ಉಡುಪಿ :ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪಾಟ, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ; ಚಾಲಕ ಮತ್ತು ಬಸ್ಸನ್ನು ವಶಕ್ಕೆ ಪಡೆದ ಪೊಲೀಸರು.
ಉಡುಪಿ : ಖಾಸಗಿ ಬಸ್ಸನ್ನು ಅಡ್ಡಾದಿಡ್ಡಿ ಚಲಾಯಿಸಿ, ಹಠಾತ್ ಬ್ರೇಕ್ ತುಳಿದು ಇಡೀ ಬಸ್ಸೇ ಒಂದು ಸುತ್ತು ಬರುವಂತೆ ಮಾಡಿ ಪ್ರಯಾಣಿಕರ ಜೀವದ ಚೆಲ್ಲಾಟವಾಡಿದ ಖಾಸಗಿ ಬಸ್ ಚಾಲಕನನ್ನು ಉಡುಪಿ ಸಂಚಾರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಸ್ ಚಾಲಕ ದೇವರಾಜ್ ಮತ್ತು ಆತ ಚಲಾಯಿಸುತ್ತಿದ್ದ ದುರ್ಗಾಂಬಾ ಹೆಸರಿನ ಬಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸ್ ಚಾಲಕ ದೇವರಾಜ್ ಜೂನ್ 17 ರಂದು ಶ್ರೀ ದುರ್ಗಾಂಬ ಖಾಸಗಿ ಬಸ್ ಅನ್ನು ಕರಾವಳಿ ಬೈಪಾಸ್ ಕಡೆಯಿಂದ ಉಡುಪಿ ಕಡೆಗೆ ಅತಿ ವೇಗದಿಂದ ಚಲಾಯಿಸುತ್ತ ಬಂದಿದ್ದಾನೆ. ಎದುರಿಗೆ ಕಾರು ಬಂದಿದ್ದರಿಂದ ಹಠಾತ್ ಬ್ರೇಕ್ ತುಳಿದಿದ್ದು ಈ ವೇಳೆ ನಿಯಂತ್ರಣ ತಪ್ಪಿದ ಬಸ್ ರಸ್ತೆಯ ಮಧ್ಯೆ ಒಂದು ಸುತ್ತು ಹೊಡೆದು ನಿಂತುಬಿಟ್ಟಿದೆ.
ವಿರುದ್ಧ ದಿಕ್ಕಿಗೆ ತಿರುಗಿ ನಿಂತ ಬಸ್ಸನ್ನು ಆರೋಪಿ ಚಾಲಕ ರಸ್ತೆಯ ವಿರುದ್ಧ ದಿಕ್ಕಿನಲ್ಲಿಯೇ ಚಲಾಯಿಸಿಕೊಂಡು ಉಡುಪಿ ಕಡೆಗೆ ಹೋಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಸ್ ಚಾಲಕನ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿ ಚಾಲಕ ದೇವರಾಜ್‌ನನ್ನು ಬಂಧಿಸಿ, ಬಸ್ಸನ್ನು ವಶಕ್ಕೆ ಪಡೆಯಲಾಗಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.