ರಾಯಚೂರು :ತುಂಬಿ ಹರಿಯುತ್ತಿದ್ದ ನದಿಯಲ್ಲಿ ಈಜಲು ಹೋಗಿ ಹೆಣವಾದ ಮೂವರು ಯುವಕರು ; ಮುಗಿಲು ಮುಟ್ಟಿದ ಪೋಷಕರ ಕಣ್ಣೀರು..!!

ರಾಯಚೂರು: ಮಂತ್ರಾಲಯ ಸಮೀಪದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿ ಕಾಣೆಯಾಗಿದ್ದ ಮೂವರು ಯುವಕರ ಶವ ಪತ್ತೆಯಾಗಿದೆ.
ಹಾಸನ ಜಿಲ್ಲೆಯ ಅರಸಿಕೇರೆ ತಾಲೂಕಿನ ಜಾವಗಲ್ ಮೂಲದ ಅಜಿತ್ (20), ಸಚಿನ್ (20) ಹಾಗೂ ಪ್ರಮೋದ (19) ನದಿಗೆ ಸ್ನಾನಕ್ಕೆ ಹೋಗಿ ಕಾಣೆಯಾಗಿದ್ದರು. ಪೊಲೀಸರು ಸ್ಥಳೀಯ ಮೀನುಗಾರರೊಂದಿಗೆ ಶನಿವಾರ ಶೋಧ ಕಾರ್ಯ ನಡೆಸಿದ್ದರು. ಆದರೆ, ರಾತ್ರಿಯಾದ ಕಾರಣ ಶೋಧ ಕಾರ್ಯವನ್ನು ನಿಲ್ಲಿಸಲಾಗಿತ್ತು.
ಇಂದು ಬೆಳಗ್ಗೆ ಎಸ್‌ಡಿಆರ್‌ಎಫ್ ತಂಡ ನದಿಯಲ್ಲಿ ಶೋಧ ನಡೆಸಿತ್ತು. ಈ ವೇಳೆ ಯುವಕರ ಮೃತದೇಹಗಳು ಕಂಡುಬಂದಿದ್ದು, ಹೊರತೆಗೆಯಲಾಗಿದೆ.

ಸುದ್ದಿ ತಿಳಿದು ಪೋಷಕರು ಸ್ಥಳಕ್ಕೆ ಆಗಮಿಸಿದ್ದರು. ಮಕ್ಕಳ ಮೃತದೇಹಗಳನ್ನು ಕಂಡು ಅವರು ಕಣ್ಣೀರು ಹಾಕಿದರು. ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಹಾಸನದಿಂದ ಮಂತ್ರಾಲಯಕ್ಕೆ ಏಳು ಮಂದಿ ಯುವಕರು ಆಗಮಿಸಿದ್ದರು. ನಂತರ ಸ್ನಾನಘಟ್ಟದ ಬಳಿ ತುಂಬಿ ಹರಿಯುತ್ತಿರುವ ನದಿಯಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ನದಿಗೆ ನೀರು ಬಿಟ್ಟಿದ್ದರಿಂದ ಸೆಳೆತಕ್ಕೆ ಸಿಕ್ಕು ಕೊಚ್ಚಿಕೊಂಡು ಹೋಗಿದ್ದರು. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.