ಮಂಗಳೂರು :ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್ ಪೂರೈಕೆ ಜಾಲ ; ಮಾಜಿ ಮೆಡಿಕಲ್ ವಿದ್ಯಾರ್ಥಿ ಬಂಧಿಸಿದ ಪೊಲೀಸರು..!!

ಮಂಗಳೂರು, ಜುಲೈ 11 : ಡ್ರಗ್ಸ್ ವಿರುದ್ಧ ನಿರಂತರ ಬೇಟೆಗಿಳಿದಿರುವ ಮಂಗಳೂರು ಪೊಲೀಸರು ಮತ್ತೊಬ್ಬ ಯುವಕನನ್ನು ಅರೆಸ್ಟ್ ಮಾಡಿದ್ದಾರೆ. ಈ ಹಿಂದೆ ಮಂಗಳೂರಿನಲ್ಲಿ ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಪ್ರಜ್ವಲ್ ಪೀಣ್ಯಾಸ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ.
ಪ್ರಜ್ವಲ್ ಮೂಲತಃ ಬೀದರ್ ಜಿಲ್ಲೆಯ ಮಂಗಲಪೇಟ್ ನಿವಾಸಿಯಾಗಿದ್ದು ಹಾಲಿ ಬೆಂಗಳೂರಿನ ಕೆಂಗೇರಿಯ ಕೋಡಿಪಾಳ್ಯದಲ್ಲಿ ನೆಲೆಸಿದ್ದ. ಜುಲೈ 2ರಂದು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಬಂಧಿಸಿ ಮಾದಕ ವಸ್ತು ಸೇವನೆ ಮಾಡುವವರಿಂದ ಹಿಡಿದು ಮಾರಾಟ ಮಾಡೋ ವರೆಗೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಂತ ಹಂತವಾಗಿ ಮಾದಕ ವಸ್ತುಗಳನ್ನು ಮಂಗಳೂರು ನಗರದಲ್ಲಿ ಪೂರೈಕೆ ಮಾಡುವ 09 ಜನರನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಪ್ರಕರಣದ ತನಿಖೆಯ ವೇಳೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದಿಂದ ಮಾದಕ ವಸ್ತುಗಳನ್ನು ಪಡೆದುಕೊಂಡು ಮಂಗಳೂರು ನಗರಕ್ಕೆ ಪೂರೈಕೆ ಮಾಡುತ್ತಿದ್ದವರ ಪೈಕಿ ಪ್ರಮುಖ ಆರೋಪಿತನಾಗಿ ಪ್ರಜ್ವಲ್ ಪಾತ್ರ ಪತ್ತೆಯಾಗಿದೆ.
ಆತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ವಶಪಡಿಸಲಾಗಿದೆ. ಸದ್ರಿ ಪ್ರಕರಣದ ಆರೋಪಿ ಈ ಹಿಂದೆ ಮಂಗಳೂರು ನಗರದ ಫಾದರ್ ಮುಲ್ಲರ್ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದು, ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಮೂರು ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿವೆ.