ಬೆಂಗಳೂರು :ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಭಾರತೀಯ ಚಿತ್ರರಂಗದ ಹಿರಿಯ ನಟಿ, ಕನ್ನಡ, ತಮಿಳು, ತೆಲುಗು ಸೇರಿ ಐದು ಭಾಷೆಗಳಲ್ಲಿ ನಟಿಸಿದ್ದ ಡಾ. ಬಿ. ಸರೋಜಾದೇವಿ, ಕಂಬನಿ ಮಿಡಿದ ಇಡೀ ಚಿತ್ರ ರಂಗ..!!

ಬೆಂಗಳೂರು : ಭಾರತೀಯ ಚಿತ್ರರಂಗದ ಹಿರಿಯ ನಟಿ, ಕನ್ನಡ, ತಮಿಳು, ತೆಲುಗು ಸೇರಿ ಐದು ಭಾಷೆಗಳಲ್ಲಿ ನಟಿಸಿದ್ದ ಡಾ. ಬಿ. ಸರೋಜಾದೇವಿ(87) ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಇಡೀ ಚಿತ್ರರಂಗ ಅವರಿಗೆ ಕಂಬನಿ ಮಿಡಿದಿದೆ. 17ನೇ ವಯಸ್ಸಿನಲ್ಲೇ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಸರೋಜಾದೇವಿ ದೀರ್ಘ 68 ವರ್ಷಗಳ ಕಾಲವೂ ನಟಿಸುತ್ತಲೇ ಇದ್ದರು.
ಬೆಂಗಳೂರಿನ ಬೈರಪ್ಪ ಗೌಡ- ರುದ್ರಮ್ಮ ದಂಪತಿಗೆ 1938 ಜನವರಿ 7ರಂದು ಸರೋಜಾದೇವಿ ನಾಲ್ಕನೇ ಮಗಳಾಗಿ ಜನಿಸಿದ್ದರು. ತಂದೆ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಣ್ಣಂದಿನಲ್ಲಿ ಸರೋಜಾ ದೇವಿ ಅವರನ್ನು ಹೆಣ್ಮಗು ಎಂದು ತಾತ ದತ್ತು ನೀಡಲು ಮುಂದಾಗಿದ್ದರು. ಆದ್ರೆ ತಂದೆ ಬೈರಪ್ಪ ವಿರೋಧ ವ್ಯಕ್ತಪಡಿಸಿದ್ದರಂತೆ. ಬಳಿಕ ಸರೋಜಾ ದೇವಿಗೆ ಬಾಲ್ಯದಲ್ಲೇ ಡ್ಯಾನ್ಸ್ ಕಲಿಯೋದಕ್ಕೆ ಉತ್ತೇಜಿಸಿದ್ದಲ್ಲದೆ, ನಟನೆಯನ್ನ ವೃತ್ತಿಯಾಗಿಸಿಕೊಳ್ಳಲು ಸಪೋರ್ಟ್ ಮಾಡಿದ್ದರು. ತಾಯಿ ರುದ್ರಮ್ಮ ಸಿನಿಮಾದಲ್ಲಿ ನಟಿಸುವುದಿದ್ದರೆ, ಸ್ವಿಮ್ಮಿಂಗ್ ಸೂಟ್ ಮತ್ತು ಸ್ಲೀವ್ ಲೇಸ್ ಧರಿಸದಂತೆ ತಾಕೀತು ಮಾಡಿದ್ದರು. ತಾಯಿ ಮಾತನ್ನ ಪಾಲಿಸಿದ ಸರೋಜಾ ದೇವಿ ಯಾವತ್ತೂ ಸಿನಿಮಾದಲ್ಲಿ ಅರೆಬರೆ ಡ್ರೇಸ್ಗಳನ್ನು ಹಾಕಿರಲಿಲ್ಲ. ತಮಿಳು, ತೆಲುಗು, ಕನ್ನಡ ಚಿತ್ರರಂಗದಲ್ಲಿ 1980ರ ವರೆಗೂ ಬಹುಬೇಡಿಕೆಯ ನಟಿಯಾಗಿ ಹೆಸರು ಮಾಡಿದ್ದರು.
1970ರ ವರೆಗೂ ತೆಲುಗು ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿದ್ದರು. 1967ರಲ್ಲಿ ಮದುವೆಯಾದ ಬಳಿಕ ತಮಿಳಿನಲ್ಲಿ ತೊಡಗಿಸಿ ಬಹು ಬೇಡಿಕೆಯ ನಟಿಯಾಗಿದ್ದರು. ಇದರ ನಡುವೆ, ಬಾಲಿವುಡ್ನಲ್ಲೂ ತನ್ನ ಛಾಪು ಮೂಡಿಸಿದ್ದರು. 161 ಸಿನಿಮಾಗಳಲ್ಲಿ ಲೀಡ್ ರೋಲ್ನಲ್ಲಿ ನಟಿಸಿ ಅಭಿನಯ ಸರಸ್ವತಿಯಾಗಿ ಹೆಸರು ಮಾಡಿದ್ದರು.
ಕೈತುಂಬಾ ಸಿನಿಮಾಗಳ ಜೊತೆಗೆ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿರುವಾಗಲೇ ಸರೋಜಾದೇವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜರ್ಮನಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಶ್ರೀಹರ್ಷ ಅವರೊಂದಿಗೆ 1967ರ ಮಾರ್ಚ್ 1ರಂದು ಸಪ್ತಪದಿ ತುಳಿದರು. ಆಗಿನ ಕಾಲಕ್ಕೆ ಅದ್ಧೂರಿಯಾಗಿ ಇವರ ಮದುವೆ ನಡೆದಿತ್ತು. ಮದುವೆಯ ನಂತರ ಪತಿ ಶ್ರೀಹರ್ಷ ಅವರ ಸಹಕಾರದೊಂದಿಗೆ ನಟನೆಯನ್ನು ಮುಂದುವರೆಸಿದ್ದರು. ಆದರೆ, 1986ರಲ್ಲಿ ಹೃದಯಾಘಾತದಿಂದ ಪತಿ ಶ್ರೀಹರ್ಷ ನಿಧನರಾದದ್ದು ನಟಿಯ ಜೀವನದಲ್ಲಿ ಬರಸಿಡಿಲು ಬಡಿದಂತಾಗಿತ್ತು. ಆಬಳಿಕ ಕುಟುಂಬಸ್ಥರು ಒತ್ತಾಯಿಸಿದರೂ ಮರು ಮದುವೆ ಮಾಡಿಕೊಳ್ಳದೆ ಒಬ್ಬಂಟಿಯಾಗೇ ಬದುಕು ನಡೆಸಿದ್ದರು.
ಕಿತ್ತೂರುರಾಣಿ ಚೆನ್ನಮ್ಮ, ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್‌ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ಕಿತ್ತೂರುಚೆನ್ನಮ್ಮ, ದೇವಸುಂದರಿ, ಗೃಹಿಣಿ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸ ಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಸೇರಿದಂತೆ ಹಲವು ಪ್ರಸಿದ್ಧ ಸಿನಿಮಾಗಳಲ್ಲಿ ನಟಿ ಸರೋಜಾ ದೇವಿ ನಟಿಸಿದ್ದಾರೆ. 65 ವರ್ಷಗಳಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ರಾಜಕುಮಾರ್, ತೆಲುಗಿನಲ್ಲಿ ಎಂಜಿಆರ್ ಜೊತೆಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಆ ಕಾಲದಲ್ಲಿ ಸರೋಜಾದೇವಿ ಜನರ ನಡುವೆ ಮನೆಮಾತಾಗಿದ್ದ ನಟಿಯಾಗಿದ್ದರು.