ಒಡಿಶಾ :ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ; ಒಡಿಶಾದಲ್ಲಿ ಬೆಂಕಿ ಹಚ್ಚಿಕೊಂಡು ಎಬಿವಿಪಿ ವಿದ್ಯಾರ್ಥಿನಿ ಆತ್ಮಹತ್ಯೆ, ರಾಜ್ಯಾದ್ಯಂತ ಹೊತ್ತಿಕೊಂಡ ಕಿಚ್ಚು, ಪ್ರಾಂಶುಪಾಲ- ಪ್ರಾಧ್ಯಾಪಕ ಅರೆಸ್ಟ್, ದೂರಿತ್ತರೂ ಆಡಳಿತ ನಿರ್ಲಕ್ಷ್ಯ!

ಒಡಿಶಾ :ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ; ಒಡಿಶಾದಲ್ಲಿ ಬೆಂಕಿ ಹಚ್ಚಿಕೊಂಡು ಎಬಿವಿಪಿ ವಿದ್ಯಾರ್ಥಿನಿ ಆತ್ಮಹತ್ಯೆ, ರಾಜ್ಯಾದ್ಯಂತ ಹೊತ್ತಿಕೊಂಡ ಕಿಚ್ಚು, ಪ್ರಾಂಶುಪಾಲ- ಪ್ರಾಧ್ಯಾಪಕ ಅರೆಸ್ಟ್, ದೂರಿತ್ತರೂ ಆಡಳಿತ ನಿರ್ಲಕ್ಷ್ಯ!

ಭುವನೇಶ್ವರ್ : ಒಡಿಶಾದಲ್ಲಿ ಬಿಎಡ್ ವಿದ್ಯಾರ್ಥಿನಿಯೊಬ್ಬಳು ಪ್ರಾಧ್ಯಾಪಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ತೀವ್ರ ರಾಜಕೀಯ ಕಿಚ್ಚಿಗೆ ಕಾರಣವಾಗಿದೆ. ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಡಿ ಜುಲೈ 17ರಂದು ಒಡಿಶಾ ಬಂದ್ ಕರೆ ನೀಡಿದ್ದರೆ, ವಿಪಕ್ಷ ನಾಯಕರು ಒಡಿಶಾ ಸರಕಾರದ ಆಡಳಿತ ವೈಫಲ್ಯದಿಂದಲೇ ಯುವತಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.

ಹತ್ತು ದಿನಗಳ ಹಿಂದೆಯೇ ಜುಲೈ 1ರಂದು 22 ವರ್ಷದ ವಿದ್ಯಾರ್ಥಿನಿ ಕಾಲೇಜು ಪ್ರಾಂಶುಪಾಲರಿಗೆ ತನ್ನ ಮೇಲಿನ ಕಿರುಕುಳದ ಬಗ್ಗೆ ದೂರು ನೀಡಿದ್ದಳು. ಬಿಎಡ್ ಪ್ರಾಧ್ಯಾಪಕ ಸಮೀರ್ ಕುಮಾರ್ ಸಾಹು ಎಂಬವರು ತನಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ, ಮತ್ತೆ ಮತ್ತೆ ಲೈಂಗಿಕವಾಗಿ ಬಳಸಿಕೊಳ್ಳಲು ಒತ್ತಡ ಹೇರುತ್ತಿದ್ದಾರೆ. ನನ್ನ ಖಾಸಗಿ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸುವುದಾಗಿ ಬೆದರಿಸಿದ್ದಾರೆ. ಲೈಂಗಿಕವಾಗಿ ಸಹಕರಿಸಿದರೆ ಎಕ್ಸಾಂ ಬರೆಯಲು ಬಿಡುವುದಾಗಿ ಹೇಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಅದಕ್ಕೆ ಕಾಲೇಜು ಆಡಳಿತವೇ ಹೊಣೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಹೇಳಿದ್ದಳು. ಆದರೆ ಕಾಲೇಜು ಪ್ರಾಂಶುಪಾಲರು ನಿರ್ಲಕ್ಷ್ಯ ವಹಿಸಿದ್ದರು. ಅದಾಗಿ ವಾರ ಕಳೆಯುತ್ತಿದ್ದಂತೆ ವಿದ್ಯಾರ್ಥಿನಿ ಕಾಲೇಜು ಎದುರಲ್ಲೇ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾಳೆ. ಎರಡು ದಿನದ ಬಳಿಕ ಅಂದರೆ, ಜುಲೈ 14ರಂದು ಭುವನೇಶ್ವರ್ ಏಮ್ಸ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.


ಬಾಲಾಸೋರ್ ಜಿಲ್ಲೆಯ ಫಕೀರ್ ಮೋಹನ್ (ಸ್ವಾಯತ್ತ) ಕಾಲೇಜಿನಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಸಾವು ವಿವಾದಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಪ್ರಾಂಶುಪಾಲ ದಿಲೀಪ್ ಘೋಷ್ ಮತ್ತು ಆರೋಪಿತ ಪ್ರಾಧ್ಯಾಪಕ ಸಮೀರ್ ಕುಮಾರ್ ಸಾಹುವನ್ನು ಬಂಧಿಸಿದ್ದಾರೆ. ಇದೇ ವೇಳೆ, ಬಿಜೆಡಿ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದು, ವಿದ್ಯಾರ್ಥಿನಿ ಪೊಲೀಸ್ ದೂರು ನೀಡಿದ್ದರೂ ಕ್ರಮ ಕೈಗೊಳ್ಳದೇ ಇದ್ದುದಕ್ಕೆ ಆಕ್ರೋಶ ವ್ಯಕ್ತಪಡಿಸಿವೆ.

ಮಾಹಿತಿ ಪ್ರಕಾರ, ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿನಿಯ ದೂರಿನ ಬಗ್ಗೆ ಆಂತರಿಕ ಸಮಿತಿಯ ತನಿಖೆಗೆ ಒಳಪಡಿಸಿದ್ದರು. ಆದರೆ ಸಮಿತಿ ವರದಿಯಲ್ಲಿ ಪ್ರೊಫೆಸರ್ ಬಗ್ಗೆ ಕ್ಲೀನ್ ಚಿಟ್ ಕೊಟ್ಟಿದ್ದರಿಂದ ದೂರನ್ನು ಹಿಂಪಡೆಯುವಂತೆ ಪ್ರಾಂಶುಪಾಲರೇ ವಿದ್ಯಾರ್ಥಿನಿಗೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ರಾಜ್ಯದ ಶಿಕ್ಷಣ ಸಚಿವರಿಗೂ ಇಮೇಲ್ ಮಾಡಿದ್ದಳು. ಇಷ್ಟಾದರೂ ತನಗೆ ನ್ಯಾಯ ಸಿಕ್ಕಿಲ್ಲವೆಂದು ನೊಂದ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾಳೆ. ಎಬಿವಿಪಿಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದ ವಿದ್ಯಾರ್ಥಿನಿಗೆ ಬಿಜೆಪಿ ಸರಕಾರವೇ ನ್ಯಾಯ ಕೊಡಿಸಿಲ್ಲ, ರಕ್ಷಣೆ ಕೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಜೂನ್ 30ರಂದು ವಿದ್ಯಾರ್ಥಿನಿ ತನ್ನ ಹೆತ್ತವರಿಗೂ ವಿಷಯ ತಿಳಿಸಿದ್ದಳು. ಹಾಜರಾತಿ ಕಡಿಮೆ ಇರುವುದರಿಂದ ಎಕ್ಸಾಂ ಕುಳಿತುಕೊಳ್ಳುವುದಕ್ಕೆ ಬಿಡುತ್ತಿಲ್ಲ ಎಂದು ತಾಯಿಗೆ ತಿಳಿಸಿದ್ದಳು. ಆದರೆ ಇದೇ ವೇಳೆ, ಎಚ್ ಓಡಿ ಸಮೀರ್ ಸಾಹು ನಿನ್ನ ಬಗ್ಗೆ ಎಲ್ಲವನ್ನೂ ನಿನ್ನ ಹೆತ್ತವರಿಗೆ ಹೇಳುತ್ತೇನೆ. ನಿನ್ನ ಎಟೆಂಡೆನ್ಸ್ ಕಡಿಮೆಯಿದೆ, ಎಕ್ಸಾಂ ಕೂರಲು ಬಿಡಲ್ಲ ಎಂದು ಹೇಳಿ ಬೆದರಿಸಿದ್ದನಂತೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ, ತನಗೆ ಕಿರುಕುಳ ನೀಡುತ್ತಿರುವುದಾಗಿ ಪ್ರಾಂಶುಪಾಲರಿಗೆ ದೂರು ಹೇಳಿದ್ದಲ್ಲದೆ, ನೀವು ಕ್ರಮ ಕೈಗೊಳ್ಳದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಅದಕ್ಕೆ ಪ್ರೊಫೆಸರ್ ಮತ್ತು ಕಾಲೇಜು ಆಡಳಿತವೇ ಹೊಣೆಯಾಗಬೇಕು ಎಂದು ದೂರಿನಲ್ಲಿ ಬರೆದಿದ್ದಳು. 

ಬಿಎಡ್ ವಿದ್ಯಾರ್ಥಿನಿ ಕಾಲೇಜು ಮುಂದೆಯೇ ಈ ರೀತಿ ಸಾವನ್ನಪ್ಪಿರುವುದು ಒಡಿಶಾ ಬಿಜೆಪಿ ಸರಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೂ ಟೀಕಿಸಿದ್ದು, ಶಿಕ್ಷಣ ಸಚಿವ ಮತ್ತು ಮುಖ್ಯಮಂತ್ರಿ ರಾಜಿನಾಮೆ ನೀಡಬೇಕು. ವಿದ್ಯಾರ್ಥಿನಿ ಪೊಲೀಸರು, ಶಿಕ್ಷಣ ಸಚಿವರಿಗೆ ದೂರು ನೀಡಿದ್ದರೂ ನ್ಯಾಯ ಸಿಕ್ಕಿಲ್ಲ ಎಂದರೆ ಹೇಗೆ, ಅಲ್ಲಿನ ಆಡಳಿತ ಸ್ಥಿತಿಯ ವೈಫಲ್ಯಕ್ಕೆ ಬೇರೇನು ಸಾಕ್ಷಿ ಬೇಕು. ಒಡಿಶಾವನ್ನು ಮಣಿಪುರ ಮಾಡಬೇಡಿ, ದೇಶದ ಹೆಣ್ಮಕ್ಕಳಿಗೆ ರಕ್ಷಣೆ ಇಲ್ಲವೇ ಮೋದಿಜೀ ಎಂದು ಪ್ರಶ್ನೆ ಮಾಡಿದ್ದಾರೆ. ಮಾಜಿ ಸಿಎಂ ನವೀನ್ ಪಟ್ನಾಯಕ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಆಡಳಿತ ವೈಫಲ್ಯದ ಬಗ್ಗೆ ಬೊಟ್ಟು ಮಾಡಿದ್ದಾರೆ. ಒಡಿಶಾ ಸಿಎಂ ಮೋಹನ್ ಚರಣ್ ಮಾಜ್ಝಿ ಪ್ರತಿಕ್ರಿಯಿಸಿ, ಆರೋಪಿತ ಯಾರನ್ನೂ ಬಿಡುವುದಿಲ್ಲ. ಕಠಿಣ ಕ್ರಮಕ್ಕೆ ಗುರಿ ಮಾಡುತ್ತೇವೆ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article