ಮಂಗಳೂರು :ಫಾರಿನ್ ಉದ್ಯೋಗ ನೆಪದಲ್ಲಿ ವಂಚನೆ ; ಮುಂಬೈ ಮೂಲದ ಕಂತ್ರಿಗಳಿಗೆ ಕೋಕಾ ಕೇಸು ಜಡಿದ ಮಂಗಳೂರು ಕಮಿಷನರ್,ಏನಿದು ಸ್ಪೆಷಲ್ ಕೋಕಾ ಆಕ್ಟ್ ?

ಮಂಗಳೂರು: ವಿದೇಶದಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ಹೇಳಿ 250ಕ್ಕೂ ಹೆಚ್ಚು ಮಂದಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಬಂಧಿತರಾದ ಮುಂಬೈ ಮೂಲದ ಮೂವರು ಆರೋಪಿಗಳ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಕೋಕಾ ಏಕ್ಟಿನಡಿ ಕೇಸು ದಾಖಲಿಸಿದ್ದಾರೆ.
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಬಗ್ಗೆ ಮಂಗಳೂರಿನ ಕದ್ರಿ ಠಾಣೆಯಲ್ಲಿ ಮತ್ತು ನವಿ ಮುಂಬೈನಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ಸಂಘಟಿತ ನೆಲೆಯಲ್ಲಿ ಅಪರಾಧ ನಡೆಸುತ್ತಿದ್ದಾರೆಂಬ ಆಧಾರದಲ್ಲಿ ಕರ್ನಾಟಕ ಕೋಕಾ ಏಕ್ಟ್ ಅಡಿ ಕೇಸು ದಾಖಲಿಸಲು ಕಮಿಷನರ್ ಸೂಚಿಸಿದ್ದಾರೆ. ಎರಡಕ್ಕಿಂತ ಹೆಚ್ಚು ಕಡೆ ಅಪರಾಧ ಪ್ರಕರಣ ದಾಖಲಾದರೆ ಕೋಕಾ ಏಕ್ಟ್ ಜಾರಿಗೊಳಿಸಬಹುದು. ಇದರ ಪ್ರಕಾರ, ಪೊಲೀಸರಿಗೆ ಮತ್ತಷ್ಟು ಬಲ ಬರುತ್ತದೆ. ಯಾರೇ ಆಗಲಿ ಎರಡಕ್ಕಿಂತ ಹೆಚ್ಚು ಕಡೆ ಕೇಸು ದಾಖಲಾದವರು ಜಾಗ್ರತೆಯಲ್ಲಿರಿ ಎಂದು ಕಮಿಷನರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ದಾಖಲಾದ ಪ್ರಕರಣ ಸಂಬಂಧಿಸಿ ಇತ್ತೀಚೆಗೆ ಸಿಸಿಬಿ ಪೊಲೀಸರು ನವಿ ಮುಂಬೈನ ಕೋಪರ್ ಕೈರಾನೆ ನಿವಾಸಿ ದಿಲ್ ಶಾದ್ ಅಬ್ದುಲ್ ಸತ್ತಾರ್ ಖಾನ್ (45) ಮತ್ತು ಥಾಣೆಯ ದೊಂಬಿವಿಲಿ ನಿವಾಸಿ ಕಿಶೋರ್ ಕುಮಾರ್ ಅಲಿಯಾಸ್ ಅನಿಲ್ ಕುಮಾರ್ (34) ಎಂಬವರನ್ನು ಬಂಧಿಸಲಾಗಿತ್ತು. ಇದಕ್ಕೂ ಹಿಂದೆ ಮುಂಬೈ ಮೂಲದ ಮಸೀವುಲ್ಲಾ ಖಾನ್ ಎಂಬಾತನನ್ನು ಬಂಧನ ಮಾಡಿದ್ದರು. ಇದೀಗ ಮೂವರ ವಿರುದ್ಧವೂ ಕೋಕಾ ಕಾಯ್ದೆಯಡಿ ಕೇಸು ದಾಖಲಾಗಿದೆ.
ಏನಿದು ಕೋಕಾ ಕಾಯ್ದೆ ?
ಸಂಘಟಿತ ಅಪರಾಧಗಳ ನಿಯಂತ್ರ ಕಾಯ್ದೆ 2000 ಪ್ರಕಾರ, ಕೇಸು ದಾಖಲಾದರೆ ಪೊಲೀಸರಿಗೆ ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಲು ಅವಕಾಶ ಸಿಗುತ್ತದೆ. ಆರೋಪಿಗಳನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ಮತ್ತು 180 ದಿನಗಳ ಕಾಲ ಜೈಲಿನಲ್ಲಿರಿಸಲು ಅವಕಾಶ ಇರುತ್ತದೆ. ಹೀಗಾಗಿ ಆರೋಪಿಗಳಿಗೆ ಸುಲಭದಲ್ಲಿ ಜಾಮೀನು ಲಭ್ಯವಾಗದು. ಈ ಕಾಯ್ದೆಯಡಿ ವಿಶೇಷ ನ್ಯಾಯಾಲಯದಡಿ ಕೇಸು ದಾಖಲಿಸಲು ಅವಕಾಶ ಇದೆ. ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆ ವಿರುದ್ಧ ಕ್ರಮ ಜರುಗಿಸಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ನಿಶ್ಚಿತ ಅಪರಾಧಗಳನ್ನೆಸಗಿದರೆ ಆರೋಪಿಗಳ ಆಸ್ತಿಯನ್ನು ಜಪ್ತಿ ಮಾಡಲು ಅವಕಾಶ ಇರುತ್ತದೆ. ಮಹಾರಾಷ್ಟ್ರ ಸರಕಾರ ಜಾರಿಗೆ ತಂದಿದ್ದ ಮೋಕಾ ಕಾಯ್ದೆಯನ್ನು ಮಾದರಿಯಾಗಿಟ್ಟು ಕರ್ನಾಟಕದಲ್ಲಿ ಕೋಕಾ ಏಕ್ಟ್ ತರಲಾಗಿತ್ತು.