ಬೆಂಗಳೂರು: ರಷ್ಯಾ‌ ಮಹಿಳೆ,‌ ಮಕ್ಕಳು‌ ಬೆಂಗಳೂರಿಗೆ ಶಿಫ್ಟ್, ಗುಹೆಯ ಜೀವನ ಹೇಗಿತ್ತು? ಗುಹೆಯಲ್ಲಿ ಏನೇನಿತ್ತು..!!

ಬೆಂಗಳೂರು: ರಷ್ಯಾ‌ ಮಹಿಳೆ,‌ ಮಕ್ಕಳು‌ ಬೆಂಗಳೂರಿಗೆ ಶಿಫ್ಟ್, ಗುಹೆಯ ಜೀವನ ಹೇಗಿತ್ತು? ಗುಹೆಯಲ್ಲಿ ಏನೇನಿತ್ತು..!!

ಗೋಕರ್ಣ: ರಾಮತೀರ್ಥ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆಯನ್ನು ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಪೊಲೀಸರು ರಕ್ಷಿಸಿ ಬೆಂಗಳೂರಿಗೆ ಸ್ಥಳಾಂತರಿಸಿದ್ದು, ಅಲ್ಲಿಂದ ಸ್ವದೇಶಕ್ಕೆ ಕಳಿಸಲು ವ್ಯವಸ್ಥೆ ಮಾಡಲಾಗಿದೆ.

ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಮಹಿಳಾ ಪೊಲೀಸ್ ಬಂದೋಬಸ್ತ್‌ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು , ಎಫ್.ಆರ್.ಆರ್.ಓ. ಕಚೇರಿಗೆ ಒಪ್ಪಿಸಿ ಸ್ವದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಮಧ್ಯೆ, ಗೋಕರ್ಣದ ದುರ್ಗಮ ಗುಹೆಯಲ್ಲಿದ್ದ ಈ ವಿದೇಶಿ ಮಹಿಳೆಯ ದಿನಚರಿ ಕುತೂಹಲದ ಜತೆಗೆ ಅಚ್ಚರಿಯನ್ನೂ ತಂದಿದೆ.

ಪೊಲೀಸರು ರಕ್ಷಿಸಿದ ಬಳಿಕ ತನ್ನ ದೇಶದ ಒಡನಾಡಿಗಳೊಂದಿಗೆ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾಳೆ. ಈ ಸಂದೇಶವನ್ನು ತನ್ನನ್ನು ರಕ್ಷಿಸಿದ ಪೊಲೀಸರಿಗೂ ಕಳುಹಿಸಿದ್ದಾಳೆ.
ಏಳು ದಿನದ ವಾಸ:
ವಿದೇಶಿ ಮಹಿಳೆ ಈ ದುರ್ಗಮ ಗುಹೆಯಲ್ಲಿ ಏಳು ದಿನ ವಾಸವಿದ್ದಳು. ಗುಹೆಯಲ್ಲಿ ಪಾಂಡುರಂಗನ ಮೂರ್ತಿ ಮತ್ತಿತರ ದೇವರುಗಳೊಂದಿಗೆ ಆಕೆ ಇದ್ದಳು. ಈ ಗುಹೆ ತೀರಾ ಅಪಾಯಕಾರಿ ಸ್ಥಿತಿಯಲ್ಲಿತ್ತು. ಇದನ್ನು ತಲುಪಲು ತೀರಾ ಕಡಿದಾದ ದಾರಿಯಲ್ಲಿ ಸಾಗಬೇಕಿದ್ದು, ತುಸು ಆಯತಪ್ಪಿದರೂ ಜಾರಿ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಇದೆ. ಹೀಗಿದ್ದರೂ ಈ ಮಹಿಳೆ ಗುಹೆಯಲ್ಲಿದ್ದಳು. ಗುಹೆಯೊಳಗೆ ನೀರು ಜಿನುಗುತ್ತಿತ್ತು. ಅದರಲ್ಲೇ ಈಕೆ ವಾಸವಾಗಿದ್ದಳು. ಇಲ್ಲಿದ್ದ ವೇಳೆ ಹಾವುಗಳೂ ಓಡಾಡುತ್ತಿದ್ದವು ಎನ್ನುವುದನ್ನು ಈಕೆಯೇ ಒಪ್ಪಿಕೊಂಡಿದ್ದಾಳೆ.

ತಾನು ಒತ್ತಡದ ಬದುಕನ್ನು ಬಿಟ್ಟು ಏಕಾಂತ ಅನುಭವಿಸಲು ಇಲ್ಲಿಗೆ ಬಂದಿದ್ದೆ ಎಂದು ಹೇಳಿರುವ ಈಕೆ ತನ್ನ ಇರುವಿಕೆಯ ಬಗ್ಗೆ ಅತಿರೇಕವಾಗಿ ಬಿಂಬಿಸಿರುವುದಕ್ಕೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

ನೀರು , ಹಾವಿನ ಜತೆ ಇರುವುದನ್ನು ದೃಢಪಡಿಸಿರುವ ಈಕೆ, ಹಾವು ಮನೆಯಲ್ಲಿದ್ದಾಗಲೂ ಬರುತ್ತದೆ. ಅದರಂತೆ ಮಳೆ ಬಂದಾಗ ನೀರು ಬರಲೇಬೇಕು, ಅದರಲ್ಲೇನೂ ವಿಶೇಷವಿಲ್ಲ ಎಂದಿದ್ದಾಳೆ.

ಗುಹೆಯಲ್ಲಿ ಹಲವು ದೇವರ ಮೂರ್ತಿಗಳಿಗೆ ಹೂವಿನ ಅಲಂಕಾರ ಮಾಡಲಾಗುತ್ತಿತ್ತು. ತನ್ನ ಪುಟ್ಟಮಕ್ಕಳಿಗೆ ಹಲವು ಆಟಿಕೆಗಳನ್ನು ಕೊಡಿಸಿದ್ದಳು. ಇವೆಲ್ಲವೂ ಗುಹೆಯಲ್ಲಿ ಪತ್ತೆಯಾಗಿವೆ.

ಪೇಟೆಗೆ ಬಂದು ಆಹಾರ ಪದಾರ್ಥಗಳನ್ನು ಖರೀದಿಸಿ ಹೋಗುತ್ತಿದ್ದಳು ಎಂಬುದಕ್ಕೆ ಹಲವು ತಿಂಡಿಯ ಪ್ಯಾಕೆಟ್‌ಗಳು ಬಿದ್ದಿರುವುದು ಸಾಕ್ಷಿಯಾಗಿದೆ. ಅಡುಗೆ ತಯಾರಿಕೆಗೆ ಕಟ್ಟಿಗೆ, ಒಲೆ ಹಾಗೂ ಪಾತ್ರೆಗಳು ಗುಹೆಯಲ್ಲಿ ಪತ್ತೆಯಾಗಿವೆ.

Ads on article

Advertise in articles 1

advertising articles 2

Advertise under the article