ ವೃತ್ತದಿಂದ ತೊಡಗಿ ಮರಕಡದ ವರೆಗೂ ಕಾಂಕ್ರೀಟ್ ರಸ್ತೆ ಇದೆ. ಆನಂತರ, ಮರವೂರು ಸೇತುವೆಯಿಂದ ಏರ್ಪೋರ್ಟ್ ವರೆಗೂ ಇತ್ತೀಚೆಗೆ ಕಾಂಕ್ರೀಟ್ ರಸ್ತೆಯಾಗಿದೆ. ಆದರೆ ಮರವೂರು ಸೇತುವೆಯಿಂದ ಮರಕಡದ ಮಧ್ಯೆ 200 ಮೀಟರ್ ಅಂತರದಲ್ಲಿ ಡಾಮರು ರಸ್ತೆಯಿದ್ದು, ಅಲ್ಲೀಗ ಗುಂಡಿ ಎದ್ದು ರಸ್ತೆಯೇ ಇಲ್ಲವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಸಂಚರಿಸುತ್ತಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣ ಮೂಲಕ ಬರುವ ವಿಐಪಿಗಳೆಲ್ಲ ಇದೇ ರಸ್ತೆಯಲ್ಲಿ ಗುಂಡಿಗಳ ದರ್ಶನ ಆಗುತ್ತದೆ. ಆ ಕಡೆ ಮತ್ತು ಈ ಕಡೆ ಕಾಂಕ್ರೀಟ್ ರೋಡ್ ಇದ್ದರೂ ನಡುವೆ ಮಾತ್ರ ಡಾಮರು ರಸ್ತೆಯಿದ್ದು, ಪ್ರತಿ ವರ್ಷವೂ ಮಳೆಗಾಲದಲ್ಲಿ ಗುಂಡಿ ಬಿದ್ದು ಸಂಚಕಾರ ಸೃಷ್ಟಿಯಾಗುತ್ತದೆ. ಈ ಬಾರಿ ಡಾಮರು ಪೂರ್ತಿ ಎದ್ದು ಹೋಗಿ ಹಳ್ಳದ ರೀತಿಯಾಗಿದೆ. ಮಳೆಯಾದರೆ ನೀರು ನಿಂತು ದ್ವಿಚಕ್ರ ಸವಾರರು ಗುಂಡಿ ಆಳ ಅರಿಯದೆ ಹಳ್ಳಕ್ಕೆ ಬೀಳುತ್ತಿದ್ದಾರೆ.
ಇದು ರಾಜ್ಯ ಹೆದ್ದಾರಿಯಾಗಿದ್ದು, ಪಿಡಬ್ಲ್ಯೂಡಿ ಅಧಿಕಾರಿಗಳು ಕಾಲ ಕಾಲಕ್ಕೆ ತೇಪೆ ಹಚ್ಚುವ ಕೆಲಸ ಮಾಡಬೇಕು. ಗುಂಡಿ ಬಿದ್ದು ಜನರು ಹಿಡಿಶಾಪ ಹಾಕಿದ ಮೇಲಾದ್ರೂ ಸ್ಥಳೀಯ ಶಾಸಕರು ಇಲಾಖೆಯ ಅಧಿಕಾರಿಗಳಿಗೆ ಹೇಳಿ ಕೆಲಸ ಮಾಡಿಸಬೇಕಿತ್ತು. 200 ಮೀಟರ್ ರಸ್ತೆಗೆ ಕಾಂಕ್ರೀಟ್ ಮಾಡಲು 9 ಕೋಟಿ ಪಾಸ್ ಆಗಿದೆಯಾದರೂ ಟೆಂಡರ್ ಆಗಿಲ್ಲ ಎನ್ನುವ ಮಾಹಿತಿ ಇದೆ. ಯಾವಾಗ ಟೆಂಡರ್ ಆಗುತ್ತೋ ಅಂತ ಕೇಳಿದರೆ ಉತ್ತರ ಕೊಡುವವರೇ ಇಲ್ಲ. ವಿಐಪಿಗಳಿಗೆಲ್ಲ ಸ್ಮಾರ್ಟ್ ಸಿಟಿಯ ಗುಂಡಿ ರಸ್ತೆಯ ದರ್ಶನವಾಗಲಿ ಅಂತಲೇ ಮಳೆ ಕಡಿಮೆಯಾದರೂ ಹಾಗೇ ಬಿಟ್ಟಿರುವಂತಿದೆ.
ಕುಳೂರಿನ ಹೆದ್ದಾರಿಯಲ್ಲಿ ಮಹಿಳೆ ಚಲಾಯಿಸುತ್ತಿದ್ದ ಸ್ಕೂಟರ್ ಗುಂಡಿಗೆ ಬಿದ್ದು ಏಳುವಷ್ಟರಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿ ಬಂದು ಮಹಿಳೆಯ ಜೀವ ಆಹುತಿ ಪಡೆದಿತ್ತು. ಅಂತಹದ್ದೇ ಗುಂಡಿಗಳು ಮರವೂರು ಸೇತುವೆಯ ಬಳಿ ಉಂಟಾಗಿದೆ. ರಾತ್ರಿ ಹೊತ್ತಿನಲ್ಲಿ ಈ ಭಾಗದ ಬೈಕ್ ಸವಾರರು ತೀರಾ ಸಂಕಷ್ಟದಲ್ಲಿ ಪ್ರಯಾಣಿಸುತ್ತಿರುವುದಾಗಿ ಸ್ಥಳೀಯ ಗಣೇಶ್ ಅದ್ಯಪಾಡಿ ಹೇಳುತ್ತಾರೆ. ಕಣ್ಣು ಕಿವಿ ಮುಚ್ಚಿಕೊಂಡಿರುವ ರಾಜಕಾರಣಿಗಳು, ಅಧಿಕಾರಸ್ಥರು ಮಾತ್ರ ರಕ್ತ ಚೆಲ್ಲುವುದಕ್ಕಾಗಿಯೇ ಕಾಯ್ತಿದ್ದಾರೆಯೇ ಎಂದು ಅಲ್ಲಿನ ಸ್ಥಿತಿ ನೋಡಿದರೆ ಅನಿಸುತ್ತದೆ. ಅತಿ ವೇಗದಲ್ಲಿ ಏರ್ಪೋರ್ಟ್ ಬಂದು ಹೋಗುವ ಕಾರುಗಳು, ಬಜ್ಪೆ ಕಡೆಯಿಂದ ಬರುವ ಲಾರಿಗಳು ದ್ವಿಚಕ್ರ ವಾಹನ ಸವಾರರ ಪಾಲಿಗೆ ಯಮ ಸ್ವರೂಪಿಯಾಗಿ ಪರಿಣಮಿಸಿದೆ.
ಏರ್ಪೋರ್ಟ್ ರಸ್ತೆಯಿಂದ ಬಜ್ಪೆ ಪೇಟೆಯ ವರೆಗೂ ಇಂಥದ್ದೇ ಗುಂಡಿ ಬಿದ್ದ ಸ್ಥಿತಿಯಿದೆ. ಬಜ್ಪೆಯಲ್ಲಿ ರಸ್ತೆ ಕಾಮಗಾರಿ ಆರಂಭಗೊಂಡು ಐದು ವರ್ಷ ಕಳೆದರೂ, ಇನ್ನೂ ಆಸುಪಾಸು ಪೂರ್ತಿಯಾಗಿಲ್ಲ. ಅದ್ಯಪಾಡಿ, ಕರಂಬಾರು ಭಾಗದಲ್ಲೀಗ ಡಾಮರು ಕಿತ್ತುಕೊಂಡು ಬಂದು ಕಟೀಲು ಕಡೆಗೆ ಹೋಗುವ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದರೆ, ಸ್ಥಳೀಯವಾಗಿ ಬಿಜೆಪಿ ಶಾಸಕರಿದ್ದಾರೆ. ರಸ್ತೆಯ ದುಸ್ಥಿತಿ ಮಾತ್ರ ಯಾರಿಗೂ ಬೇಡವಾಗಿದೆ. ಎರಡೂ ಪಕ್ಷಗಳವರು ಅವರಿವರತ್ತ ಕೈತೋರಿಸುತ್ತ ಕಾಲ ಕಳೆಯುತ್ತಿದ್ದಾರೆ.