ಚಿಕ್ಕಮಂಗಳೂರು :ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಅತ್ತೆಯನ್ನು ಕೊಂದ ಸೊಸೆ; ಆರೋಪಿಗಳ ಬಂಧನ
ಚಿಕ್ಕಮಗಳೂರು: ಒಳಸಂಚು ರೂಪಿಸಿ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ತೆಯನ್ನು ಕೊಲೆ ಮಾಡಿ ಚಿನ್ನಾಭರಣ, ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೆ ಹಾಗೂ ಇನ್ನೊಬ್ಬ ಆರೋಪಿಯನ್ನು ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಪೊಲೀಸ್ ವರಿಷ್ಟಾಧಿಕಾರಿ ವಿಕ್ರಂ ಅಮಟೆ ಅವರು ಮಾತನಾಡಿದ್ದು, ಆ. 20 ರಂದು ದಾವಣಗೆರೆ ಡಾಲರ್ಸ್ ಕಾಲೋನಿ ನಿವಾಸಿ ಶ್ರೀಮತಿ ವೀಣಾ ರಾಮ ಚಂದ್ರಪ್ಪ ಎಂಬುವರು ಠಾಣೆಗೆ ಹಾಜರಾಗಿ ತನ್ನ ಅತ್ತಿಗೆ ಅಶ್ವಿನಿ ಅವರು ಸ್ನೇಹಿತ ಆಂಜನೇಯನ ಜೊತೆ ಸೇರಿ ಮನೆಯಲ್ಲಿದ್ದ 20 ಲಕ್ಷ ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣ ಮತ್ತು 65,000 ರೂ. ನಗದು ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದರು ಎಂದು ತಿಳಿಸಿದರು.
ಅಲ್ಲದೆ, ತಾಯಿ ಶ್ರೀಮತಿ ದೇವಿರಮ್ಮನವರ ಗಮನಕ್ಕೆ ಬಾರದ ರೀತಿಯಲ್ಲಿ 10/08/2025 ರಂದು ರಾತ್ರಿ ಊಟದಲ್ಲಿ 20 ನಿದ್ರೆ ಮಾತ್ರೆಗಳನ್ನು ಬೆರೆಸಿದ್ದಾರೆ. ಅದನ್ನು ದೇವಿರಮ್ಮ ಊಟ ಮಾಡಿದ ನಂತರ ಸುಸ್ತಾದರೂ ಸಾಯಿಸುವ ಉದ್ದೇಶದಿಂದಲೇ ಆಸ್ಪತ್ರೆಗೆ ಹೋಗಲು ತಡ ಮಾಡಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸದಿದ್ದರಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ಮಾಹಿತಿ ನೀಡಿದರು.
ಈ ವಿಷಯ ಮರೆಮಾಚಿ ತಾಯಿಯ ಮರಣದ ಕಾರಣವನ್ನು ಯಾರಿಗೂ ಗೊತ್ತಾಗದಂತೆ ಸಂಬಂಧಿಕರು ಗ್ರಾಮಸ್ಥರ ಸಮ್ಮುಖದಲ್ಲಿ ಶವ ಸಂಸ್ಕಾರ ಮಾಡಿಸಿದರು ಎಂದು ಅಜ್ಜಂಪುರ ಪೊಲೀಸ್ ಠಾಣೆಗೆ ನೀಡಿದ ದೂರನ್ನು ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು ಎಂದು ಎಸ್ಪಿ ತಿಳಿಸಿದರು.
ಪೊಲೀಸ್ ನಿರೀಕ್ಷಕ ವೀರೇಂದ್ರ ನೇತೃತ್ವದಲ್ಲಿ ತನಿಖೆ ನಡೆಸಿ ಕೊಲೆಯಾದ ದೇವಿರಮ್ಮ ಅವರ ಸೊಸೆ ಅಶ್ವಿನಿಯನ್ನು ಬಂಧಿಸಿದಾಗ ಅನೇಕ ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಶಿವನಿ ಹೋಬಳಿ ತಡಗಾ ಗ್ರಾಮದ ಅಶ್ವಿನಿ ಎರಡನೇ ಆರೋಪಿ ಆಂಜನೇಯ ಎಸ್. ಎಸ್. @ ಸ್ವಾಮಿ ಜೊತೆಯಲ್ಲಿ ಸ್ನೇಹ ಬೆಳೆಸಿದ್ದಳು. ಇದನ್ನೇ ದುರುಪಯೋಗ ಪಡಿಸಿಕೊಂಡ ಆಂಜನೇಯ ಕೊಲೆಯಾದ ದೇವಿರಮ್ಮರವರಿಗೆ ಸಂಬಂಧಿಸಿದ ಬಂಗಾರ ಮತ್ತು ಹಣವನ್ನು ಅಶ್ವಿನಿ ಮೂಲಕ ಪಡೆಯುತ್ತಿದ್ದ. ಆಂಜನೇಯ ಕೇಳಿದಾಗಲೆಲ್ಲ ಅತ್ತೆಗೆ ಗೊತ್ತಾಗದಂತೆ ಬೀರುವಿನಲ್ಲಿ ಡೂಪ್ಲಿಕೇಟ್ ಕೀ ಮೂಲಕ ಕಳವು ಮಾಡಿ ಅವನಿಗೆ ಕೊಡುತ್ತಿದ್ದಳು. ಈ ವಿಷಯ ಅತ್ತೆಗೆ ಗೊತ್ತಾಗುತ್ತದೆ ಎಂದು ಆಂಜನೇಯನೊಂದಿಗೆ ಸೇರಿ ಒಳಸಂಚು ಮಾಡಿ 20 ನಿದ್ರೆ ಮಾತ್ರೆಗಳನ್ನು ದೇವಿರಮ್ಮ ಅವರ ಊಟದಲ್ಲಿ ನೀಡಿ ಕೊಲೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ವಿವರಿಸಿದರು.
ಈ ಪ್ರಕರಣದ ಎ1 ಆರೋಪಿತೆ ಅಶ್ವಿನಿಯವರಿಂದ ಪಡೆದ ಸುಮಾರು 300 ಗ್ರಾಂ ಬಂಗಾರದ ಆಭರಣಗಳನ್ನು ಆಂಜನೇಯ ವಿವಿಧ ಬ್ಯಾಂಕ್ಗಳಲ್ಲಿ ಅಡವಿಟ್ಟಿರುವುದು ತನಿಖೆಯಿಂದ ಕಂಡು ಬಂದಿದೆ. ಇನ್ನೂ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.