ಮಂಗಳೂರು :ಕಂಪನಿಯ ಎಂಡಿ ಹೆಸರಿನಲ್ಲೇ ವಾಟ್ಸಪ್ ಸೃಷ್ಟಿಸಿ ಯಾಮಾರಿಸಿದ ವಂಚಕ ; 26 ಲಕ್ಷ ವರ್ಗಾಯಿಸಿ ಇಂಗು ತಿಂದ ಮಂಗನಂತಾದ ಅಕೌಂಟೆಂಟ್ ಯುವತಿ!.

ಮಂಗಳೂರು : ಜಾಲತಾಣ ಬಳಸಿಕೊಂಡು ಕಂಪನಿ ಅಧಿಕಾರಿಗಳನ್ನು ಈ ರೀತಿಯೂ ಮೋಸ ಮಾಡಬಹುದು ಅನ್ನೋದಕ್ಕೆ ಸಾಕ್ಷಿಯೆನ್ನುವಂತೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಕಂಪನಿಯೊಂದರ ಎಂಡಿ ಹೆಸರಿನಲ್ಲಿ ನಕಲಿ ವಾಟ್ಸಪ್ ನಂಬರ್ ಸೃಷ್ಟಿಸಿಕೊಂಡು ಅಕೌಂಟೆಂಟ್ ಸಿಬಂದಿಯಿಂದಲೇ ಬೇರೊಂದು ಖಾತೆಗೆ 26 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿದ ಬಗ್ಗೆ ದೂರು ದಾಖಲಾಗಿದೆ.
ಕಂಪನಿಯ ಆಡಳಿತ ನಿರ್ದೇಶಕ ಅರವಿಂದ ಕುಮಾರ್ ಹೆಸರಿನಲ್ಲಿ ಸಂಸ್ಥೆಯ ಮಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡುವ ಅಕೌಂಟೆಂಟ್ ಯುವತಿಯ ವಾಟ್ಸಪ್ ಗೆ ಜುಲೈ 15ರಂದು ಇಂಗ್ಲಿಷ್ ನಲ್ಲಿ ಮೆಸೇಜ್ ಬಂದಿತ್ತು. ಇದು ನನ್ನ ಹೊಸ ವಾಟ್ಸಪ್ ನಂಬರ್, ಸೇವ್ ಮಾಡಿಕೊಳ್ಳಿ ಎಂದಿತ್ತು. ಕಂಪನಿಯ ಹಣದ ವಹಿವಾಟು ಎಲ್ಲ ನೋಡಿಕೊಂಡಿದ್ದ ಯುವತಿ ವಾಟ್ಸಪ್ ಡಿಪಿಯಲ್ಲಿ ಅಸಲಿ ಎಂಡಿ ಅರವಿಂದ್ ಅವರದ್ದೇ ಫೋಟೋ ಇದ್ದುದರಿಂದ ಇವರದ್ದೇ ಮೆಸೇಜ್ ಎಂದು ನಂಬಿದ್ದರು. ಯುವತಿ ನಂಬರನ್ನು ಸೇವ್ ಮಾಡಿಕೊಂಡಿದ್ದರು. ಜುಲೈ 16ರಂದು ಕಂಪನಿಯ ಖಾತೆಯಲ್ಲಿ ಎಷ್ಟು ಹಣ ಇದೆಯೆಂದು ಚೆಕ್ ಮಾಡಿ ಹೇಳುವಂತೆ ಸೂಚನೆ ಬಂದಿತ್ತು. ಇತ್ತ ಯುವತಿ ಕಂಪನಿ ಖಾತೆ ಚೆಕ್ ಮಾಡಿ ಹಣ ಇರುವ ಬಗ್ಗೆಯೂ ಆ ಕುರಿತ ವಿವರಗಳನ್ನೂ ವಾಟ್ಸಪ್ ಮಾಡಿದ್ದಳು.
ಆನಂತರ, ಬೇರೊಂದು ಪ್ರಾಜೆಕ್ಟ್ ಫೈನಲ್ ಮಾಡಿದ್ದು ಮುಂಗಡ ಹಣ ನೀಡಬೇಕಿದೆ. ಅದಕ್ಕಾಗಿ ತಾನು ಕಳಿಸುವ ಯೆಸ್ ಬ್ಯಾಂಕ್ ಖಾತೆಗೆ 26 ಲಕ್ಷ ಹಣವನ್ನು ಕೂಡಲೇ ನೆಫ್ಟ್ ಮಾಡುವಂತೆ ವಾಟ್ಸಪ್ ಮೆಸೇಜ್ ಮಾಡಿ ಸೂಚಿಸಲಾಗಿತ್ತು. ಇದನ್ನು ನಂಬಿದ ಅಕೌಂಟೆಂಟ್ ಯುವತಿ, ಅಸಲಿ ಎಂಡಿ ಅರವಿಂದ್ ಅವರೇ ಈ ಸೂಚನೆ ನೀಡಿದ್ದಾರೆಂದು ಭಾವಿಸಿ 26 ಲಕ್ಷವನ್ನು ಅಪರಿಚಿತ ಸೂಚಿಸಿದ ಖಾತೆಗೆ ನೆಫ್ಟ್ ಮಾಡಿದ್ದರು. ಹಣ ವರ್ಗಾವಣೆ ಆಗಿರುವುದನ್ನು ತಿಳಿದ ಅಸಲಿ ಎಂಡಿ ಅರವಿಂದ್ ಕುಮಾರ್, ಅಕೌಂಟೆಂಟ್ ಬಳಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ಅಪರಿಚಿತನ ಕರಾಮತ್ತು ತಿಳಿದುಬಂದಿದೆ. ಈ ಬಗ್ಗೆ ಕಂಪನಿಯ ಮ್ಯಾನೇಜರ್ ಜೆಸಿ ಪಾಟೀಲ್ ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಸದ್ರಿ ಅಕೌಂಟೆಂಟ್ ಒಂದು ವರ್ಷದಿಂದ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಯಾರು ಲೋಪ ಎಸಗಿದ್ದಾರೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.