ಮಂಗಳೂರು: ಕರಾವಳಿಯಲ್ಲಿ ಹೊಸ ಸಾರಿಗೆ ಸಂಸ್ಥೆ ಡಿಕೆ ಟ್ರಾನ್ಸ್ ಪೋರ್ಟ್ ಅಂಡ್ ಲಾಜಿಸ್ಟಿಕ್ ಸರ್ವಿಸಸ್ ಅಸ್ತಿತ್ವಕ್ಕೆ ; ಡಿಕೆ ಗ್ರೂಪ್ ನಿಂದ ಹೊಸ ವಹಿವಾಟು..!!

ಮಂಗಳೂರು: ಮಂಗಳೂರಿನಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದಿರುವ ಡಿಕೆ ಟ್ರಾನ್ಸ್ ಪೋರ್ಟ್ ಅಂಡ್ ಲಾಜಿಸ್ಟಿಕ್ ಸರ್ವಿಸಸ್ ಕಂಪನಿಗೆ ನಗರದ ನಾಗುರಿಯ ಗಾರ್ಡಿಯನ್ ಆಂಜೆಲ್ ಚರ್ಚ್ ಆವರಣದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ನಾಗುರಿ ಚರ್ಚ್ ಫಾದರ್ ಫೆಡ್ರಿಕ್ ಮೊಂತೇರೊ ಹೊಸ ಸಂಸ್ಥೆಯ ಪರವಾಗಿ ಪ್ರಾರ್ಥನೆ ನೆರವೇರಿಸಿ, ಶುಭ ಹಾರೈಸಿದ್ದಾರೆ.
ಚರ್ಚ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಹೊಸತಾಗಿ ಆರಂಭಗೊಂಡ ಲಾಜಿಸ್ಟಿಕ್ ಸಂಸ್ಥೆಗೆ ಒಳಿತಾಗಲಿ, ದೇಶದಲ್ಲಿ ಹೆಸರು ಮಾಡಲಿ ಎಂದು ಶುಭ ಹಾರೈಸಿದರು. ಪ್ರಾಸ್ತಾವಿಕ ಮಾತನಾಡಿದ ಡಿಕೆ ಗ್ರೂಪ್ ಆಫ್ ಸಂಸ್ಥೆಗಳ ಚೇರ್ಮನ್ ಆಲ್ವಿನ್ ಯೋಜಲ್ ನೊರೊನ್ಹಾ ಅವರು ಹೊಸತಾಗಿ ಸಾರಿಗೆ ವಲಯಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ದೇಶದಲ್ಲಿ 11 ಲಕ್ಷ ಕೋಟಿಯಷ್ಟು ವಹಿವಾಟು ಸಾರಿಗೆ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಅದರಲ್ಲಿ ಕಿಂಚಿತ್ ಕಾಣಿಕೆ ತಮ್ಮದೂ ಇರಲೆಂದು ಹೊಸ ವ್ಯವಹಾರ ಆರಂಭಿಸುತ್ತಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ನಮ್ಮ ಸಂಸ್ಥೆಯ ನಿಧಿ ಹಣಕಾಸು ಸಂಸ್ಥೆಯಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 13 ಶಾಖೆಗಳನ್ನು ತೆರೆದಿದ್ದು, ಉತ್ತಮ ವಹಿವಾಟು ನಡೆಸುತ್ತಿದ್ದೇವೆ. ಇದರ ನಡುವೆ, ಹಣಕಾಸು ವ್ಯವಹಾರ ಸುಲಭವಾಗಲು ಸೊಸೈಟಿಯನ್ನೂ ಆರಂಭಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಸಾರಿಗೆ ಉದ್ದೇಶಕ್ಕಾಗಿ 20 ವಾಹನಗಳನ್ನು ಸಂಸ್ಥೆಯ ವತಿಯಿಂದ ಇಳಿಸುವ ಗುರಿಇಟ್ಟುಕೊಂಡಿದ್ದೇವೆ ಎಂದರು.





ವಿಆರ್ ಎಲ್ ಲಾಜಿಸ್ಟಿಕ್ ಸಂಸ್ಥೆಗೆ ದೇಶದಲ್ಲಿ ದೊಡ್ಡ ಸ್ಥಾನ ಇದೆ. ಆದರೆ ಅವರು ಕೂಡ ಆರಂಭದಲ್ಲಿ ಒಂದೇ ಲಾರಿಯಿಂದ ವ್ಯವಹಾರ ಆರಂಭಿಸಿದ್ದರು. ಈಗ ಲಾಜಿಸ್ಟಿಕ್ ವಹಿವಾಟಿಗೆ ಆರು ಸಾವಿರ ಲಾರಿಗಳನ್ನು ವಿಆರ್ ಎಲ್ ಇಟ್ಟುಕೊಂಡಿದೆ. ಇದೇ ವೇಳೆ, ಮಹೀಂದ್ರಾ ಲಾಜಿಸ್ಟಿಕ್ ಸಂಸ್ಥೆಯು ದೇಶದಲ್ಲಿ 15 ಸಾವಿರ ಟ್ರಕ್ ಗಳನ್ನು ಹೊಂದಿದ್ದು ಅತಿ ದೊಡ್ಡ ಲಾಜಿಸ್ಟಿಕ್ ವಹಿವಾಟು ನಡೆಸುತ್ತದೆ. ಸಾರಿಗೆ ವಲಯದಲ್ಲೇ ಒಂದು ವರ್ಷದಲ್ಲಿ 11 ಲಕ್ಷ ಕೋಟಿ ವಹಿವಾಟು ಆಗುತ್ತೆ ಎಂದಾದರೆ, ಇದರ ವ್ಯಾಪ್ತಿ ಅಂದಾಜಿಸಬಹುದು. ನಾವು ನಿಶ್ಚಿತ ಗುರಿ ಇಟ್ಟುಕೊಂಡು ಮುನ್ನಡೆದರೆ ಯಶಸ್ಸು ಖಚಿತ ಎನ್ನುವ ಭಾವನೆ ನನ್ನದು ಎಂದು ಆಲ್ವಿನ್ ಜೋಯಲ್ ನೊರೊನ್ಹಾ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ಯಾವುದೇ ವಹಿವಾಟಿನಲ್ಲಿ ಲಾಭ ಗಳಿಸುವುದು ಸುಲಭ ಇಲ್ಲ. ಆದರೆ ಗುಣಮಟ್ಟದ ನೌಕರ ವೃಂದ ಸಿಕ್ಕಿದರೆ ಸಂಸ್ಥೆ ಅಭಿವೃದ್ಧಿಯಾಗುವುದು ನಿಶ್ಚಿತ. ವ್ಯವಹಾರ ವೃದ್ಧಿಯಾದರೆ ಉದ್ಯೋಗವೂ ಹೆಚ್ಚುವುದರಿಂದ ದೇಶ, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ. ಆಲ್ವಿನ್ ಅವರು ಹೊಸ ವ್ಯವಹಾರ ಆರಂಭಿಸಿದ್ದು, ಅವರ ಇಚ್ಛೆಯಂತೆ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಎಂದರು. ಮಹಾನಗರ ಪಾಲಿಕೆಯ ಅಳಪೆ ವಾರ್ಡಿನ ಕಾರ್ಪೊರೇಟರ್ ಶೋಭಾ ಪೂಜಾರಿ, ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ್ ಶೆಣೈ ಮತ್ತು ಡಿಕೆ ಲಾಜಿಸ್ಟಿಕ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.