ಮಂಗಳೂರು :ವಿಜಯನಗರ ಕಾಲದಲ್ಲೇ ಮಂಗಳೂರು ರಾಜ್ಯ ಹೆಸರಿತ್ತು, ಸೌತ್ ಕೆನರಾ ಬ್ರಿಟಿಷರ ಬಳುವಳಿ, ಬೆಂಗಳೂರಿನಂತೆ ಬ್ರಾಂಡ್ ನೇಮ್ ಆಗಿಸಲು ಮಂಗಳೂರು ಸಹಕಾರಿ ; ಹಕ್ಕೊತ್ತಾಯ.
ಮಂಗಳೂರು, ಜುಲೈ.8: ವಿಜಯನಗರ ಅರಸರ ಕಾಲದಿಂದಲೂ ಈ ಭಾಗಕ್ಕೆ ಮಂಗಳೂರು ರಾಜ್ಯ ಎಂದು ಇತ್ತು. ಅನೇಕ ವಿದೇಶಿ ವಿದ್ವಾಂಸರು ಕೂಡ ಮಂಗಳೂರು ಹೆಸರನ್ನು ಉಲ್ಲೇಖಿಸಿದ್ದಾರೆ. ದೈವದ ಪ್ರಾಚೀನ ನುಡಿಕಟ್ಟುಗಳಲ್ಲಿ ಮಂಗಾರ ಎನ್ನುವ ಹೆಸರಲ್ಲಿ ಉಲ್ಲೇಖ ಬರುತ್ತದೆ. ಈ ಮಂಗಾರ ಎನ್ನುವ ಪದವೇ ಮುಂದೆ ಮಂಗಳೂರು ಎನ್ನುವ ಹೆಸರಾಯಿತು ಎಂದು ಹೇಳಲಾಗುತ್ತದೆ. ಬ್ರಿಟಿಷರು ಇಟ್ಟಿದ್ದ ಸೌತ್ ಕೆನರಾ ಎಂಬುದೇ ದಕ್ಷಿಣ ಕನ್ನಡ ಎಂದು ಬದಲಾಗಿತ್ತು. ಬ್ರಿಟಿಷರ ಬಳುವಳಿಯಾದ ಹೆಸರನ್ನು ಬದಲಿಸಿ, ನಮ್ಮ ಮಂಗಳೂರು ಹೆಸರನ್ನು ಬ್ರಾಂಡ್ ಮಾಡುವುದಕ್ಕಾಗಿ ಮಂಗಳೂರು ಜಿಲ್ಲೆಯಾಗಿ ಬದಲಿಸಬೇಕು ಎಂಬ ಹಕ್ಕೊತ್ತಾಯವನ್ನು ನಾವು ಮಾಡುತ್ತಿದ್ದೇವೆ ಎಂದು ತುಳುವ ಪರ ಹೋರಾಟ ಸಮಿತಿಯ ದಯಾನಂದ ಕತ್ತಲಸಾರ್ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, 1931ರಲ್ಲಿ ತುಳು ಭಾಷಾ ವಿದ್ವಾಂಸ ವಿ.ಎಸ್ ಪಣಿಯಾಡಿಯವರು ಜಿಲ್ಲಾ ಪರಿಷತ್ ನಲ್ಲಿ ದಕ್ಷಿಣ ಕನ್ನಡ ಹೆಸರಿಡಬೇಕೆಂದು ಹೇಳಿದಾಗ, ಅಲ್ಲಿದ್ದ ಬಹುಸಂಖ್ಯಾತರು ಮಂಗಳೂರು ಹೆಸರಿಡುವಂತೆ ಒತ್ತಾಯ ಮಾಡಿದ್ದರು. ನಾಡಿನ ಅತಿ ಪ್ರಾಚೀನ ದೈವದ ನುಡಿಕಟ್ಟುಗಳಲ್ಲಿ ಮಂಗಳೂರು ಹೆಸರಿನ ಉಲ್ಲೇಖ ಬರುತ್ತದೆ. ಮಂಗಳೂರು ಜಿಲ್ಲೆ ಆಗಬೇಕೆಂಬ ಒತ್ತಾಯವನ್ನು ರಾಜಕೀಯ, ಜನಾಂಗೀಯ ಭೇದ ಇಲ್ಲದ ಒಟ್ಟಾಗಿ ಮಾಡುತ್ತಿದ್ದೇವೆ. ಈಗಾಗಲೇ ಒಂದು ತಾಲೂಕಿನ ಹೆಸರಾಗಿರುವುದರಿಂದ ದಾಖಲೆಗಳಲ್ಲಿ ಮಂಗಳೂರು ಜಿಲ್ಲೆಯಾಗಿಸಲು ತೊಡಕು ಬರುವುದಿಲ್ಲ.
ಈಗಾಗಲೇ ತಾಲೂಕಿಗೆ ಸೀಮಿತವಾಗಿರುವ ಹೆಸರನ್ನು ಇಡೀ ಜಿಲ್ಲೆಗೆ ಇಟ್ಟ ನಿದರ್ಶನ ಸಾಕಷ್ಟಿದೆ. ಜಿಲ್ಲೆಯ ಯಾವ ಮೂಲೆಯವರಾದರೂ ಜಾಗತಿಕ ಮಟ್ಟದಲ್ಲಿ ಮಂಗಳೂರಿನವರು ಎಂದೇ ಬಿಂಬಿಸಿಕೊಳ್ಳುತ್ತೇವೆ. ಮಂಗಳೂರಿಗೆ ದೊಡ್ಡ ಹೆಸರಿದೆ. ಬಜಪೆಯ ವಿಮಾನ ನಿಲ್ದಾಣ, ರೈಲ್ವೇ ವಲಯ, ವಿಶ್ವವಿದ್ಯಾನಿಲಯ, ಬಂದರನ್ನು ಮಂಗಳೂರು ಅಂತಲೇ ಹೇಳುತ್ತೇವೆ. ಐಟಿ ಇನ್ನಿತರ ಕಂಪನಿಗಳನ್ನು ಆಕರ್ಷಿಸಲು, ಬ್ರಾಂಡ್ ಮಂಗಳೂರು ಎನ್ನುವ ಹೆಗ್ಗಳಿಕೆ ಬರುವುದಕ್ಕೂ ಇದು ಸಹಕಾರಿ. ಮಂಗಳೂರು ತಾಲೂಕಿನ ಹೆಸರನ್ನು ಇಡೀ ಜಿಲ್ಲೆಗೆ ಇಡುವುದರಿಂದ ಕಾನೂನಾತ್ಮಕ ತೊಂದರೆ ಬರುವುದಿಲ್ಲ. ಅತಿ ಹೆಚ್ಚು ತೆರಿಗೆ ಕಟ್ಟುವ ನಮ್ಮ ಮಂಗಳೂರು ಬೆಂಗಳೂರಿನಂತೇ ಬೆಳೆಯಲು ಈ ಹೆಸರಿನ ಅಗತ್ಯವಿದೆ ಎಂದು ಹೇಳಿದರು.
ಮುಂದೆ ಸಚಿವರು, ಮುಖ್ಯಮಂತ್ರಿ ಭೇಟಿ
ಸುದ್ದಿಗೋಷ್ಟಿಯಲ್ಲಿದ್ದ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಮ್ ಮಾತನಾಡಿ, ಮಂಗಳೂರು ಎನ್ನುವುದು ಭಾವನೆಯ ಸಂಕೇತ. ಈ ಹೆಸರಿಗೆ ದೊಡ್ಡ ಇತಿಹಾಸ, ಪರಂಪರೆ ಇದೆ. ಚಿಕ್ಕಮಗಳೂರು ಹೆಸರು ರುಕ್ಮಾಂಗ ಎನ್ನುವ ರಾಜ ತನ್ನ ಚಿಕ್ಕ ಮಗಳ ಊರು ಎನ್ನುವ ಕಾರಣಕ್ಕೆ ಆ ಹೆಸರಿಟ್ಟಿದ್ದ ಎಂದು ಇತಿಹಾಸದಲ್ಲಿ ಬರುತ್ತದೆ. ಚಿತ್ರದುರ್ಗ, ಬೆಂಗಳೂರು, ಉಡುಪಿ ಹೀಗೆ ಎಲ್ಲ ಹೆಸರುಗಳಿಗೂ ಅದರದ್ದೇ ಹಿನ್ನೆಲೆ ಇದೆ. ಮಂಗಳೂರು ಎನ್ನುವುದು ಬ್ರಾಂಡ್ ನೇಮ್ ಆಗಿರುವುದರಿಂದ ಇದಕ್ಕೆ ಎಲ್ಲರ ಒಲವು ಇದೆ. 1956ರಲ್ಲಿ ಭಾಷಾವಾರು ಪ್ರಾಂತ ವಿಂಗಡಣೆ ಆದ ಸಂದರ್ಭದಲ್ಲಿ ಹಿಂದೆ ಇದ್ದ ಸೌತ್ ಕೆನರಾ ಹೆಸರನ್ನೇ ದಕ್ಷಿಣ ಕನ್ನಡ ಎಂದು ಬದಲಿಸಲಾಗಿತ್ತು. ಈಗ ನಾವು ಮಂಗಳೂರು ಹೆಸರನ್ನೇ ಜಿಲ್ಲೆಗಿಡಬೇಕೆಂದು ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ. ಮುಂದೆ ಸಚಿವರು, ಮುಖ್ಯಮಂತ್ರಿಗಳ ಭೇಟಿಯನ್ನೂ ಮಾಡುತ್ತೇವೆ ಎಂದರು.
ಏಕಾಏಕಿ ಈ ನಿರ್ಧಾರವನ್ನು ಮಾಡಿಲ್ಲ. ಗೂಗಲ್ ಮೀಟ್ ನಲ್ಲಿ ಸರ್ವಪಕ್ಷಗಳ, ಎಲ್ಲ ಭಾಗದ 600ಕ್ಕೂ ಹೆಚ್ಚು ಜನರನ್ನು ಒಳಗೊಂಡು ಚರ್ಚೆ ಮಾಡಿದ್ದೇವೆ. ತುಳುನಾಡು, ಕುಡ್ಲ, ಮಂಗಳೂರು ಇತ್ಯಾದಿ ಹೆಸರುಗಳು ಬಂದಿದ್ದವು. ಆದರೆ ಮಂಗಳೂರು ಹೆಸರಿಗೇ ಹೆಚ್ಚು ಒತ್ತು ಮತ್ತು ಒಲವು ಸಿಕ್ಕಿದೆ ಎಂದರು. ತುಳು ಭಾಷೆಯನ್ನು ದ್ವಿತೀಯ ಭಾಷೆಯಾಗಿಸುವ ವಿಚಾರದಲ್ಲಿ ನೀವು ಯಾಕೆ ಧ್ವನಿ ಎತ್ತಿಲ್ಲ ಎಂಬ ಪ್ರಶ್ನೆಗೆ, ಅದರ ಬಗ್ಗೆ ನಾವು ಹಿಂದೆಯೇ ಧ್ವನಿ ಎತ್ತಿದ್ದೇವೆ. ಬಹಳಷ್ಟು ಪ್ರಯತ್ನವೂ ನಡೆದಿದೆ. ಹಂತ ಹಂತವಾಗಿ ಅದು ಆಗುತ್ತದೆ. ಅದರ ಒತ್ತಾಯದಲ್ಲಿ ನಾವು ಹಿಂದೆ ಬಿದ್ದಿಲ್ಲ ಎಂದು ದಯಾನಂದ ಕತ್ತಲಸಾರ್ ಹೇಳಿದರು.
ಇದೇ ವೇಳೆ ಆಟೋ ಚಾಲಕ ಮಾಲಕರ ಸಂಘದಿಂದಲೂ ಮಂಗಳೂರು ಜಿಲ್ಲೆ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಯಿತು. ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವಾ, ಕಿರಣ್ ಕೋಡಿಕಲ್, ದಿಲ್ ರಾಜ್ ಆಳ್ವ, ಅಕ್ಷಿತ್ ಸುವರ್ಣ ಸೇರಿದಂತೆ ಹಲವು ತುಳು ಪರ ಹೋರಾಟಗಾರರು ಇದ್ದರು.