
ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; ಬಜ್ಪೆ, ಸುರತ್ಕಲ್ ನಲ್ಲಿ 14 ಕಡೆ ಎನ್ಐಎ ದಾಳಿ, ಎಸ್ಡಿಪಿಐ ಮುಖಂಡರ ಮನೆಗಳಲ್ಲೂ ತಲಾಶ್..!!

ಮಂಗಳೂರು, ಆ.2: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಬಜ್ಪೆ ಮತ್ತು ಸುರತ್ಕಲ್ ವ್ಯಾಪ್ತಿಯ 14 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಬಜ್ಪೆ ಠಾಣೆ ವ್ಯಾಪ್ತಿಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತರಾದ 12 ಮಂದಿ ಆರೋಪಿಗಳ ಮನೆಗಳಿಗೆ ಎನ್ಐಎ ದಾಳಿ ನಡೆಸಿದ್ದು, ಮಾಹಿತಿಗಳನ್ನು ಕಲೆಹಾಕಿದೆ. ಇದಲ್ಲದೆ, ಸುರತ್ಕಲ್ ವ್ಯಾಪ್ತಿಯಲ್ಲಿ ಎಸ್ಡಿಪಿಐ ಮುಖಂಡರ ಕೆಲವು ಮನೆಗಳಿಗೆ ದಾಳಿ ನಡೆಸಲಾಗಿದ್ದು, ಮಾಹಿತಿ ಸಂಗ್ರಹಿಸಲಾಗಿದೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಇತ್ತೀಚೆಗೆ ಕೇಂದ್ರ ಸರಕಾರ ಎನ್ಐಎ ತನಿಖೆಗೆ ವಹಿಸಿತ್ತು. ಇದರ ಬೆನ್ನಲ್ಲೆ ಅಧಿಕಾರಿಗಳು ಮಂಗಳೂರಿಗೆ ಬಂದು ಬಜ್ಪೆ ಠಾಣೆಯಲ್ಲಿ ದಾಖಲಾದ ಪ್ರಕರಣದ ಕಡತಗಳನ್ನು ಪಡೆದಿದ್ದರು. ಆನಂತರ, ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕಿದ್ದು ಇದೀಗ ಆರೋಪಿಗಳ ಮನೆಗಳಿಗೆ ದಾಳಿ ನಡೆಸಿದ್ದಾರೆ. ಸುರತ್ಕಲ್ ನಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಫಾಜಿಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ಅದೇ ಪ್ರತೀಕಾರಕ್ಕಾಗಿ ಕೊಲೆ ನಡೆಸಲಾಗಿತ್ತು. ಆದರೆ ಇದರಲ್ಲಿ ವಿದೇಶದಿಂದ ಫಂಡಿಂಗ್ ಆಗಿದೆ ಮತ್ತು ದೇಶದ್ರೋಹಿ ಶಕ್ತಿಗಳು ಶಾಮೀಲಾಗಿವೆ ಎನ್ನುವ ಆರೋಪ ಕೇಳಿಬಂದಿತ್ತು.