ಬೆಂಗಳೂರು: ಐಷಾರಾಮಿ ಜೀವನದ ಗೀಳಿಗೆ ಬಲಿ, ಒಂದು ಲಕ್ಷ ರೂ ಸಂಬಳದ ಕೆಲಸವನ್ನು ಬಿಟ್ಟು ಕಳ್ಳತನ ಕೃತ್ಯಗಳಲ್ಲಿ ಭಾಗಿಯಾದ ಬಿ ಟೆಕ್ ಪದವೀಧರ, ಪ್ರಕರಣ ದಾಖಲಿಸಿ ಯುವಕನನ್ನು ಬಂಧಿಸಿದ ಪೊಲೀಸರು.
ರಿಚರ್ಡ್ (25) ಬಂಧಿತ ಆರೋಪಿ. ಈತನಿಂದ 13 ಲಕ್ಷ ಮೌಲ್ಯದ 134 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಕೊಡಗಿನ ವಿರಾಜಪೇಟೆಯ ನೆಹರೂ ನಗರದ ನಿವಾಸಿಯಾಗಿರುವ ಆರೋಪಿಯು ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಪ್ರತಿಷ್ಠಿತ ಖಾಸಗಿ ಕಂಪೆನಿಯೊಂದರಲ್ಲಿ ಒಂದು ಲಕ್ಷ ಸಂಬಳವಿದ್ದರೂ ಆರೋಪಿಯು ಹೆಚ್ಚಿನ ಹಣದಾಸೆಗಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಜಿನ ಜೀವನಕ್ಕಾಗಿ ಅಡ್ಡದಾರಿ: ನಗರದ ಪಿಜಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಆರೋಪಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಕೈ ತುಂಬಾ ಸಂಬಳ ಪಡೆಯುತ್ತಿದ್ದ. ಯುವತಿಯರೊಂದಿಗೆ ಹೆಚ್ಚಿನ ಒಡನಾಟ, ಬ್ರ್ಯಾಂಡೆಡ್ ವಸ್ತುಗಳ ಖರೀದಿ ವ್ಯಾಮೋಹಕ್ಕೆ ಬಿದ್ದು ಅಡ್ಡದಾರಿ ತುಳಿದಿದ್ದ. ಸುಲಭವಾಗಿ ಹಣ ಗಳಿಸಲು ಹಾಗೂ ಮೋಜು ಜೀವನ ನಡೆಸಲು ಅಪರಾಧವೆಸಗಲು ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ಧಾರೆ.
ಸೆಕ್ಯೂರಿಟಿ ಗಾರ್ಡ್ ಇಲ್ಲದ ಅಂಗಡಿಗಳೇ ಈತನ ಟಾರ್ಗೆಟ್: ಗ್ರಾಹಕನ ಸೋಗಿನಲ್ಲಿ ಆರೋಪಿಯು ಭದ್ರತಾ ಸಿಬ್ಬಂದಿಗಳಿಲ್ಲದ ಚಿನ್ನಾಭರಣ ಅಂಗಡಿಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದ. ಖರೀದಿ ನೆಪದಲ್ಲಿ ತರಹೇವಾರಿ ವಿನ್ಯಾಸವಿರುವ ಚಿನ್ನಾಭರಣಗಳನ್ನು ತೋರಿಸುವಂತೆ ಸಿಬ್ಬಂದಿಗೆ ಹೇಳುತ್ತಿದ್ದ. ಬಳಿಕ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಚಿನ್ನ ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದ. ಕಳೆದ ಮಾರ್ಚ್ನಲ್ಲಿ ಸಂಪಿಗೆ ರಸ್ತೆಯಲ್ಲಿರುವ ಚಿನ್ನಾಭರಣ ಮಳಿಗೆಯೊಂದಕ್ಕೆ ತೆರಳಿ 110 ಗ್ರಾಂ ಮೌಲ್ಯದ ಮೂರು ಚಿನ್ನದ ಸರಗಳವು ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದಾಗ ಕೇರಳದ ಕೊಟ್ಟಾಯಂ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 9 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.