ಮೈಸೂರು:ಮದುವೆಯಾದ ಎರಡೇ ತಿಂಗಳಿಗೆ ವರದಕ್ಷಿಣೆ ಕಿರುಕುಳ ; ಸರ್ಕಾರಿ ಆಸ್ಪತ್ರೆಯ ವೈದ್ಯೆಯಿಂದ ಪತಿ, ಅತ್ತೆ ಮಾವಂದಿರ ವಿರುದ್ಧ ಎಫ್ ಐ ಆರ್..!!

ಮೈಸೂರು : ಮದುವೆಯಾದ ಎರಡೇ ತಿಂಗಳಿಗೆ ವರದಕ್ಷಿಣೆ ಕಿರುಕುಳ ಕೊಟ್ಟು ಗರ್ಭಪಾತ ಮಾಡಿಸಿದ್ದಾನೆ ಎಂದು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು ಪತಿ, ಅತ್ತೆ ಮಾವಂದಿರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೆ.ಆರ್.ಪೇಟೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ನವ್ಯಾ ಸಂತ್ರಸ್ತ ಯುವತಿಯಾಗಿದ್ದು ಸರಸ್ವತಿಪುರಂ ಠಾಣೆಯಲ್ಲಿ ಪತಿ ಸೇರಿ ಐವರ ವಿರುದ್ದ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತೆ ನವ್ಯಾ ಮತ್ತು ಆಕೆಯ ತಂದೆ ಮಹದೇವ ದೂರು ನೀಡಿದ್ದಾರೆ.
ನವ್ಯಾ ಪತಿ ಅಭಿಷೇಕ್, ಮಾವ ಗೋವಿಂದರಾಜ್, ಅತ್ತೆ ಲತಾ ಮತ್ತು ಆಯುರ್ವೇದ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಜ್ಞಾನಶೇಖರ್, ವೈದ್ಯೆ ಲತಾ ಸೇರಿ ಐವರ ಮೇಲೆ ಎಫ್. ಐ.ಆರ್ ದಾಖಲಾಗಿದೆ. ಬಿಎಎಂಎಸ್ ವ್ಯಾಸಂಗ ಮಾಡಿ ವೈದ್ಯೆ ಆಗಿರುವ ನವ್ಯಾ ಅವರನ್ನು ಮೈಸೂರಿನ ಬಿಳಿಕೆರೆಯ ನಿವಾಸಿ ಚಿನ್ನದ ವ್ಯಾಪಾರಿ ಗೋವಿಂದರಾಜು ಪುತ್ರ ಅಭಿಷೇಕ್ ಜೊತೆ ಎರಡು ತಿಂಗಳ ಹಿಂದೆ ವಿವಾಹ ಮಾಡಲಾಗಿತ್ತು. ಸುಮಾರು 80 ಲಕ್ಷ ಖರ್ಚು ಮಾಡಿ ಮಗಳನ್ನ ಅದ್ದೂರಿ ಮದುವೆ ಮಾಡಿಕೊಟ್ಟಿದ್ದೆವು. ಇದೀಗ ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಮಹದೇವ್ ದೂರಿನಲ್ಲಿ ತಿಳಿಸಿದ್ದಾರೆ. ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.