ಶಿವಮೊಗ್ಗ: ದೆವ್ವ ಬಿಡಿಸುವುದಾಗಿ ಹೇಳಿ ಕೋಲಿನಿಂದ ಹಲ್ಲೆ, ತಲೆಮೇಲೆ ಚಪ್ಪಡಿ ಕಲ್ಲು ; ರಾತ್ರಿ ಪೂರ್ತಿ ಚಿತ್ರಹಿಂಸೆಗೆ ಮಸಣ ಸೇರಿದ ಮಹಿಳೆ, ಮಂತ್ರವಾದಿ ಲೇಡಿ ಪೊಲೀಸರ ಬಲೆಗೆ, ಶಿವಮೊಗ್ಗದಲ್ಲಿನ್ನೂ ಮೌಢ್ಯ !
ಶಿವಮೊಗ್ಗ, ಜು.8: ದೆವ್ವ ಹಿಡಿದಿದೆ ಎಂಬ ಭ್ರಮೆಯಲ್ಲಿ ಅದರಿಂದ ಬಿಡಿಸಿಕೊಳ್ಳಲು ಹೋಗಿ ಚಿತ್ರಹಿಂಸೆಗೆ ಒಳಗಾಗಿ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಜಂಬರಗಟ್ಟೆ ಎಂಬಲ್ಲಿ ನಡೆದಿದೆ. ಜಂಬರಗಟ್ಟೆ ನಿವಾಸಿ ಗೀತಮ್ಮ (50) ಸಾವನ್ನಪ್ಪಿದ ಮಹಿಳೆ.
ಗೀತಾ ಅವರಿಗೆ ಹುಷಾರಿಲ್ಲದ ಕಾರಣ ಮಗ ಮಂತ್ರವಾದಿ ಆಶಾ ಎಂಬ ಮಹಿಳೆಯ ಬಳಿ ಕರೆದುಕೊಂಡು ಹೋಗಿದ್ದ. 'ನಿಂಗೆ ದೆವ್ವ ಹಿಡಿದಿದೆ.. ಬಿಡಿಸಬೇಕು' ಎಂದು ಗೀತಾಳಿಗೆ ಆ ಮಹಿಳೆ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ದೆವ್ವ ಬಿಡಿಸುವ ಕಾರ್ಯಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ. ಆಚರಣೆಯ ಸಂದರ್ಭ ದೆವ್ವ ಬಿಡಿಸಲು ಹೋಗಿ ಮಂತ್ರವಾದಿ ಮಹಿಳೆ ಕೋಲಿನಿಂದ ಹಲ್ಲೆ ಮಾಡಿ ಚಿತ್ರಹಿಂಸೆ ಕೊಟ್ಟ ಪರಿಣಾಮ ಗೀತಾ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದೀಗ ಮಂತ್ರವಾದಿ ಆಶಾ ವಿರುದ್ಧ ಕೊಲೆ ಕೇಸ್ ದಾಖಲಾಗಿದ್ದು, ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೆವ್ವ ಬಿಡಿಸುವ ಪೂಜೆ ನೆಪದಲ್ಲಿ ಗೀತಮ್ಮಳ ತಲೆ ಮೇಲೆ ಕಲ್ಲು ಹೊರಿಸಿ ಮರವೊಂದರ ಕೆಳಗೆ ಕೂರಿಸಿದ್ದರು. ಪೂಜೆ ಮಾಡಿದ ಕೆಲ ಹೊತ್ತಲ್ಲೆ ಗೀತಮ್ಮ ಕೂಗಾಡಲು ಶುರು ಮಾಡಿದ್ದರು. ಬಳಿಕ ಆಕೆಯ ಮೇಲೆ ತಣ್ಣೀರು ಎರಚಿದ್ದಾರೆ. ಈ ವೇಳೆ ಗೀತಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ದೆವ್ವ ಬಿಟ್ಟಿದೆ ಎಂದು ಹೇಳಿ ಮನೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದರು. ಮನೆಗೆ ಹೋದ ಬಳಿಕವೂ ಗೀತಮ್ಮಗೆ ಪ್ರಜ್ಞೆ ಬಂದಿರಲಿಲ್ಲ. ನಂತರ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು ಅಷ್ಟರಲ್ಲಿ ಮಹಿಳೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಗೀತಾಳ ಸಾವು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ದೆವ್ವ ಬಿಡಿಸುವಂತಹ ಆಚರಣೆಗಳ ಬಗ್ಗೆ ಟೀಕೆ ವ್ಯಕ್ತವಾಗಿದೆ. ಮೂಢ ನಂಬಿಕೆಯಿಂದ ಕೂಡಿದ ಇಂತಹ ಆಚರಣೆಗಳು ಜೀವಕ್ಕೆ ಸಂಚಕಾರ ತರಬಹುದು ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಆಶಾ ತನ್ನ ಮೈ ಮೇಲೆ ಚೌಡಮ್ಮ ದೇವಿ ಬರುತ್ತಾಳೆ ಎಂದು ಊರವರಲ್ಲಿ ಮೌಡ್ಯತೆ ಹಬ್ಬಿಸಿದ್ದಳು. ಇದನ್ನೇ ನಂಬಿದ್ದ ಗೀತಮ್ಮ ಕುಟುಂಬಸ್ಥರು ಆಕೆಯ ಬಳಿ ಕರೆದುಕೊಂಡು ಹೋಗಿದ್ದು ಈಗ ಮಸಣ ಸೇರುವಂತಾಗಿದೆ.

ಈ ಕುರಿತು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದು ಆಶಾ ಸೇರಿ ಮೂವರನ್ನು ಬಂಧಿಸಿದ್ದಾರೆ. ಘಟನೆ ಕುರಿತು ಮಾಹಿತಿ ನೀಡಿದ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಗೀತಮ್ಮನಿಗೆ ಮೂರು ಜನ ಮಕ್ಕಳು. ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು ಇದ್ದಾಳೆ. ಓರ್ವ ಮಗ ಜಂಬರಘಟ್ಟ ಗ್ರಾಮದಲ್ಲಿ ಗೀತಮ್ಮನ ಜೊತೆ ವಾಸವಿದ್ದಾರೆ. ಗೀತಮ್ಮಗೆ ಯಾರೋ ತೀರಿಕೊಂಡವರು ಮೈಮೇಲೆ ಬಂದಿದ್ದಾರೆ ಎಂದು ಗ್ರಾಮದವರು ಮಾತನಾಡಿಕೊಳ್ಳುತ್ತಿದ್ದರು ಎಂದು ಅವರ ಮಗ ಹೇಳಿದ್ದಾನೆ. ನಾಲ್ಕು ಗಂಟೆ ಹೊಡೆದಿದ್ದು ಗೀತಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದು ಅರ್ಧ ಗಂಟೆಗೆ ಪ್ರಾಣ ಬಿಟ್ಟಿದ್ದಾರೆ. ಘಟನೆ ಸಂಬಂಧಿಸಿ ಆಶಾ, ಆಕೆಯ ಪತಿ ಸಂತೋಷ್ ಹಾಗೂ ಮೃತಳ ಮಗ ಸಂಜಯ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೃತ ಗೀತ ಅವರ ಅಕ್ಕ ಪ್ರೇಮ ಮಾತನಾಡಿ, 'ಗೀತಾಳಿಗೆ ಶುಗರ್, ಬಿಪಿ ಹಾಗೂ ಥೈರಾಯಿಡ್ ಇತ್ತು. ಆಕೆ ಸಾವನ್ನಪ್ಪಿದ್ದನ್ನು ಸೋಮವಾರ ಬೆಳಗ್ಗೆ ನಮಗೆ ತಿಳಿಸಿದ್ದರು. ಮೊದಲು ಆಕೆಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದರು. ನಾವು ಅವರ ಊರಿಗೆ ಹೋದ ಮೇಲೆ ಎಲ್ಲಾ ವಿಷಯ ತಿಳಿಯಿತು. ಗೀತಳಿಗೆ ಮೈ ಮೇಲೆ ದೆವ್ವ ಬರ್ತಾ ಇತ್ತು ಎಂದು ತಿಳಿಸಿದ್ರು ಎಂದಿದ್ದಾರೆ.