ಮಂಗಳೂರು: ಮದ್ರಸಗಳಲ್ಲಿ ಸೌಹಾರ್ದ ಬಿತ್ತುವ ಶಿಕ್ಷಣ ನೀಡ್ತಿದ್ದೀವಾ..? ಆಡಳಿತ ವೈಫಲ್ಯಕ್ಕೆ ಜನರ ತಲೆಗೆ ಕಟ್ಟಬೇಡಿ, ಕೋಮು ದ್ವೇಷ ನೆಪದಲ್ಲಿ ಜಿಲ್ಲೆಗೆ ಕೆಟ್ಟ ಹೆಸರು ಬೇಡ, ಧರ್ಮದ ವಿಚಾರದಲ್ಲಿ ಕೈಹಾಕದಿರಿ.. ಶಾಂತಿಸಭೆ ಝಲಕ್..!!

ಮಂಗಳೂರು: ಮದ್ರಸಗಳಲ್ಲಿ ಸೌಹಾರ್ದ ಬಿತ್ತುವ ಶಿಕ್ಷಣ ನೀಡ್ತಿದ್ದೀವಾ..? ಆಡಳಿತ ವೈಫಲ್ಯಕ್ಕೆ ಜನರ ತಲೆಗೆ ಕಟ್ಟಬೇಡಿ, ಕೋಮು ದ್ವೇಷ ನೆಪದಲ್ಲಿ ಜಿಲ್ಲೆಗೆ ಕೆಟ್ಟ ಹೆಸರು ಬೇಡ, ಧರ್ಮದ ವಿಚಾರದಲ್ಲಿ ಕೈಹಾಕದಿರಿ.. ಶಾಂತಿಸಭೆ ಝಲಕ್..!!


ಮಂಗಳೂರು, ಜುಲೈ 9 : ಮಸೀದಿ, ಮದ್ರಸ, ದೇವಸ್ಥಾನ, ಚರ್ಚುಗಳಲ್ಲಿ ಕೋಮು ಸೌಹಾರ್ದ, ರಾಷ್ಟ್ರ ಭಕ್ತಿಯನ್ನು ಬಿತ್ತುವ ಶಿಕ್ಷಣ ಕೊಟ್ಟರೆ ಸಾಮರಸ್ಯ ನೆಲೆಸುತ್ತದೆ. ಮದ್ರಸಾಗಳಲ್ಲಿ ದೇಶಭಕ್ತಿಯ, ಶಾಂತಿ ಸೌಹಾರ್ದ ಬಿತ್ತುವ ಶಿಕ್ಷಣ ನೀಡುತ್ತಿದ್ದೇವಾ, ನಾವು ಧಾರ್ಮಿಕ ಕೇಂದ್ರಗಳಲ್ಲಿ ಯಾವ ರೀತಿಯ ಶಿಕ್ಷಣ ನೀಡುತ್ತಿದ್ದೇವೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಈ ಜಿಲ್ಲೆಯಲ್ಲಿ ಯಾವಾಗ ಕೋಮು ಗಲಭೆಗಳು ಆಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಲವ್ ಜಿಹಾದ್ ನೆಪದಲ್ಲಿ ಹಿಂದು ಹುಡುಗಿಯರ ವಿಚಾರ ಬಂದಾಗ, ಗೋಹತ್ಯೆ ಆದಾಗ ಕೋಮು ದ್ವೇಷದ ವಾತಾವರಣ ಆಗಿದೆ. ಇದಕ್ಕೆ ಡ್ರಗ್ಸ್, ಗಾಂಜಾ, ಇನ್ನಿತರ ಅಕ್ರಮ ದಂಧೆಗಳು ಸಾಥ್ ಕೊಟ್ಟಿವೆ. ಇವನ್ನು ಕಾನೂನು, ಪೊಲೀಸರ ಸೂಕ್ತವಾಗಿ ನಿಗ್ರಹಿಸಬೇಕಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.


ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ನಾವು ಪಕ್ಷದಲ್ಲಿ ಗೆದ್ದ ಬಳಿಕ ಸೈದ್ಧಾಂತಿಕ ಬದ್ಧತೆ ಇರಿಸಿಕೊಳ್ಳಬೇಕಾಗುತ್ತದೆ. ಪೊಲೀಸರು ಏಕಾಏಕಿ ಮಧ್ಯರಾತ್ರಿ ಹಿಂದು ಸಂಘಟನೆಗಳ ಪ್ರಮುಖರ, ಯಾವುದೇ ಅಪರಾಧ ಹಿನ್ನೆಲೆಯಿಲ್ಲದ ಆರೆಸ್ಸೆಸ್ ಹಿರಿಯರ ಮನೆಗಳಿಗೆ ಹೋಗಿ ಫೋಟೊ ತೆಗೆದರೆ ನಾವು ಸಮಾಜದಲ್ಲಿ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ನಾವು ಇದನ್ನು ಸಹಿಸಿಕೊಂಡು ಇರಬೇಕಾಗುತ್ತಾ ಎನ್ನುವ ಪ್ರಶ್ನೆ ಬರುತ್ತದೆ. ಅದಕ್ಕೆದುರಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ. ಇಲ್ಲಿ ಕೇವಲ ಭಾಷಣದ ಕಾರಣಕ್ಕೆ ಕೋಮು ಸಂಘರ್ಷ ಆಗಿಲ್ಲ ಎನ್ನುವುದನ್ನು ಗಮನಿಸಬೇಕು. ಇಲ್ಲಿನ ಕೊಲೆಗಳು ಸ್ವಯಂ ಪ್ರೇರಣೆಯಿಂದ ಆಗಿರುವುದೋ, ಯಾವುದೋ ಭಾಷಣದಿಂದ ಆಗಿರುವುದೋ ಅನ್ನುವುದನ್ನು ತನಿಖೆಯ ಮೂಲಕ ಕಂಡುಕೊಳ್ಳಿ ಎಂದು ಹರೀಶ್ ಪೂಂಜಾ ಗೃಹ ಸಚಿವರಿಗೆ ಸಲಹೆ ಇತ್ತರು.

ಕರಾವಳಿಯಲ್ಲಿ ಸಂಪ್ರದಾಯದಂತೆ ನಡೆದುಬಂದ ಗಣೇಶೋತ್ಸವವನ್ನು ರಾತ್ರಿ 11 ಗಂಟೆಗೆ ಮಿತಿ ಹಾಕಿದರೆ ಅದನ್ನು ಪ್ರಶ್ನಿಸುವ ಸ್ಥಿತಿ ಬರಬಹುದು. ಹಿಂದಿನಿಂದಲೂ ಶಾಲೆಗಳಲ್ಲಿ ಗಣೇಶೋತ್ಸವ ನಡೆದು ಬರ್ತಾ ಇತ್ತು. ಹಿಂದಿನ ಬಾರಿ ಅದನ್ನು ನಿರ್ಬಂಧಿಸಿ, ಅದರಿಂದ ಸಮಾಜದ ಮೇಲೆ ಪ್ರಚೋದನೆಗೆ ಅವಕಾಶ ಕೊಟ್ಟಂತಾಗಿತ್ತು. ಹಾಗಂತ, ಇಲ್ಲಿ ಎಲ್ಲೂ ತೊಂದರೆ ಎದುರಾಗಿಲ್ಲ. 8-9 ಮೆಡಿಕಲ್ ಕಾಲೇಜುಗಳಿವೆ, ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕೊಲೆಯ ಕಾರಣಕ್ಕೆ ಕೋಮು ಹಣೆಪಟ್ಟಿ ಕಟ್ಟುವುದು ಬೇಡ ಎಂದು ಹರೀಶ್ ಪೂಂಜ ಹೇಳಿದರು.  

ಗೋಮಾಂಸ ಎಲ್ಲಿಂದ ಬರುತ್ತದೆ ?

ಅಕ್ರಮ ಗೋಹತ್ಯೆ ಕಾರಣಕ್ಕೆ ದ್ವೇಷ ಹುಟ್ಟುವುದನ್ನು ನಾವು ನೋಡಬೇಕಾಗಿದೆ. ಇಡೀ ರಾಜ್ಯದಲ್ಲಿ ಅಧಿಕೃತ ಕಸಾಯಿಖಾನೆ ಇರುವುದು ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ. ಆದರೆ ಅಕ್ರಮವಾಗಿ ಈ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಸಾಯಿಖಾನೆಗಳಿದ್ದು ಅದಕ್ಕಾಗಿ ಗೋವುಗಳ ಕಳ್ಳತನ, ಅದರ ನೆಪದಲ್ಲಿ ಗಲಾಟೆಗಳು ಆಗಿದ್ದಿದೆ. ಮಂಗಳೂರಿನಲ್ಲಿ ಅಧಿಕೃತ ಕಸಾಯಿಖಾನೆ ನಿಂತು ಎರಡು ವರ್ಷ ಆದರೂ ಎಲ್ಲ ಕಡೆಯೂ ಬೀಫ್ ಮಾರಾಟ ಕೇಂದ್ರಗಳಿವೆ. ಅಲ್ಲಿಗೆ ಗೋಮಾಂಸ ಹೇಗೆ ಬರುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದರು.

ಆಡಳಿತ ನಡೆಸುವವರು ನಮ್ಮದು ಮಾತ್ರ ಸರಿ, ಬೇರೆಯವರದ್ದು ಸರಿ ಇಲ್ಲ ಎಂದು ಹೇಳುವುದನ್ನು ಒಪ್ಪಲಾಗದು. ಎಲ್ಲ ರೀತಿಯ ಕೊಲೆಗಳಿಗೆ, ಅಪರಾಧಗಳಿಗೆ ಡ್ರಗ್ಸ್ ಕಾರಣ ಎಂದಾದರೆ, ಇಷ್ಟೊಂದು ಡ್ರಗ್ಸ್, ಗಾಂಜಾ ಆಗ್ತಿದೆ ಎಂದರೆ ಯಾಕೆ ಇದನ್ನು ಕಂಟ್ರೋಲ್ ಮಾಡಕ್ಕಾಗಲ್ಲ. ಇದನ್ನು ನಿರ್ದಾಕ್ಷಿಣ್ಯವಾಗಿ ತಡೆಯುವ ಕೆಲಸ ಆಗಬೇಕು. ಇನ್ನು ಎರಡು ವರ್ಷಗಳಿಂದ ಸಿಆರ್ ಜೆಡ್ ಮರಳು ತೆಗೆಯಲು ಅವಕಾಶ ಇಲ್ಲ. ಆದರೆ ಅಕ್ರಮವಾಗಿ ತೆಗೆಯುವವರು ತೆಗೆದು ಮಾರಾಟ ಮಾಡುತ್ತಾರೆ. ಇದರಿಂದ ಎರಡು ವರ್ಷದಲ್ಲಿ ಎಷ್ಟು ನಷ್ಟ ಆಗಿರಲಿಕ್ಕಿಲ್ಲ ಎಂದು ಕೇಳಿದರು ಶಾಸಕ ಕಾಮತ್.

ಸುಳ್ಯದಲ್ಲಿ ಇಬ್ಬರು ಮಹಿಳೆಯರ ಮನೆಗೆ ರಾತ್ರಿ ವೇಳೆ ಪೊಲೀಸರು ಹೋಗಿ ಅವರ ಫೋಟೊ ತೆಗೆದಿದ್ದಾರೆ. ಇದು ಒಂದು ದಿನ ಅಲ್ಲ, ಏಳು ದಿನವೂ ಮಾಡಿದ್ದಾರೆ. ಯಾರು ಪೊಲೀಸರು ಈ ಕೃತೃ ಮಾಡಿದ್ದಾರೆ, ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ, ಗೃಹ ಸಚಿವರಿಗೆ ಒತ್ತಾಯಿಸಿದರು.

ಶಾಸಕ ಭರತ್ ಶೆಟ್ಟಿ ಮಾತನಾಡಿ, ಸೌಹಾರ್ದ ಇಡೀ ಜಗತ್ತಿನಲ್ಲಿ ಇಲ್ಲ. ಅದನ್ನು ನಾವು ಇಲ್ಲಿ ಕುಳಿತು ಸಭೆ ನಡೆಸುವುದರಿಂದ ಮಾಡಲು ಸಾಧ್ಯವಿಲ್ಲ. ಆದರೆ ಶಾಂತಿ ನೆಲೆಸುವಂತಾಗಲು ಜನರ ಮನಸ್ಥಿತಿ ಬದಲಿಸಬೇಕು. ಅಪರಾಧ ನಡೆಯದಂತೆ ನೋಡಿಕೊಳ್ಳಬೇಕು. ಎಲ್ಲಿ ಸಮಸ್ಯೆ ಇದೆಯೋ ಅದನ್ನು ಸರಿಮಾಡಿದರೆ ಎಲ್ಲವೂ ಸರಿಯಾಗುತ್ತದೆ. ಗೋಕಳ್ಳತನ ಒಂದು ಅಪರಾಧ, ಅದನ್ನು ಆಗದಂತೆ ಪೊಲೀಸರು ತಡೆದರೆ ಗಲಾಟೆಗೆ ಅವಕಾಶ ಇರುವುದಿಲ್ಲ. ಮರಳು ದಂಧೆ ಈಗ ಸರಿಯಾಗಿದ್ದು ಹೇಗೆ.. ಕಠಿಣ ಕ್ರಮ ಆಗಬೇಕೇ ಹೊರತು ಅದು ಆಗದೇ ಇದ್ದರೆ ನಾವು ಸಭೆ ಮಾಡ್ತಾ ಇರಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾಜಿ ಶಾಸಕರು, ವಿವಿಧ ಪಕ್ಷಗಳ ಮುಖಂಡರು ಸೇರಿದಂತೆ 30ಕ್ಕೂ ಹೆಚ್ಚು ಜನ ಮಾತನಾಡಿದರು. ಸಭೆಯ ಕೊನೆಯಲ್ಲಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗೃಹ ಸಚಿವರ ಬಗ್ಗೆಯೇ ಪ್ರಶ್ನೆ ಎತ್ತಿದರು. ನೀವು ಇಷ್ಟು ಬಾರಿ ಮಂಗಳೂರಿಗೆ ಬಂದರೂ, ಎರಡು ವರ್ಷದಲ್ಲಿ ಒಮ್ಮೆಯೂ ಇಲ್ಲಿನ ಶಾಸಕರು, ಸಂಸದರ ಜೊತೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾತಾಡಿಲ್ಲ. ಜನರ ಸಮಸ್ಯೆಗಳನ್ನು ನಿಮ್ಮ ಮುಂದಿಡುವುದು ಶಾಸಕರ ಕರ್ತವ್ಯ ಎಂದರು.

ಆಡಳಿತ ವೈಫಲ್ಯ ಜನರ ತಲೆಗೆ ಕಟ್ಟಬೇಡಿ

ಸರ್ಕಾರ, ಪೊಲೀಸರ ಕೆಲಸ ಕೇವಲ ಭಯ ಮೂಡಿಸುವುದಕ್ಕಲ್ಲ. ಶಾಂತಿ ಸಭೆಗೂ ಎಲ್ಲರನ್ನೂ ಯಾಕೆ ಕರೆದಿಲ್ಲ. ಈ ಸಭೆಯ ಪಟ್ಟಿ ತಯಾರಿಸುವಾಗ ನಮ್ಮ ಮಾತನ್ನು ಕೇಳಬಹುದಿತ್ತಲ್ವಾ.. ಜನರ ಪರವಾಗಿ ನಾವು ಇಲ್ಲ ಎನ್ನುವ ಭಾವನೆ ಬರುವಂತೆ ಆಡಳಿತದ ನಡೆ ಇರಬಾರದು ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು. ಸರಕಾರದ ಆಡಳಿತ ವೈಫಲ್ಯವನ್ನು ಜನರ ಮೇಲೆ ಹೇರದಿರಿ. ನಿಮ್ಮ ವಿಚಾರ ಒಪ್ಪಿಲ್ಲ ಅಂತ ಕೋಮು ದ್ವೇಷದ ಹೊಣೆಯನ್ನು ಜನರ ತಲೆಗೆ ಕಟ್ಟುವುದಲ್ಲ. ಮಂಗಳೂರಿನ ಜನರು ಕೋಮುವಾದಿ, ಹಿಂಸಾಕೋರರು ಎಂಬುದಾಗಿ ಬಿಂಬಿಸಬೇಡಿ. ಸೈದ್ಧಾಂತಿಕ ವಿಚಾರದಲ್ಲಿ ಯಾರದ್ದೇ ತಪ್ಪಾದರೂ ಕಾನೂನು ಪ್ರಯೋಗಿಸಿ, ನಿಗ್ರಹ ಮಾಡಿ. ನಾವು ಸರಿ ಮಾಡಿದರೆ ಜನರು ಓಟು ಕೊಡುತ್ತಾರೆ, ಇಲ್ಲದೇ ಇದ್ದರೆ ನಮ್ಮನ್ನು ಮನೆಗೆ ಕಳಿಸುತ್ತಾರೆ. ಎರಡು ವರ್ಷ ಆದರೂ ಸರಿಯಾದ ಮರಳು ನೀತಿಯನ್ನು ಯಾಕೆ ಮಾಡಲಾಗಿಲ್ಲ. ಜಿಲ್ಲೆಯ ಮೈನಿಂಗ್ ಅಧಿಕಾರಿಗಳು ಭ್ರಷ್ಟರಿದ್ದಾರೆ. ಜಿಲ್ಲೆಯ ಮಿನರಲ್ ಫಂಡನ್ನು ನಮ್ಮ ಶಾಸಕರ ಮಾತನ್ನೂ ಕೇಳದೆ ವಿಲೇವಾರಿ ಮಾಡುತ್ತಾರೆ ಎಂದು ಸಂಸದ ಚೌಟ ಅಸಮಾಧಾನ ವ್ಯಕ್ತಪಡಿಸಿದರು. 

ಸಂಸದರು ಕೆಲವು ವಿಚಾರ ಎತ್ತಿದಾಗ, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಾವು ಎಲ್ಲ ಮತೀಯರನ್ನು, ಎಲ್ಲ ಸಂಘ ಸಂಸ್ಥೆಯವರನ್ನೂ ಸಭೆಗೆ ಕರೆದಿದ್ದೇವೆ, ಯಾಕೆ ಆಕ್ಷೇಪ ತೆಗೆಯುತ್ತಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ಹೇಳಿದರು. ಈ ವೇಳೆ, ಆಗಿರುವ ತಪ್ಪನ್ನು ಒಪ್ಪಿಕೊಳ್ಳಿ, ಎಲ್ಲ ಸಂಘಟನೆಯವರನ್ನು ಕರೆದಿಲ್ಲ ತಾನೇ ಎಂದು ಹರೀಶ್ ಪೂಂಜ ಟಾಂಗ್ ಇಟ್ಟರು. ಬಜರಂಗದಳ, ವಿಹಿಂಪದವರನ್ನು ಯಾಕೆ ಕರೆದಿಲ್ಲ. ಅವರಿಗೂ ತಮ್ಮ ಭಾವನೆ ಹೇಳಿಕೊಳ್ಳುವ ಹಕ್ಕು ಇಲ್ಲವೇ, ಹಿಂದು ಸಮಾಜದಲ್ಲಿ ಸ್ವಾಮೀಜಿಗಳು ಇಲ್ಲವೇ ಎಂದು ಭರತ್ ಶೆಟ್ಟಿ ಕೇಳಿದರು.

ಕಠಿಣ ಕ್ರಮದಿಂದಷ್ಟೇ ಶಾಂತಿ ಸಾಧ್ಯ

ಇದೇ ವೇಳೆ, ಎಲ್ಲರ ಮಾತನ್ನು ಆಲಿಸಿದ ಬಳಿಕ ಶಾಸಕ ಅಶೋಕ್ ರೈ ಮಾರ್ಮಿಕ ಮಾತುಗಳನ್ನಾಡಿದರು. ಎಲ್ಲರ ಅಭಿಪ್ರಾಯ ಒಂದೇ ಇದೆ, ಇಲ್ಲಿ ಶಾಂತಿ ನೆಲೆಸಬೇಕು ಅನ್ನೋದಷ್ಟೇ. ಆದರೆ ಈ ಸಭೆಯಿಂದ ಎಷ್ಟು ಫಲಪ್ರದ ಆಗುತ್ತದೆ ಅಂತ ಗೊತ್ತಿಲ್ಲ. ಇದಕ್ಕೆಲ್ಲ ರಾಜಕೀಯ, ಸಂಘಟನೆ ಎಂದು ನೋಡದೆ ಕಠಿಣ ಕ್ರಮದಿಂದಷ್ಟೇ ಸರಿಪಡಿಸಲು ಸಾಧ್ಯ. ಇಲ್ಲಿ ಕೆಲವು ಸ್ವಯಂಘೋಷಿತ ಭಾಷಣಕಾರರಿದ್ದಾರೆ, ಕೊಲೆಗಳಿಗೆ ಫೈನಾನ್ಸ್ ಮಾಡೋರಿದ್ದಾರೆ, ಅದರಿಂದ ದುಡ್ಡು ಮಾಡೋರಿದ್ದಾರೆ, ಎಲ್ಲದಕ್ಕೂ ಕಠಿಣ ಕ್ರಮಗಳನ್ನು ಜರುಗಿಸಿ, ಯಾರಿಗೂ ಪೊಲೀಸರ ಬಗ್ಗೆ ಭಯ ಇಲ್ಲ. ರಾಜಕೀಯ ಬಿಟ್ಟು ಪಕ್ಷಾತೀತವಾಗಿ ಕೆಲಸ ಮಾಡಿ. ಆದರೆ ಪೊಲೀಸರು ಧರ್ಮದ ವಿಚಾರದಲ್ಲಿ ಬರುವುದು ಬೇಡ. ಎಲ್ಲಿ ಬೇಕೋ ಅಲ್ಲಿ ಆಕ್ಷನ್ ಮಾಡಿ ನಮ್ಮ ಬೆಂಬಲ ಇದೆ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article