ಮಂಗಳೂರು :ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು, ಜನರೊಂದಿಗೆ ಚೆಲ್ಲಾಟವಾಡಿದರೆ ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ; ಉಸ್ತುವಾರಿ ಸಚಿವರಿಗೆ ಬಿಜೆಪಿ ಶಾಸಕ ಭರತ್ ಶೆಟ್ಟಿ ಎಚ್ಚರಿಕೆ..!!

ಮಂಗಳೂರು: ಬಿಜೆಪಿ ಸರಕಾರ ಇದ್ದಾಗ ಒಂದು ವಾರದಲ್ಲಿ 200ಕ್ಕೂ ಅಧಿಕ ಮರಳು ಪರವಾನಿಗೆ ನೀಡಿ ಸಮಸ್ಯೆ ಬಗೆಹರಿಸಲಾಗಿತ್ತು. ಆದರೆ ಕಾಂಗ್ರೆಸ್ ಆಡಳಿತಕ್ಕೆ ತಿಂಗಳು ಕಳೆದರೂ ಒಂದು ಲೈಸನ್ಸ್ ಬಿಡಿ, ಮರಳು ಸಮಸ್ಯೆಗೆ ಸ್ಪಂದಿಸುವುದಕ್ಕೇ ಸಾಧ್ಯ ಆಗುತ್ತಿಲ್ಲ. ಮರಳು, ಕೆಂಪು ಕಲ್ಲಿಗೆ ದುಬಾರಿ ತೆರಿಗೆ ಹಾಕಿ ಜನರ ತಲೆಯ ಮೇಲೆ ಚಪ್ಪಡಿ ಕಲ್ಲು ಹಾಕಿದ್ದಾರೆ. ಇಲ್ಲಿ ಸೋತ ಕಾಂಗ್ರೆಸ್ ಪುಡಾರಿಗಳು ಕೇವಲ ಹಣ ಎಣಿಸಲು ನಿಂತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ರಿಮೋಟ್ ಮೂಲಕ ಬೆಂಗಳೂರಿನಲ್ಲಿ ಆಡಳಿತ ಮಾಡುತ್ತಿದ್ದಾರೆ. ಇದೇ ರೀತಿ ಆಡಳಿತ ಮುಂದುವರಿದರೆ ಸಚಿವರನ್ನು ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರಕಾರದ ಜನ ವಿರೋಧಿ ನಡೆಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೆಂಪು ಕಲ್ಲು ಮತ್ತು ಮರಳು ಸಿಗದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಕಾವೂರಿನಲ್ಲಿ ಮಂಗಳೂರು ಉತ್ತರ ಮಂಡಲ ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಪ್ರಸ್ತುತ ಕಾಂಗ್ರೆಸ್ ಸರಕಾರ ಕುರ್ಚಿ ಉಳಿಸಿಕೊಳ್ಳುವಲ್ಲಿ, ವರ್ಗಾವಣೆ ದಂಧೆ ಮೂಲಕ ಹಣ ಮಾಡುವಲ್ಲಿ ಆಸಕ್ತಿ ಹೊಂದಿದೆ. ಜನ ಪರ ಕೆಲಸ ಮಾಡಲು ಆಸಕ್ತಿ ಕಳೆದುಕೊಂಡಿದೆ. ಹಣ ನೀಡಿ ಕೆಲಸ ಮಾಡಿಕೊಳ್ಳಿ ಎಂಬುದಷ್ಟೇ ಪ್ರಸ್ತುತ ಸರಕಾರದ ನೀತಿ. ಸೂಕ್ತ ಲೀಸ್ ಮಾಡಿ ಕೊಟ್ಟು ಮರಳು, ಕಲ್ಲಿನ ಹೆಸರಲ್ಲಿ ಸರಕಾರಕ್ಕೆ ರಾಯಲ್ಟಿ ಪಡೆಯಿರಿ. ಆದರೆ ಜನರ ಕಾರ್ಮಿಕರ ರಕ್ತ ಹೀರಿ ದುಬಾರಿ ತೆರಿಗೆ ಹಾಕಬೇಡಿ. ವನ್ ಟು ತ್ರಿಬಲ್ ರಾಯಲ್ಟಿ ಹಾಕಿದರೆ ಜನಸಾಮಾನ್ಯರು ಮನೆ ಕಟ್ಟಲು ಸಾಧ್ಯವೇ? ಎಂದು ಶಾಸಕ ಭರತ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಪೊಲೀಸರು ಕಾನೂನು ಬಿಗಿ ಮಾಡಿದರೂ ನೀವು ಸೂಕ್ತ ಪರವಾನಿಗೆ ಕೊಡಿ. ಅಕ್ರಮ ಇದೆಯೆಂದು ಪೊಲೀಸರು ಕಟ್ಟುನಿಟ್ಟು ಮಾಡಿದ್ದಾರೆ. ನಿಮಗೆ ಸಮಸ್ಯೆ ಬಗೆಹರಿಸಲು ಇಚ್ಛಾಶಕ್ತಿ ಇಲ್ಲವೇ.. ಜನರ ಕಷ್ಟ ಅರಿಯಲು ಸಾಧ್ಯವಾಗಲ್ಲವೇ ಉಸ್ತುವಾರಿ ಸಚಿವರೇ ಎಂದು ಪ್ರಶ್ನೆ ಮಾಡಿದ ಶಾಸಕರು, ಕಲ್ಲು ಮರಳು ಸಿಗದೆ ಎಲ್ಲ ರೀತಿಯ ನಿರ್ಮಾಣ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಕಟ್ಟಡ ಕಾರ್ಮಿಕರು, ಲಾರಿ ಚಾಲಕರು ಬೀದಿಗೆ ಬೀಳುತ್ತಿದ್ದಾರೆ. ಬಿಜೆಪಿ ಎಂದಿಗೂ ಇಂತಹ ಕೆಲಸ ಮಾಡಿಲ್ಲ. ಇಂತಹ ನಿಕೃಷ್ಟ ಸರಕಾರ ಇದುವರೆಗೆ ಕಂಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ ಮಾತನಾಡಿ ಕಟ್ಟಡ ನಿರ್ಮಾಣ ನಿಲ್ಲಲು ರಾಜ್ಯ ಸರಕಾರ ನೇರ ಕಾರಣ. ಕಾಂಗ್ರೆಸ್ ಸರ್ಕಾರದಲ್ಲಿ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಗ್ಯಾರಂಟಿ ನೀಡಿ ರಾಜ್ಯದ ಜನರಿಗೆ ಕುತ್ತು ತಂದಿದ್ದಾರೆ. ಸರಕಾರಿ ಸಿಬ್ಬಂದಿಗಳಿಗೆ ವೇತನ ನೀಡಲಾಗುತ್ತಿಲ್ಲ, ಜಿಲ್ಲೆಯ ಉಸ್ತುವಾರಿ ಸಚಿವರು ಒಂದು ವಾರದಲ್ಲಿ ಮರಳು ಸಮಸ್ಯೆ ಬಗೆಹರಿಸುವ ಭ ರವಸೆ ನೀಡಿ ನಾಪತ್ತೆ ಯಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ರಾಜೇಶ್ ಕೊಟ್ಟಾರಿ, ಜನಾರ್ಧನ್ ಗೌಡ, ಪೂಜಾ ಪೈ, ಶಾನವಾಜ್ ಹುಸೇನ್, ರಣದೀಪ್ ಕಾಂಚನ್, ಮಾಜಿ ಮನಪಾ ಸದಸ್ಯರು, ಜಿ.ಪಂ ಸದಸ್ಯರು ವಿವಿಧ ಉಪ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.