ಬೆಂಗಳೂರು :ಎಎಸ್ಪಿ ಬರಮನಿ ಮೇಲೆ ಕೈ ಎತ್ತಿದ ಸಿದ್ದು ; ಕಣ್ಣೀರು ತರಿಸುವ ಭಾವುಕ ಪತ್ರ ಬರೆದ ಆಫೀಸರ್, ಉದ್ದೇಶಪೂರ್ವಕವಾಗಿ ಮಾಡಿಲ್ಲ, ನೋವಾಗಿದ್ದರೆ ಕ್ಷಮಿಸಿ ಎಂದು ಫೋನ್ ಮಾಡಿದ ಸಿಎಂ.

ಬೆಂಗಳೂರು, ಜು 03 : ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಎಎಸ್ಪಿ ಬರಮನಿ ಅವರಿಗೆ ಸಿಎಂ ಸಿದ್ದರಾಮಯ್ಯ ಫೋನ್ ಕರೆ ಮಾಡಿ ಸಮಾಧಾನಪಡಿಸಿದ್ದಾರೆ.
ಏ.28ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನಗೊಂಡು, ವೇದಿಕೆಯಲ್ಲೇ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರಮನಿ ಅವರಿಗೆ ಕೈ ಎತ್ತಿ ರೇಗಿದ್ದರು. ಈ ಹಿನ್ನೆಲೆಯಲ್ಲಿ ನೊಂದಿದ್ದ ಭರಮನಿ ಸ್ವಯಂ ನಿವೃತ್ತಿ ಕೋರಿ ಗೃಹ ಇಲಾಖೆಗೆ ಒಂದು ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು.
ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿಲ್ಲ ಎಂದ ಸಿಎಂ;
ಸಿಎಂ ಸಿದ್ದರಾಮಯ್ಯ ಇದೀಗ ಭರಮನಿ ಅವರಿಗೆ ದೂರವಾಣಿ ಕರೆ ಮಾಡಿ ಸಮಾಧಾನಪಡಿಸಿದ್ದಾರೆ. "ಸ್ವಯಂನಿವೃತ್ತಿ ನಿರ್ಧಾರ ಬೇಡ. ಅದನ್ನು ವಾಪಸ್ ಪಡೆಯಿರಿ. ನಾನು ಅಂದು ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿಲ್ಲ. ನಿಮಗೆ ಅಗೌರವ ತೋರಬೇಕು ಎಂದು ಮಾಡಿದ್ದಲ್ಲ. ಅಪಮಾನ ಮಾಡುವ ಉದ್ದೇಶ ನನಗಿರಲಿಲ್ಲ" ಎಂದು ಮನವರಿಕೆ ಮಾಡಿದ್ದಾರೆ.
ನೋವಾಗಿದ್ದರೆ ಕ್ಷಮಿಸಿ;
"ಅಂದು ಕಾಂಗ್ರೆಸ್ ನಡೆಸಿದ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಹಾಗಾಗಿ ಕೋಪ ಬಂದು ಮಾತನಾಡಿದ್ದೇನೆ. ಯಾವುದೇ ಬೇಸರ ಮಾಡಿಕೊಳ್ಳಬೇಡಿ. ರಾಜೀನಾಮೆ ವಾಪಸ್ ಪಡೆದುಕೊಳ್ಳಿ. ನೋವಾಗಿದ್ದರೆ ಕ್ಷಮಿಸಿ ಎಂದು ಸಿದ್ದು ಸಮಾಧಾನಪಡಿಸಿದ್ದಾರೆ".
ಎಂದಿನಂತೆ ಕರ್ತವ್ಯಕ್ಕೆ ಹಾಜರಾದ ಎಎಸ್ಪಿ ಭರಮನಿ ;
ಎಎಸ್ಪಿ ಭರಮನಿ ಇಂದು ಕರ್ತವ್ಯಕ್ಕೆ ಹಾಜರಾದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ಅವರ ಕಚೇರಿಗೆ ಆಗಮಿಸಿ ಎಂದಿನಂತೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಎಸ್ಪಿ ಡಾ.ಗೋಪಾಲ ಬ್ಯಾಕೋಡ ಅವರೊಂದಿಗೆ ಚರ್ಚಿಸಿ ಬಳಿಕ ಕಚೇರಿಗೆ ಆಗಮಿಸಿದ ಭರಮನಿ ಮಾಧ್ಯಮದವರೊಂದಿಗೆ ಮಾತನಾಡಿದರು.
"ಹಿರಿಯ ಅಧಿಕಾರಿಗಳು ನನ್ನೊಂದಿಗೆ ಮಾತನಾಡಿದ್ದಾರೆ. ನಾನು ಶಿಸ್ತಿನ ಇಲಾಖೆಯಲ್ಲಿದ್ದೇನೆ. ಸಿಎಂ ಸಾಹೇಬ್ರು ಹಾಗೂ ಗೃಹ ಸಚಿವರು ಮಾತನಾಡಿದ್ದಾರೆ. ನಾನು ಯಾವಾಗಲೂ ಮಾಧ್ಯಮಕ್ಕೆ ಮಾತನಾಡಿಲ್ಲ. ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ" ಎಂದರು.
ಕಣ್ಣೀರು ತರಿಸುವ ಭಾವುಕ ಪತ್ರ ಬರೆದಿದ್ದ ಭರಮನಿ :
‘‘ಮಾನ್ಯ ಮುಖ್ಯಮಂತ್ರಿಗಳಿಂದಾದ ಅವಮಾನದಿಂದ ಮನನೊಂದು ಸ್ವಯಂ ನಿವೃತ್ತಿ ಸಲ್ಲಿಸಲು ಮುಂದಾಗಿದ್ದೇನೆ. ನಾನು, ಎನ್. ವಿ. ಬರಮನಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಧಾರವಾಡ. 1994 ನೇ ಸಾಲಿನಲ್ಲಿ ಪಿ.ಎಸ್.ಐ ಆಗಿ ನೇಮಕಗೊಂಡು ಕಳೆದ 31 ವರ್ಷಗಳಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಪಿಎಸ್ಐ ಯಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರೆಗೆ ವಿವಿಧ ಹುದ್ದೆಗಳಲ್ಲಿ ಕಾನೂನು ಬದ್ಧ ಕಾರ್ಯನಿರ್ವಹಿಸುತ್ತ ಬಂದಿರುತ್ತೇನೆ.
ಈ ಘಟನೆಯಿಂದಾಗಿ ನಾನು ಮತ್ತು ನನ್ನ ಪರಿವಾರ ಇನ್ನಿಲ್ಲದಂತೆ ಮಾನಸಿಕವಾಗಿ ಕುಗ್ಗಿ, ಮನೊವೇದನೆಯಿಂದ ಮನೋವ್ಯಾಕುಲತೆಗೆ ಒಳಗಾಗಿದ್ದೇವೆ. ಇದು ನನ್ನೊಬ್ಬನ ಅಳಲಲ್ಲ. ರಾಜ್ಯದ ಸಮವಸ್ತ್ರ ಧರಿಸುವ ಕೆಳಸ್ತರದ ಅಧಿಕಾರಿ ಸಿಬ್ಬಂದಿಗಳಷ್ಟೇ ಅಲ್ಲ, ಸಮಸ್ತ ಸರ್ಕಾರಿ ನೌಕರರ ಅಳಲಾಗಿದೆ. ಮುಖ್ಯ ಮಂತ್ರಿಗಳ ವರ್ತನೆಯಿಂದ ನಾನು ಮಾಡದೇ ಇರುವ ತಪ್ಪಿಗೆ ಸಾರ್ವಜನಿಕವಾಗಿ ನಿಂದನೆಗೆ ಒಳಗಾಗಿ, ಅವಮಾನಗೊಂಡ ನನಗೆ ಅನ್ಯ ಮಾರ್ಗವಿಲ್ಲದೇ ಸ್ವಯಂ ನಿವೃತ್ತಿ ಸಲ್ಲಿಸುತ್ತಿದ್ದು ಇದನ್ನು ಅಂಗೀಕರಿಸಬೇಕೆಂದು ವಿನಂತಿ ಎಂದು ಭರಮನಿ ಭಾವುಕ ಪತ್ರವನ್ನು ಸಿಎಂ ಗೆ ಬರೆದಿದ್ದರು.