ಸುರತ್ಕಲ್: ಮಧ್ಯ ಖಾಸಗಿ ಬಸ್‌ಗಳ ಮುಖಾಮುಖಿ ಡಿಕ್ಕಿ, 15 ವಿದ್ಯಾರ್ಥಿಗಳು, 5 ಶಿಕ್ಷಕಿಯರು ಸೇರಿ 28 ಮಂದಿಗೆ ಗಾಯ,ಹಲವರ ಕಿತ್ತುಹೋದ ಹಲ್ಲು; ಚಾಲಕರು ಅಪಾಯದಿಂದ ಪಾರು..!!

ಮಂಗಳೂರು, ಜುಲೈ 2 : ಸುರತ್ಕಲ್ ಸಮೀಪದ ಮಧ್ಯ ವಾಲ್ಮೀಕಿ ವಸತಿ ಶಾಲೆಯ ಸಮೀಪ ಖಾಸಗಿ ಬಸ್‌ಗಳೆರಡು ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ಬುಧವಾರ ಬೆಳಗ್ಗೆ ನಡೆದಿದ್ದು ಹೈಸ್ಕೂಲ್, ಪಿಯುಸಿ ವಿದ್ಯಾರ್ಥಿಗಳು, ಶಿಕ್ಷಕಿಯರು ಸೇರಿ 28 ಮಂದಿ ಗಾಯಗೊಂಡಿದ್ದಾರೆ.
ಬೆಳಗ್ಗೆ 9ರ ಸುಮಾರಿಗೆ ಘಟನೆ ನಡೆದಿದ್ದು ಎರಡೂ ಬಸ್‌ನಲ್ಲಿ ಶಾಲಾ ಮಕ್ಕಳು ಸೇರಿದಂತೆ ಅನೇಕ ಪ್ರಯಾಣಿಕರಿದ್ದರು. ಅಪಘಾತದ ದೃಶ್ಯ ಒಂದು ಬಸ್ಸಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮಂಗಳೂರಿನ ಸ್ಟೇಟ್ ಬ್ಯಾಂಕ್ ಕಡೆಯಿಂದ ಚೇಳಾಯರಿಗೆ ತೆರಳುತ್ತಿದ್ದ ನಂದನ್ ಹೆಸರಿನ ಬಸ್ ನೇರವಾಗಿ ಬಂದು ಡಿಕ್ಕಿಯಾಗುವುದು ಕಾಣುತ್ತದೆ. ಎರಡೂ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಎರಡೂ ಬಸ್ಸಿನ ಚಾಲಕರು ಹೆಚ್ಚಿನ ಅಪಾಯಗಳಿಲ್ಲದೆ ಪಾರಾಗಿದ್ದಾರೆ. ಶಾಜಿ ಮತ್ತು ಮಹಮ್ಮದ್ ಮುರ್ಶಿದ್ ಎಂಬ ಇಬ್ಬರೂ ಚಾಲಕರು ಸಣ್ಣ ಪುಟ್ಟ ಗಾಯಕ್ಕೀಡಾಗಿದ್ದಾರೆ. ಒಬ್ಬನ ಕೈಗೆ ರಾಡ್ ಒಡೆದ ಏಟು ಬಿದ್ದಿದೆ. ಇಲೆಕ್ಟ್ ಹೆಸರಿನ ಮತ್ತೊಂದು ಬಸ್ ಚೇಳಾರಿನಿಂದ ಬಜ್ಪೆ ಕಡೆಗೆ ತೆರಳುತ್ತಿತ್ತು. ಎರಡು ಬಸ್ಸಿನಲ್ಲು 30ರಷ್ಟು ಪ್ರಯಾಣಿಕರು ಇದ್ದರು.
ಅಪಘಾತಕ್ಕೆ ಒಂದು ಬಸ್ಸಿನ ಸ್ಟೇರಿಂಗ್ ಜಾಮ್ ಆಗಿದ್ದು ಕಾರಣ ಎಂದು ಚಾಲಕರು ಹೇಳಿದ್ದಾರಂತೆ. ಆದರೆ ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಎರಡೂ ಬಸ್ಸಿನಲ್ಲಿದ್ದ ಇಬ್ಬರು ಹೈಸ್ಕೂಲ್, ಒಬ್ಬ ಪಿಯುಸಿ, ಶ್ರೀನಿವಾಸ್ ಕಾಲೇಜಿನಲ್ಲಿ ಎಂಎಸ್ ಡಬ್ಲ್ಯು ಓದುತ್ತಿದ್ದ 11 ಮಂದಿ ಗಾಯಗೊಂಡಿದ್ದಾರೆ. ಒಟ್ಟು 28 ಮಂದಿ ಗಾಯಗೊಂಡಿದ್ದು ಇದರಲ್ಲಿ ಐವರು ಶಿಕ್ಷಕಿಯರೂ ಇದ್ದಾರೆ. 2-3 ಮಂದಿಯ ಮುಖಕ್ಕೆ ಏಟು ಬಿದ್ದು ಹಲ್ಲು ಮುರಿದಿದೆ. ಒಂದು ಮಗುವಿಗೆ ಗಂಭೀರ ಗಾಯವಾಗಿದೆ ಎಂದು ಸುರತ್ಕಲ್ ಸಂಚಾರಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಸ್ ಚಾಲಕರು ಪರಸ್ಪರ ಸರಿಯಾದ ಸಮಯಕ್ಕೆ ಬ್ರೇಕ್ ಹಾಕದೇ ಇದ್ದಿದ್ದರೆ ಅಪಾಯ ಸಂಭವಿಸಬಹುದಿತ್ತು ಎಂದು ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಪರಿಸರದಲ್ಲಿ ಕೆಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುರತ್ಕಲ್ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.