ಬೆಂಗಳೂರು :ನಂದಿನಿ ಪೂರೈಕೆಯಲ್ಲಿ 21 ಕೋಟಿ ರೂ. ಅಕ್ರಮ? ಬಮುಲ್‌ ಅಧಿಕಾರಿಗಳ ಕರಾಮತ್ತು..!!

ಬೆಂಗಳೂರು :ನಂದಿನಿ ಪೂರೈಕೆಯಲ್ಲಿ 21 ಕೋಟಿ ರೂ. ಅಕ್ರಮ? ಬಮುಲ್‌ ಅಧಿಕಾರಿಗಳ ಕರಾಮತ್ತು..!!

ರಾಮನಗರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ (ಬಮುಲ್‌) ಚೆನ್ನೈ ಮಾರುಕಟ್ಟೆಗೆ ಹಾಲು ಪೂರೈಸುವ ಹೆಸರಿನಲ್ಲಿ ಸುಮಾರು 21 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

2019ರ ಮಾರ್ಚ್ನಿಂದ 2023 ರವರೆಗೂ ನಡೆದ ಈ ವ್ಯವಹಾರದಲ್ಲಿ ಅಧಿಕಾರಿಗಳು ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆ. ಬಮುಲ್‌ ಆಡಳಿತ ಮಂಡಳಿ ಗಮನಕ್ಕೆ ತರದೇ ನಿಯಮ ಬಾಹಿರವಾಗಿ ಚೆನ್ನೈನ ಹಾಲು ಗುತ್ತಿಗೆಯನ್ನು ಚೆನ್ನೈ ಮೂಲದ ಆರ್‌ಕೆಆರ್‌ ಡೇರಿ ಪ್ರಾಡಕ್ಟ್ಸ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ನಿಯಮಾನುಸಾರ ಟೆಂಡರ್‌ ಕರೆಯದೆ ಚೆನ್ನೈ ಮಾರುಕಟ್ಟೆಯಲ್ಲಿ ನಂದಿನಿ ಹಾಲು ಮಾರಾಟದ ಗುತ್ತಿಗೆ ನೀಡಿದ್ದಾರೆ. ಒಕ್ಕೂಟದಿಂದ ಪ್ರತಿನಿತ್ಯ ಟ್ಯಾಂಕರ್‌ಗಳಲ್ಲಿ ಚೆನ್ನೈಗೆ ಹಾಲು ಕಳುಹಿಸಲಾಗಿದೆ. ಈ ಹಾಲನ್ನು ಆರ್‌ಕೆಆರ್‌ ಸಂಸ್ಥೆಯು ಪ್ಯಾಕಿಂಗ್‌ ಮಾಡಿ ಮಾರಾಟ ಮಾಡಿದೆ. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು 2019ರ ಸೆ.3ರಿಂದ ಅನ್ವಯವಾಗುವಂತೆ ಆರ್‌ಕೆಆರ್‌ ಸಂಸ್ಥೆಗೆ ಪ್ರೋತ್ಸಾಹ ಧನದ ರೂಪದಲ್ಲಿ ಕೋಟ್ಯಂತರ ರೂ. ಪಾವತಿಸಿದ್ದಾರೆ.

ದರ ನಿಗದಿಯ ಕಳ್ಳಾಟ:
ಒಕ್ಕೂಟದ ಅಧಿಕಾರಿಗಳು ಆರಂಭದಲ್ಲಿ 2019ರ ಮಾರ್ಚ್ 4ರಂದು ಚೆನ್ನೈ ಮಾರುಕಟ್ಟೆಯಲ್ಲಿ ನಂದಿನಿ ಹಾಲಿಗೆ ಪ್ರತಿ ಲೀಟರ್‌ಗೆ 35 ರೂ. ಮಾರಾಟ ದರ ನಿಗದಿಪಡಿಸಿದ್ದಾರೆ. ನಂತರ 2019ರ ಸೆ.23 ಮತ್ತು 2020ರ ಫೆ. 2ರಂದು ಕ್ರಮವಾಗಿ ಲೀಟರ್‌ 45 ರೂ.ಗೆ ಹಾಗೂ 48 ರೂ.ಗೆ ಏರಿಕೆ ಮಾಡಿದ್ದಾರೆ. ಆದರೆ, ಚೆನ್ನೈ ಮಾರುಕಟ್ಟೆಯಲ್ಲಿ ಇತರೆ ಬ್ರ್ಯಾಂಡ್‌ಗಳ ಹಾಲಿನ ದರಕ್ಕಿಂತಲೂ ನಂದಿನಿ ಹಾಲಿಗೆ ಕಡಿಮೆ ದರ ನಿಗದಿಪಡಿಸಿ ಆರ್‌ಕೆಆರ್‌ ಸಂಸ್ಥೆಗೆ ಲಾಭ ಮಾಡಿಕೊಟ್ಟಿದ್ದಾರೆ.

ಈ ಆದೇಶಕ್ಕೂ ಮುನ್ನ ಅಧಿಕಾರಿಗಳು ಇತರೆ ಬ್ರ್ಯಾಂಡ್‌ಗಳ ಹಾಲಿಗಿಂತ ಕಡಿಮೆ ಬೆಲೆಗೆ ನಂದಿನಿ ಹಾಲನ್ನು ಮಾರಾಟ ಮಾಡಿ, ಚೆನ್ನೈ ಮೂಲಕ ಸಂಸ್ಥೆಯಿಂದ ಕಮಿಷನ್‌ ರೂಪದಲ್ಲಿ ಜೇಬು ತುಂಬಿಸಿಕೊಂಡಿದ್ದಾರೆ. ಅಲ್ಲದೆ, ಹಾಲಿನ ದರ ಪರಿಷ್ಕರಣೆಗೆ ಒಕ್ಕೂಟದ ಆಡಳಿತ ಮಂಡಳಿಯ ಅನುಮೋದನೆ ಪಡೆದಿಲ್ಲ ಮತ್ತು ಈ ಸಂಗತಿಯನ್ನು ಆಡಳಿತ ಮಂಡಳಿಯ ಗಮನಕ್ಕೂ ತಂದಿಲ್ಲ.
ಪ್ರೋತ್ಸಾಹಧನದ ಗೋಲ್‌ಮಾಲ್‌
ಆರ್‌ಕೆಆರ್‌ ಸಂಸ್ಥೆಗೆ 2019ರ ಸೆ.3ರಿಂದ ಅನ್ವಯವಾಗುವಂತೆ ಪ್ರೋತ್ಸಾಹ ಧನದ ರೂಪದಲ್ಲಿ ಪ್ರತಿ ಲೀ. ಹಾಲಿಗೆ ಹೆಚ್ಚುವರಿಯಾಗಿ 2 ರೂ. ಮತ್ತು 2021ರ ಸೆ.26 ರಿಂದ ಅನ್ವಯವಾಗುವಂತೆ 1 ರೂ. ಪಾವತಿಸಲಾಗಿದೆ. ಅಲ್ಲದೆ, 2019ರ ಫೆ.19ರಿಂದ ಈ ಸಂಸ್ಥೆಗೆ ಆರಂಭಿಕ ವ್ಯವಹಾರದ ಉತ್ತೇಜನಕ್ಕಾಗಿ ಪ್ರತಿ 12 ಲೀಟರ್‌ (ಕ್ರೇಟ್‌) ಹಾಲಿಗೆ ಒಂದು ಲೀಟರ್‌ ಮತ್ತು ಪ್ರತಿ 12 ಲೀಟರ್‌ (ಕ್ರೇಚ್‌) ಮೊಸರಿಗೆ ಒಂದು ಲೀಟರ್‌ ಮೊಸರನ್ನು ಉಚಿತವಾಗಿ ನೀಡಲಾಗಿದೆ.

ಈ ಅಕ್ರಮ ಸಂಬಂಧ ಚಂದನ್‌ರಾವ್‌ ಎಂಬುವವರು ಲೋಕಾಯುಕ್ತಗೆ ದೂರು ನೀಡಿದ್ದಾರೆ. ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತದ ನ್ಯಾಯಾಂಗ ವಿಭಾಗವು, ಈ ಸಂಬಂಧ ಜು. 4ರಂದು ವಿಚಾರಣೆಗೆ ಹಾಜರಾಗುವಂತೆ ಬಮೂಲ್‌ ಎಂಡಿ ಆಗಿರುವ ಡಾ.ಎಸ್‌.ಟಿ.ಸುರೇಶ್‌ಗೆ ನೋಟಿಸ್‌ ನೀಡಿದೆ.

Ads on article

Advertise in articles 1

advertising articles 2

Advertise under the article