ಮಂಗಳೂರು: ಒಂದೇ ದಿನ ಅಂತರದಲ್ಲಿ ಹಾರ್ಟ್ ಅಟ್ಯಾಕ್ ಗೆ ಇಬ್ಬರ ಬಲಿ ; ಕರಾವಳಿಗೂ ಹಬ್ಬಿದ ಹೃದಯ ಸ್ತಂಭನದ ಆಘಾತ..!! !

ಮಂಗಳೂರು, ಜುಲೈ 9 : ಸುರತ್ಕಲ್ ವ್ಯಾಪ್ತಿಯಲ್ಲಿ ಸೋಮವಾರ ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಒಬ್ಬರು 18 ವರ್ಷ ವಿದ್ಯಾರ್ಥಿಯಾದರೆ ಮತ್ತೊಬ್ಬರು 45 ವರ್ಷದ ಮಧ್ಯ ವಯಸ್ಕ. ಆರೋಗ್ಯವಾಗಿದ್ದ ಇಬ್ಬರೂ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ಆರೋಗ್ಯದಿಂದಿದ್ದ 18ರ ಹರೆಯದ ಯುವಕ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕೃಷ್ಣಾಪುರದಲ್ಲಿ ಜು.7ರಂದು ಸಂಭವಿಸಿದೆ. ಕೃಷ್ಣಾಪುರ ಹಿಲ್‌ಸೈಡ್ ನಿವಾಸಿ ಅಸ್ಲರ್ ಅಲಿ ಅವರ ಪುತ್ರ ಅಫ್ತಾಬ್ (18) ಮೃತಪಟ್ಟವರು. ಸುರತ್ಕಲ್‌ನಲ್ಲಿ ಎಲೆಕ್ಟಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ತಂದೆ ಆಟೋ ರಿಕ್ಷಾ ಚಾಲಕರಾಗಿದ್ದು, ಮಧ್ಯಾಹ್ನದ ವರೆಗೂ ಮಗನೊಂದಿಗೆ ಮನೆಯಲ್ಲಿದ್ದು, ಬಳಿಕ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಅಫ್ತಾಬ್ ಸ್ನಾನಕ್ಕೆಂದು ಹೊರಡುತ್ತಿದ್ದಂತೆ ಕುಸಿದು ಬಿದ್ದರು ಎನ್ನಲಾಗಿದೆ.
ಅಸ್ಲರ್ ಅಲಿ ಅವರ ನಾಲ್ವರು ಮಕ್ಕಳಲ್ಲಿ ಅಫ್ತಾಬ್ ಏಕೈಕ ಪುತ್ರ. ಮೂವರು ಸಹೋದರಿಯರಿದ್ದು, ಎಲ್ಲರಿಗೂ ವಿವಾಹವಾಗಿದೆ. ತಾಯಿ ಕೋವಿಡ್ ಸಮಯದಲ್ಲಿ ನಿಧನ ಹೊಂದಿದ್ದರು. ತಂದೆ ಮತ್ತು ಮಗ ಮಾತ್ರ ಜತೆಯಲ್ಲಿ ವಾಸಿಸುತ್ತಿದ್ದರು.
45ರ ವ್ಯಕ್ತಿ ಕುಸಿದು ಸಾವು
ಬೈಕಂಪಾಡಿಯಲ್ಲಿ ಆಟೋರಿಕ್ಷಾ ಚಾಲಕರಾಗಿದ್ದ ಅನ್ವರ್ (45) ಅಂಗರಗುಂಡಿಯ ತನ್ನ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸ್ವಲ್ಪ ಸಮಯದ ಹಿಂದೆ ಬೆನ್ನು ನೋವಿಗೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಉಳಿದಂತೆ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆಟೋ ರಿಕ್ಷಾ ಚಲಾಯಿಸುತ್ತ ನಿತ್ಯ ಜೀವನ ನಡೆಸುತ್ತಿದ್ದರು. ರವಿವಾರ ಬೆಳಗ್ಗೆ ಎಂದಿನಂತೆ ಎದ್ದಾಗ ತಲೆಸುತ್ತು ಬಂದಂತಾಗಿ ಕುಸಿದು ಬಿದ್ದಿದ್ದರು. ತತ್‌ಕ್ಷಣ ಕಾರಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರೂ ಪರೀಕ್ಷಿಸಿದ ವೈದ್ಯರು ಅನ್ವರ್ ಮೃತಪಟ್ಟಿರುವುದಾಗಿ ತಿಳಿಸಿಸಿದರು. ಮೃತರು ಪತ್ನಿ, ಮೂವರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದ್ದಾರೆ