ಮಂಗಳೂರು :ಮುಂಬೈ ಪೊಲೀಸ್ ಅಧಿಕಾರಿಯೆಂದು ಹೆದರಿಸಿ ಮಹಿಳೆಯಿಂದ 61 ಲಕ್ಷ ಪೀಕಿಸಿದ ಖದೀಮ, ನಕಲಿ ಸೈಬರ್ ಪೊಲೀಸ್ ಕಾಟಕ್ಕೆ ಬೇಸತ್ತು ಸಾಲ ಮಾಡಿ ಹಣ ಕೊಟ್ಟ ಬೇಕೂಫ !

ಮಂಗಳೂರು : ಮುಂಬೈ ಪೊಲೀಸ್ ಅಧಿಕಾರಿಯೆಂದು ಹೇಳಿ ಮಹಿಳೆಯೊಬ್ಬರಿಗೆ ಕರೆ ಮಾಡಿ, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ 61 ಲಕ್ಷ ರೂಪಾಯಿ ಕಿತ್ತುಕೊಂಡ ಘಟನೆ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 19ರಂದು ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಸಂದೀಪ್ ಎಂದು ಪರಿಚಯಿಸಿ, ಮುಂಬೈನ ಕೊಲಾಬ ಪೊಲೀಸ್ ಠಾಣೆಯ ಅಧಿಕಾರಿ ಎಂದು ಹೇಳಿಕೊಂಡಿದ್ದ. ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದ್ದ ವ್ಯಕ್ತಿ, ನಿಮ್ಮ ಐಡಿ ಕಾರ್ಡ್ ಬಳಸಿಕೊಂಡು ಮಾನವ ಕಳ್ಳಸಾಗಾಣಿಕೆ, ಡ್ರಗ್ಸ್ ದಂಧೆ, ಮನಿ ಲಾಂಡರಿಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಕೇಸು ದಾಖಲಾಗಿದ್ದು, ನಿಮ್ಮನ್ನು ತನಿಖೆಗೆ ಒಳಪಡಿಸುತ್ತೇವೆ ಎಂದಿದ್ದಾನೆ. ಇದರಿಂದ ಮಹಿಳೆ ತೀವ್ರ ಭಯಗೊಂಡಿದ್ದು, ಅದೇ ದಿನ ಮಧ್ಯಾಹ್ನ ವೇಳೆಗೆ ಮತ್ತೆರಡು ನಂಬರ್ ಗಳಿಂದ ಕರೆ ಮಾಡಿದ ವ್ಯಕ್ತಿಗಳು ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆಂದು ಹೇಳಿ ಮನೆಯವರ ಬಗ್ಗೆ ಮಾಹಿತಿ ಕೇಳಿದ್ದಾರೆ.
ಆನಂತರ, ನಾವು ಕರೆ ಮಾಡಿದ ಮಾಹಿತಿಯನ್ನು ಯಾರಿಗೂ ಹೇಳಬೇಡಿ. ಕೇಸ್ ಆಗಿದ್ದರಿಂದ ಗಂಡನಿಗೆ ತಿಳಿಸಿದಲ್ಲಿ ಆತನ ಕೆಲಸದಿಂದ ತೆಗೆದು ಹಾಕುತ್ತೇವೆ ಎಂದೂ ಬೆದರಿಸಿದ್ದಾರೆ. ನಿಮ್ಮ ಮೇಲಿನ ಕೇಸನ್ನು ಸದ್ಯಕ್ಕೆ ತೊಂದರೆ ಮಾಡುವುದಿಲ್ಲ. ಆದರೆ ನಿಮ್ಮ ಖಾತೆಯಲ್ಲಿರುವ ಮಾಹಿತಿಗಳನ್ನು ಕೊಡಬೇಕು. ಅಲ್ಲಿರುವ ಮೊತ್ತವನ್ನು ಬೇರೊಂದು ಖಾತೆಗೆ ವರ್ಗಾಯಿಸಿ ಡಿಪಾಸಿಟ್ ಮಾಡಿ, ನಾವು ನಿಮ್ಮ ಖಾತೆಗಳನ್ನು ಚೆಕ್ ಮಾಡುತ್ತೇವೆ ಎಂದಿದ್ದಾರೆ. ಮಹಿಳೆ ಇದನ್ನು ನಂಬಿದ್ದು, ಅವರು ನೀಡಿರುವ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸಿದ್ದಾರೆ. ಇದರಂತೆ ಜೂನ್ 21ರಿಂದ ಜುಲೈ 9ರ ವರೆಗೂ ವಿವಿಧ ಬ್ಯಾಂಕ್ ಖಾತೆಗಳಿಗೆ ಮಹಿಳೆ ಬರೋಬ್ಬರಿ 61.15 ಲಕ್ಷ ರೂಪಾಯಿ ಮೊತ್ತವನ್ನು ವರ್ಗಾವಣೆ ಮಾಡಿದ್ದಾರೆ.
ಇಷ್ಟೊಂದು ಹಣವನ್ನು ಆರ್ ಟಿಜಿಎಸ್ ಮಾಡಿದರೂ, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಸಂಶಯಗೊಂಡ ಮಹಿಳೆ ತನ್ನ ಗಂಡನಿಗೆ ಹಾಗೂ ಮಕ್ಕಳಿಗೆ ತಿಳಿಸಿದ್ದಾರೆ. ಇದು ಮೋಸದ ಜಾಲ ಎನ್ನುವುದು ತಿಳಿದು ಬಳಿಕ ಮಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೈಬರ್ ಪೊಲೀಸ್ ಹೆಸರಲ್ಲಿ ಬೆದರಿಸಿ ವಸೂಲಿ
ಮತ್ತೊಂದು ಪ್ರಕರಣದಲ್ಲಿ ಜುಲೈ 2ರಂದು ತನ್ನನ್ನು ಸುಶೀಲ್ ಕುಮಾರ್, ಸೈಬರ್ ಪೊಲೀಸ್ ಅಧಿಕಾರಿಯೆಂದು ಪರಿಚಯಿಸಿ ಕರೆ ಮಾಡಿದ್ದ ಅಪರಿಚಿತನೊಬ್ಬ ಮಂಗಳೂರಿನ ವ್ಯಕ್ತಿಯೊಬ್ಬರನ್ನು ಯಾಮಾರಿಸಿ 1.23 ಲಕ್ಷ ರೂಪಾಯಿ ಹಣ ಪೀಕಿಸಿದ್ದಾನೆ. ತಾನು ಬೆಂಗಳೂರಿನಲ್ಲಿ ಸೈಬರ್ ಪೊಲೀಸ್ ಆಫೀಸರ್ ಆಗಿದ್ದು, ನಿಮ್ಮ ಮೇಲೆ ಕೇಸು ದಾಖಲಾಗಿದೆ ಎಂದು ಹೇಳಿ ಬೆದರಿಸಿದ್ದಾನೆ. ನೀವು ಹಣ ಕೊಟ್ಟರೆ ಕೇಸು ಮುಚ್ಚಿ ಹಾಕ್ತೀನಿ, ಇಲ್ಲಾಂದ್ರೆ ಅರೆಸ್ಟ್ ಮಾಡಬೇಕಾಗುತ್ತದೆ ಎಂದು ಬೆದರಿಸಿದ್ದರಿಂದ ವ್ಯಕ್ತಿ ಭಯ ಪಟ್ಟು ತನ್ನ ಕೈಯಲ್ಲಿದ್ದ ಎರಡು ಸಾವಿರ ಹಣವನ್ನು ಬೇರೊಬ್ಬರಿಗೆ ಕೊಟ್ಟು ಗೂಗಲ್ ಪೇ ಮಾಡಿಸಿದ್ದರು. ಆನಂತರವೂ ಕರೆ ಮಾಡಿ ಬೆದರಿಸಿದ್ದರಿಂದ ಮತ್ತೊಬ್ಬನಲ್ಲಿ ಹೇಳಿ 10 ಸಾವಿರ ಗೂಗಲ್ ಪೇ ಮಾಡಿಸಿದ್ದಾರೆ. ಇದೇ ರೀತಿ ಬೆದರಿಸಿ ಜುಲೈ 2ರಿಂದ 6ರ ನಡುವೆ 1.23 ಲಕ್ಷ ರೂ. ಮೊತ್ತವನ್ನು ಸೈಬರ್ ಪೊಲೀಸ್ ಹೆಸರಲ್ಲಿ ವಸೂಲಿ ಮಾಡಿದ್ದು, ತನ್ನಲ್ಲಿ ಹಣ ಇಲ್ಲದಿದ್ದರೂ ಫೋನ್ ಕರೆಯನ್ನು ನಿಜವೆಂದೇ ನಂಬಿದ ಬೇಕೂಫ ವ್ಯಕ್ತಿ ಬೇರೆಯವರಲ್ಲಿ ಸಾಲ ಪಡೆದು ಹಣ ನೀಡಿ ಮೋಸ ಹೋಗಿದ್ದಾರೆ.