ಮಂಗಳೂರು:ಎಂಆರ್ ಪಿಎಲ್ ಸ್ಥಾವರದಲ್ಲಿ ವಿಷಾನಿಲ ಸೋರಿಕೆ ; ಯುಪಿ, ಕೇರಳ ಮೂಲದ ಇಬ್ಬರು ಕಾರ್ಮಿಕರು ಸಾವು, ಗದಗ ಮೂಲದ ಇನ್ನೊಬ್ಬ ಗಂಭೀರ, ಟ್ಯಾಂಕ್ ಕ್ಲೀನಿಂಗ್ ವೇಳೆ ದುರ್ಘಟನೆ..!!

ಮಂಗಳೂರು : ಸುರತ್ಕಲ್ ಬಳಿಯಿರುವ ಎಂಆರ್ ಪಿಎಲ್ ಪೆಟ್ರೋಲಿಯಂ ಶುದ್ಧೀಕರಣ ಘಟಕದಲ್ಲಿ ಅನಿಲ ಸೋರಿಕೆಯಾಗಿದ್ದು, ಇಬ್ಬರು ಕಾರ್ಮಿಕರು ದುರಂತ ಸಾವು ಕಂಡಿದ್ದಾರೆ.
ಪೆಟ್ರೋ ಕೆಮಿಕಲ್ ಘಟಕದಲ್ಲಿ ಟ್ಯಾಂಕ್ ಗಳನ್ನು ಕ್ಲೀನ್ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮುಖ, ಕಣ್ಣಿಗೆ ಕವಚ ಧರಿಸಿ ಕಾರ್ಮಿಕರು ಟ್ಯಾಂಕ್ ಕ್ಲೀನಿಂಗ್ ಕೆಲಸ ಮಾಡುತ್ತಿದ್ದಾಗ ಮೂವರು ಗಂಭೀರ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ ಕಾರ್ಮಿಕರನ್ನು ಕೂಡಲೇ ಸುರತ್ಕಲ್ ಶ್ರೀನಿವಾಸ್ ಆಸ್ಪತ್ರೆಗೆ ಕರೆತರಲಾಗಿತ್ತು
ಅಷ್ಟರಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ.



ಮೃತರನ್ನು ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ದೀಪಚಂದ್ರ(33) ಮತ್ತು ಕೇರಳ ಮೂಲದ ಬಿಜಿಲ್ ಪ್ರಸಾದ್ (33) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಗದಗ ಮೂಲದ ವಿನಾಯಕ್ ಎಂಬ ಕಾರ್ಮಿಕನೂ ಅಸ್ವಸ್ಥಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆಟ್ರೋ ಕೆಮಿಕಲ್ಸ್ ಟ್ಯಾಂಕ್ ಗಳನ್ನು ಸಾಮಾನ್ಯವಾಗಿ ತಿಂಗಳಲ್ಲಿ ಒಂದು ಬಾರಿ ಕ್ಲೀನ್ ಮಾಡಲಾಗುತ್ತದೆ. ಅದೇ ರೀತಿ ಟ್ಯಾಂಕ್ ಕ್ಲೀನಿಂಗ್ ಮಾಡುತ್ತಿದ್ದಾಗ ಗ್ಯಾಸ್ ಸೇವನೆಗೊಳಗಾಗಿ ಕಾರ್ಮಿಕರು ಅಸ್ವಸ್ಥಕ್ಕೀಡಾಗಿದ್ದಾರೆ.
ಸದ್ಯಕ್ಕೆ ಎಂಆರ್ ಪಿಎಲ್ ಘಟಕದ ಸುರಕ್ಷತಾ ವಿಭಾಗದ ಅಧಿಕಾರಿಗಳು ಸೋರಿಕೆಯನ್ನು ನಿಲ್ಲಿಸಿದ್ದಾರೆ. ಘಟನೆ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಆರ್ ಪಿಎಲ್ ಒಳಗಡೆ ಏನೋ ಆಗಿದೆಯೆಂದು ಬೆಳಗ್ಗೆಯೇ ಸುದ್ದಿ ಹಬ್ಬಿತ್ತು. ಆದರೆ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ಇದೀಗ ಇಬ್ಬರು ಸಾವನ್ನಪ್ಪಿದ್ದನ್ನು ಪೊಲೀಸರೇ ದೃಢಪಡಿಸಿದ್ದಾರೆ.