ಮಂಗಳೂರು: ಅಪಘಾತದಲ್ಲಿ ಕಾಲು ಮುರಿದು ತೀವ್ರ ಸಮಸ್ಯೆಗೀಡಾಗಿದ್ದ 200 ಕೇಜಿಯ ವ್ಯಕ್ತಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆ ; ಕೆಲವೇ ದಿನಗಳಲ್ಲಿ ರೋಗಿ ಚೇತರಿಕೆ, ಕ್ಲಿಷ್ಟ ಸವಾಲು ಭೇದಿಸಿದ ಅತ್ತಾವರ ಕೆಎಂಸಿ ವೈದ್ಯರು..!

ಮಂಗಳೂರು, ಜುಲೈ 8 : ಅಪಘಾತಕ್ಕೀಡಾಗಿ ಕಾಲು ಮುರಿತಕ್ಕೊಳಗಾಗಿದ್ದ ತೀವ್ರ ರೀತಿಯ ಬೊಜ್ಜಿನಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ 39 ವರ್ಷದ ವ್ಯಕ್ತಿಯೊಬ್ಬರಿಗೆ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಸಂಕೀರ್ಣ ಮತ್ತು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಆಮೂಲಕ ಆಸ್ಪತ್ರೆ ಅಪರೂಪದ ಸಾಧನೆಯನ್ನು ಮಾಡಿದಂತಾಗಿದೆ.
ಸುಮಾರು 200 ಕೇಜಿ ತೂಕ ಹೊಂದಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಕೆಳಕಾಲಿನ ಮೂಳೆ ಮುರಿತಕ್ಕೊಳಗಾಗಿ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಧಡೂತಿ ದೇಹದಿಂದಾಗಿ ಉಸಿರಾಟ ಸಮಸ್ಯೆ ಮತ್ತು ದೇಹದ ಅಂಗಾಂಶಗಳಿಗೆ ಆಮ್ಲಜನಕ ಪೂರೈಕೆಯಾಗದೆ, ಶ್ವಾಸಕೋಶದ ಸಾಮರ್ಥ್ಯವೂ ಕುಸಿದಿದ್ದರಿಂದ ದೀರ್ಘ ಕಾಲೀನ ಸಮಸ್ಯೆ ಎದುರಿಸುತ್ತಿದ್ದ ಅವರಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೆ ಸವಾಲಾಗಿತ್ತು. ವೈದ್ಯಕೀಯ ಸವಾಲನ್ನು ತಕ್ಷಣ ಅರ್ಥ ಮಾಡಿಕೊಂಡ ಆಸ್ಪತ್ರೆಯ ವೈದ್ಯರು ಕೂಡಲೇ ಬಹು ವೈದ್ಯಕೀಯ ವಿಭಾಗದಿಂದ ಚಿಕಿತ್ಸೆ ಆರಂಭಿಸಿದ್ದರು. ಅರಿವಳಿಕೆ ವಿಭಾಗದ ಡಾ.ಅಕ್ಷತಾ ಮತ್ತು ಶ್ವಾಸಕೋಶ ತಜ್ಞ ಡಾ.ವಿಶಾಕ್ ಆಚಾರ್ಯ ಸಲಹೆಯಂತೆ ದೇಹ ಸ್ಥಿತಿಯನ್ನು ಸ್ಥಿರತೆಗೆ ತಂದು ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು.
ಆಬಳಿಕ ಆರ್ಥೋಪೆಡಿಕ್ ವಿಭಾಗದ ಡಾ.ಆತ್ಮಾನಂದ ಹೆಗ್ಡೆ ನೇತೃತ್ವದಲ್ಲಿ ಡಾ.ಚೇತನ್ ಶೆಟ್ಟಿ ಹಾಗೂ ಡಾ.ಕೀರ್ತನ್ ರಂಗ ನಾಯಕ್ ಅವರಿದ್ದ ವೈದ್ಯರ ತಂಡವು ರೋಗಿಯ ಕೆಳಕಾಲಿನ ಮೂಳೆ ಸರಿಪಡಿಸಲು ಚಿಕಿತ್ಸೆ ಆರಂಭಿಸಿತ್ತು. ಅಪರಿಮಿತ ಬೊಜ್ಜು ಮತ್ತು ಸಂಕೀರ್ಣ ಸ್ಥಿತಿಯಲ್ಲಿ ದೇಹದ ಸ್ಥಿರತೆ ಕಾಯ್ದುಕೊಳ್ಳುವ ಸವಾಲಿನ ಜೊತೆಗೆ ಡಾ.ಸುಮೇಶ್ ಟಿ. ರಾವ್ ಅರಿವಳಿಕೆ ಒದಗಿಸಿದ್ದರು. ಶಸ್ತ್ರಚಿಕಿತ್ಸೆಯುದ್ದಕ್ಕೂ ರೋಗಿಗೆ ಕೃತರ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಚಕ್ರಪಾಣಿ ಮತ್ತು ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಮಡಿ ಅವರ ಸಾಮೂಹಿಕ ಪ್ರಯತ್ನದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ರೋಗಿ ಶೀಘ್ರ ಚೇತರಿಕೆ ಕಂಡಿದ್ದಾರೆ. ಶಸ್ತ್ರಚಿಕಿತ್ಸೆಯಾದ ಎರಡೇ ದಿನದಲ್ಲಿ ತೀವ್ರ ನಿಗಾ ಘಟಕದಿಂದ ರೋಗಿಯನ್ನು ಸಾಮಾನ್ಯ ವಾರ್ಡಿಗೆ ಶಿಫ್ಟ್ ಮಾಡಲಾಗಿದ್ದು, ಆನಂತರ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೆಎಂಸಿ ವೈದ್ಯರ ಸಾಮೂಹಿಕ ಪ್ರಯತ್ನ ಮತ್ತು ಬದ್ಧತೆಯಿಂದಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಲಾಗಿದ್ದು, ಆಮೂಲಕ ತೀವ್ರ ಬೊಜ್ಜಿನಿಂದಾಗಿ ಬದುಕುವುದೇ ಸವಾಲು ಎಂದೆನಿಸಿದ್ದ ಪ್ರಕರಣವನ್ನು ವೈದ್ಯರು ಸಲೀಸಾಗಿ ನಿರ್ವಹಿಸಿ ಸಾಧನೆ ಮೆರೆದಿದ್ದಾರೆ.