ಹಾಸನ: ಹೃದಯಾಘಾತ ಕೇಸ್; ನಾಳೆ ಸರ್ಕಾರದ ಕೈಸೇರಲಿದೆ ವೈದ್ಯರ ವರದಿ!
ಮೃತರ ಪೈಕಿ ಬಹುತೇಕರು ಯುವಕರು ಹಾಗೂ ಮಧ್ಯವಯಸ್ಕರೇ ಆಗಿರುವುದು ಆತಂಕಕ್ಕೆ ಕಾರಣವಾಗಿತ್ತು.
ಅಲ್ಲದೇ ಹೃದಯಾಘಾತದ ಸಂಭವನೀಯತೆ ತೀರಾ ಕಡಿಮೆ ಎನ್ನಲಾದ ಮಕ್ಕಳು ಮತ್ತು ಮಹಿಳೆಯರೂ ಸಹ ಹೃದಯಾಘಾತದಿಂದ ಮೃತಪಟ್ಟಿರುವುದು ಜನರಲ್ಲಿ ತೀವ್ರವಾದ ಭಯ ಮೂಡಿಸಿತ್ತು.
ಈ ಹಿಂದೆ ರಚಿಸಿದ್ದ ತಜ್ಞರ ಸಮಿತಿಯು ಕೋವಿಡ್ ಲಸಿಕೆಯು ಹೃದಯಾಘಾತಕ್ಕೆ ಕಾರಣವಲ್ಲ ಎಂದು ವರದಿ ನೀಡಿತ್ತು. ಬದಲಾದ ಜೀವನ ಶೈಲಿ, ಸಿಗರೇಟ್ ಮುಂತಾದ ದುಶ್ಚಟಗಳು, ಒತ್ತಡ ಹಾಗೂ ಅನಿಯಮಿತ , ಅಪೌಷ್ಠಿಕ ಆಹಾರಾಭ್ಯಾಸಗಳೇ ಹೃದಯಾಘಾತಕ್ಕೆ ಕಾರಣ ಎಂದು ಹೇಳಿತ್ತು. ಬಳಿಕ ಸರ್ಕಾರ ಪ್ರತ್ಯೇಕ ವೈದ್ಯರ ತಂಡವೊಂದನ್ನು ಈ ಕರ್ತವ್ಯಕ್ಕೆ ನಿಯೋಜಿಸಿ ಹತ್ತು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ತಂಡವು ಹೃದಯಾಘಾತಕ್ಕೆ ಬಲಿಯಾದವರ ಕುಟುಂಬಸ್ಥರನ್ನು ಸಂಪರ್ಕಿಸಿ ಅವರ ಹಿನ್ನೆಲೆ, ಜೀವನಶೈಲಿಯ ಬಗ್ಗೆ ಮಾಹಿತಿ ಪಡೆದಿದ್ದರು. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಡಾ. ರವೀಂದ್ರನಾಥ್ ಸಭೆ ಕರೆದಿದ್ದು, ವರದಿ ಸಲ್ಲಿಕೆಯ ಬಗ್ಗೆ ಚರ್ಚೆ ನಡೆಯಲಿದೆ. ಸಭೆ ಮುಗಿದ ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ವರದಿ ಸಲ್ಲಿಸಲಾಗುವುದು.