ಮಂಗಳೂರು: ದೆಹಲಿಯಿಂದ ಬಂದ ಗೆಳೆಯನನ್ನು ಕರೆತರಲು ರೈಲು ನಿಲ್ದಾಣಕ್ಕೆ ಹೋಗಿದ್ದ ಆಲ್ಟೋ ಕಾರು ಪಲ್ಟಿ ; ಹಿಂಭಾಗದಲ್ಲಿದ್ದ ಪ್ರಯಾಣಿಕರು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯ, ಯುವಕ ಆಸ್ಪತ್ರೆಯಲ್ಲಿ ಸಾವು.

ಮಂಗಳೂರು, ಜುಲೈ 15 : ನಗರದ ಅಡ್ಯಾರ್ ಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಆಲ್ಟೋ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಭಾನುವಾರ ರಾತ್ರಿ ನಡೆದ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಬಗ್ಗೆ ಮುನೀರ್ ಪೊಲೀಸರಿಗೆ ದೂರು ನೀಡಿದ್ದು, ಇವರ ಗೆಳೆಯ ಮಸೂಕ್ ಕೆಲಸದ ನಿಮಿತ್ತ ದೆಹಲಿಗೆ ತೆರಳಿ ಭಾನುವಾರ ರಾತ್ರಿ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದರು. ಅವರನ್ನು ಕರೆತರಲು ಆದಿಲ್ ಅವರ ಆಲ್ಟೋ ಕಾರಿನಲ್ಲಿ ರೈಲ್ವೇ ನಿಲ್ದಾಣಕ್ಕೆ ತೆರಳಿದ್ದರು. ಹಿಂತಿರುಗಿ ಬರುವಾಗ ಕಾರಿನಲ್ಲಿ ಯೂಸುಫ್ ಅರ್ಬಾಜ್, ಮೌಸೂಕ್, ಬಿ.ಎಂ ಅಬ್ದುಲ್, ಆದಿಲ್ ಬರುತ್ತಿದ್ದರು.
ತಡರಾತ್ರಿ ಕಾರು ಅಡ್ಯಾರ್ ಕಟ್ಟೆಯಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ, ಬಾಗಿಲು ತೆರೆಯಲ್ಪಟ್ಟು ಹಿಂಭಾಗದಲ್ಲಿ ಕುಳಿತಿದ್ದ ಮೂವರು ಪ್ರಯಾಣಿಕರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಯೂಸುಫ್ ಅರ್ಬಾಜ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಾಲಕ ಆದಿಲ್ ಸೀಟ್ ಬೆಲ್ಟ್ ಹಾಕಿದ್ದರಿಂದ ಯಾವುದೇ ಗಾಯವಾಗಿರಲಿಲ್ಲ. ಉಳಿದವರು ಸಣ್ಣ ಪುಟ್ಟ ಗಾಯಕ್ಕೀಡಾಗಿದ್ದರು. ಅಡ್ಯಾರ್ ನಿವಾಸಿ ಯೂಸುಫ್ ಸೋಮವಾರ ಸಂಜೆ ಚಿಕಿತ್ಸೆ ಫಲಿಸದೆ ಪಡೀಲ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.